ಮಾಜಿ ಶಾಸಕ ಸುರೇಶ್‌ಗೌಡ ಮೇಲೆ ಹಲ್ಲೆ ಯತ್ನ

ತುಮಕೂರು, ಜೂ. ೧೮- ಖಾಸಗಿ ಹೋಟೆಲ್‌ನಿಂದ ಹೊರ ಬರುತ್ತಿದ್ದ ಮಾಜಿ ಶಾಸಕ ಬಿ. ಸುರೇಶ್‌ಗೌಡರ ಮೇಲೆ ಜೆಡಿಎಸ್ ಕಾರ್ಯಕರ್ತರು ಹಲ್ಲೆಗೆ ಯತ್ನಿಸಿರುವ ಘಟನೆ ನಗರದಲ್ಲಿ ನಡೆದಿದೆ.

ಇಲ್ಲಿನ ಬಿ.ಹೆಚ್. ರಸ್ತೆಯಲ್ಲಿರುವ ಖಾಸಗಿ ಹೋಟೆಲ್‌ನಲ್ಲಿ ಮಾಜಿ ಶಾಸಕ ಬಿ. ಸುರೇಶ್‌ಗೌಡ ಅವರು ಸುದ್ದಿಗೋಷ್ಠಿ ಕರೆದಿದ್ದರು. ಸುದ್ದಿಗೋಷ್ಠಿಯಲ್ಲಿ ತುಮಕೂರು ಗ್ರಾಮಾಂತರ ಕ್ಷೇತ್ರದಲ್ಲಿ ಕಳ್ಳತನ ಪ್ರಕರಣ ಹೆಚ್ಚಾಗುತ್ತಿರುವುದರ ಬಗ್ಗೆ ಮಾಹಿತಿ ನೀಡಿ, ಈ ಕಳ್ಳತನ ಪ್ರಕರಣಗಳ ಹಿಂದೆ ಪೊಲೀಸರು ಶಾಮೀಲಾಗಿದ್ದಾರೆ ಎಂಬ ಶಂಕೆಯನ್ನು ವ್ಯಕ್ತಪಡಿಸಿದರು.

ಅಲ್ಲದೆ ಕ್ಷೇತ್ರದ ಹಾಲಿ ಶಾಸಕ ಡಿ.ಸಿ. ಗೌರಿಶಂಕರ್‌ಗೆ ಮಾಮೂಲಿ ಕೊಡುವ ಹಿನ್ನೆಲೆಯಲ್ಲಿ ಪೊಲೀಸರು ಕಳ್ಳತನಕ್ಕೆ ಶಾಮೀಲಾಗಿದ್ದಾರೆ ಎಂದು ಆರೋಪಿಸಿದರು. ಇದರಿಂದ ಕೆರಳಿದ ಜೆಡಿಎಸ್ ಕಾರ್ಯಕರ್ತರು ಸುದ್ದಿಗೋಷ್ಠಿ ಮುಗಿಸಿಕೊಂಡು ಹೊರ ಬರುತ್ತಿದ್ದ ಮಾಜಿ ಶಾಸಕ ಸುರೇಶ್‌ಗೌಡ ಮೇಲೆ ಏಕಾಏಕಿ ಹಲ್ಲೆಗೆ ಯತ್ನಿಸಿದರು.

ಸ್ಥಳದಲ್ಲಿದ್ದ ಬಿಜೆಪಿ ಕಾರ್ಯಕರ್ತರು ಮತ್ತು ಜೆಡಿಎಸ್ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆದು ಪರಿಸ್ಥಿತಿ ಕೈಕೈ ಮಿಲಾಯಿಸುವ ಹಂತಕ್ಕೆ ತಲುಪಿತು.

ತಕ್ಷಣ ಸ್ಥಳದಲ್ಲಿದ್ದವರು ಎರಡೂ ಪಕ್ಷಗಳ ಕಾರ್ಯಕರ್ತರನ್ನು ಸಮಾಧಾನಪಡಿಸಿದರು. ಆದರೂ ಸುಮ್ಮನಾಗದ ಎರಡೂ ಪಕ್ಷಗಳ ಕಾರ್ಯಕರ್ತರು ಸಮೀಪದಲ್ಲೇ ಇದ್ದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಬಳಿಗೆ ದೂರು ನೀಡಲು ತೆರಳಿದರು ಎಂದು ತಿಳಿದು ಬಂದಿದೆ.

Leave a Comment