ಮಾಜಿ ಶಾಸಕರ ಮೇಲಿನ ಆರೋಪ ಸತ್ಯಕ್ಕೆ ದೂರವಾದದ್ದು; ಸ್ಪಷ್ಟನೆ

ದಾವಣಗೆರೆ, ಜು. 11 – ನಗರದ ಹೈಸ್ಕೂಲ್ ಮೈದಾನದ ಆವರಣದಲ್ಲಿರುವ ಬೀರಲಿಂಗೇಶ್ವರ ದೇವಸ್ಥಾನವು ಮುಜರಾಯಿ ಇಲಾಖೆಗೆ ಸೇರಿದ್ದಾಗಿದೆ. ಮಾಜಿ ಶಾಸಕ ಕೆ.ಮಲ್ಲಪ್ಪ ಅವರು ಯಾವ ಆಸ್ತಿಯನ್ನು ಕಬಳಿಕೆ ಮಾಡಿಲ್ಲವೆಂದು ಶ್ರೀಬೀರಲಿಂಗೇಶ್ವರ ದೇವಸ್ಥಾನ ಜಾಗದ ಅಭಿವೃದ್ದಿ ಟ್ರಸ್ಟ್‍ನ ಖಜಾಂಚಿ ಕೆಂಗೋ ಹನುಮಂತಪ್ಪ ಸ್ಪಷ್ಟನೆ ನೀಡಿದ್ದಾರೆ.
ಪತ್ರಿಕಾಗೋಷ್ಟಿಯಲ್ಲಿಂದು ಮಾತನಾಡಿದ ಅವರು, ದೇವಸ್ಥಾನ ಮುಜರಾಯಿ ಇಲಾಖೆಗೆ ಸೇರಿರುವುದರಿಂದ ಸರ್ಕಾರದಿಂದ ನೇಮಿಸಲ್ಪಟ್ಟ ಸಮಿತಿಯಿದೆ. ಈ ಸಮಿತಿಯೇ ಎಲ್ಲಾ ನೋಡಿಕೊಳ್ಳುತ್ತಿದೆ. ಆದರೆ ಪೂಜಾರ ವಂಶಸ್ಥರು ಎಂದು ಹೇಳಿರುವವರು ಮಲ್ಲಪ್ಪ ಅವರ ಮೇಲೆ ಮಾಡಿರುವ ಆರೋಪ ಸತ್ಯಕ್ಕೆ ದೂರವಾಗಿದೆ. ಅವರ ಬಳಿ ಯಾವುದೇ ದಾಖಲೆಗಳಿಲ್ಲ, ಆಸ್ತಿಯ ಆಸೆಗಾಗಿ ಜಾಗ ನಮ್ಮದು ಎಂದು ಹೇಳಿಕೊಳ್ಳುತ್ತಿದ್ದಾರೆ. ಅವರ ವಿರುದ್ದ ಈಗಾಗಲೇ ದೂರು ನೀಡಿದ್ದೇವೆ. ಮಾಜಿ ಶಾಸಕ ಕೆ.ಮಲ್ಲಪ್ಪ ಅವರು ಸಮಾಜವನ್ನು ಸಂಘಟಿಸಿ ಟ್ರಸ್ಟ್ ಮಾಡಿದ್ದಾರೆ. ದೇವಸ್ಥಾನದ ಸುತ್ತಲೂ ಅಭಿವೃದ್ದಿ ಮಾಡಿಸಿದ್ದಾರೆ. ಅವರ ಖಾತೆಗೆ ಹಣ ಜಮಾ ಮಾಡಿಕೊಂಡಿಲ್ಲ, ಅಥವಾ ದುರುಪಯೋಗ ಮಾಡಿಲ್ಲ, ಅರ್ಚಕ ಲಿಂಗೇಶ್ ಅವರನ್ನು ದೇವಸ್ಥಾನದ ಪರವಾಗಿ ಪೂಜೆಗೆ ನೇಮಿಸಲಾಗಿತ್ತು. ಇದೀಗ ಅವರು ತಮ್ಮ ಸಂಬಂಧಿಕರೆಲ್ಲರನ್ನು ಸೇರಿಸಿಕೊಂಡು ಆಪಾದನೆ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.ದೇವಸ್ಥಾನ ಹಾಗೂ ಸುತ್ತಲಿನ ಜಾಗ ಬೀರದೇವರ ಹೆಸರಿನಲ್ಲಿದೆ. ನೂರಾರು ವರ್ಷಗಳ ಇತಿಹಾಸ ಹೊಂದಿದೆ. ನಮ್ಮ ಬಳಿ ಸಂಪೂರ್ಣ ದಾಖಲಾತಿಗಳು ಇವೆ ಎಂದು ತಿಳಿಸಿದರು.
ಪೂಜಾರ್ ಅಜ್ಜಪ್ಪ ಮಾತನಾಡಿ ಮೊದಲು ನಮ್ಮ ತಂದೆಯವರು ದೇವಸ್ಥಾನದಲ್ಲಿ ಪೂಜೆ ಮಾಡುತ್ತಿದ್ದರು ನಂತರದ ದಿನಗಳಲ್ಲಿ ಲಿಂಗೇಶ್ ಅವರ ತಂದೆಯವರಿಗೆ ವಹಿಸಲಾಗಿತ್ತು. ಅವರ ಕೆಲಸ ಕೇವಲ ಪೂಜೆ ಮಾಡುವುದು ಮಾತ್ರವಾಗಿತ್ತು.ಅದನ್ನು ಬಿಟ್ಟು ಬೇರೆಯಾವ ರೀತಿಯ ಅಧಿಕಾರವಿರಲಿಲ್ಲ. ದೇವಸ್ಥಾನದ ಸುತ್ತಲ ಜಾಗಕ್ಕೂ ಅವರಿಗೂ ಸಂಬಂಧವಿಲ್ಲ ಹಾಗೂ ಯಾವುದೇ ದಾಖಲೆಗಳೂ ಇಲ್ಲ.ಟ್ರಸ್ಟ್ ಬಳಿ ಈ ವಿಷಯ ಪ್ರಸ್ಥಾಪಿಸದೆ ನ್ಯಾಯಾಲಯದಲ್ಲಿ ದೂರು ದಾಖಲಿಸಿದ್ದಾರೆ ಎಂದು ದೂರಿದರು. ಪತ್ರಿಕಾಗೋಷ್ಟಿಯಲ್ಲಿ ಬಿ.ಹೆಚ್.ಪರಶುರಾಮಪ್ಪ, ಬಳ್ಳಾರಿ ಷಣ್ಮುಖಪ್ಪ, ಹೆಚ್.ಬಿ.ಗೋಣೆಪ್ಪ, ಜೆ.ಕೆ.ಕೊಟ್ರಬಸಪ್ಪ, ಹೆಚ್.ಜಿ.ಸಂಗಪ್ಪ, ಎನ್.ಜಿ.ನಿಂಗಪ್ಪ, ವೈ.ವಿರೂಪಾಕ್ಷಪ್ಪ, ಗೌಡ್ರಚನ್ನಬಸಪ್ಪ, ಪೂಜಾರ್ ಅಜ್ಜಪ್ಪ ಸೇರಿದಂತೆ ಸಮಾಜ ಬಾಂಧವರಿದ್ದರು.

Leave a Comment