ಮಹಿಳೆಯ ಹತ್ಯೆ: ಆರೋಪಿ ದಂಪತಿ ಸೆರೆ , ಆರೋಪಿ ಆತ್ಮಹತ್ಯೆ ಯತ್ನ

ಮಂಗಳೂರು, ಮೇ ೧೫- ನಗರದ ಮಂಗಳಾದೇವಿ ಬಳಿಯ ಅಮರ್ ಆಳ್ವ ರಸ್ತೆಯ ನಿವಾಸಿ ಶ್ರೀಮತಿ ಶೆಟ್ಟಿ(೩೭) ಎಂಬವರನ್ನು ಭೀಕರವಾಗಿ ಕೊಲೆಗೈದು ದೇಹವನ್ನು ತುಂಡರಿಸಿ ನಗರದ ವಿವಿಧ ಭಾಗಗಳಲ್ಲಿ ಎಸೆದಿದ್ದ ಪ್ರಕರಣದ ಆರೋಪಿಗಳನ್ನು ಬಂಧಿಸುವಲ್ಲಿ ಜಿಲ್ಲಾ ಪೊಲೀಸರು ಯಶಸ್ವಿಯಾಗಿದ್ದಾರೆ. ಬಂಧಿತರನ್ನು ಸೂಟರ್‌ಪೇಟೆ ೮ನೇ ಅಡ್ಡರಸ್ತೆ ನಿವಾಸಿ ಜೋನಸ್ ಜೂಲಿನ್ ಸ್ಯಾಮ್ಸನ್(೩೬) ಹಾಗೂ ಆತನ ಪತ್ನಿ ವಿಕ್ಟೋರಿಯಾ ಮಥಾಯಿಸ್(೪೬) ಎಂದು ಹೆಸರಿಸಲಾಗಿದೆ. ದಂಪತಿ ಹಾಗೂ ಶ್ರೀಮತಿ ಶೆಟ್ಟಿ ಮಧ್ಯೆ ಹಣಕಾಸಿನ ವ್ಯವಹಾರವಿದ್ದು ಇದೇ ಹಿನ್ನೆಲೆಯಲ್ಲಿ ಕೃತ್ಯ ಎಸಗಿದ್ದಾರೆ ಎಂದು ಪೊಲೀಸ್ ಕಮಿಷನರ್ ಸಂದೀಪ್ ಪಾಟೀಲ್ ಮಾಹಿತಿ ನೀಡಿದ್ದಾರೆ.
ಘಟನೆಯ ಹಿನ್ನೆಲೆ:
ಆರೋಪಿ ಜೂಲಿನ್ ಸ್ಯಾಮ್ಸನ್ ಶ್ರೀಮತಿ ಶೆಟ್ಟಿಗೆ ಪರಿಚಿತನಾಗಿದ್ದು ಆಕೆಯಿಂದ ಹಣವನ್ನು ಸಾಲವಾಗಿ ಪಡೆದುಕೊಂಡಿದ್ದ. ಅದರಲ್ಲಿ ಸ್ವಲ್ಪಹಣ ಹಿಂದಿರುಗಿಸಿದ್ದು ಉಳಿದ ಹಣವನ್ನು ನೀಡಿರಲಿಲ್ಲ. ಶ್ರೀಮತಿ ಶೆಟ್ಟಿ ಆತನಿಗೆ ಕರೆ ಮಾಡಿ ಹಣ ಹಿಂದಿರುಗಿಸುವಂತೆ ಕೇಳಿಕೊಂಡಿದ್ದರು. ಆದರೆ ಹಣ ವಾಪಸ್ ಮಾಡಿರಲಿಲ್ಲ. ಮೇ ೧೧ರ ಶನಿವಾರ ಶ್ರೀಮತಿ ಶೆಟ್ಟಿ ತಾನು ನೀಡಿದ್ದ ಹಣ ವಾಪಸ್ ಪಡೆಯಲು ಆತನ ಮನೆಗೆ ಹೋಗಿದ್ದು ಈ ವೇಳೆ ಮನೆಯೊಳಗೆ ಕರೆಸಿಕೊಂಡ ಜೂಲಿನ್ ಸ್ಯಾಮ್ಸನ್ ಆಕೆಯ ಮೇಲೆ ಮಾರಕಾಯುಧಗಳಿಂದ ದಾಳಿ ನಡೆಸಿ ಕೊಲೆಗೈದಿದ್ದ. ಬಳಿಕ ಮೃತದೇಹವನ್ನು ಮನೆಯಲ್ಲೇ ಇರಿಸಿದ್ದ ಆರೋಪಿಗಳು ಅದನ್ನು ತುಂಡರಿಸಿ ಮರುದಿನ ಮುಂಜಾನೆ ನಗರದ ವಿವಿಧೆಡೆ ರಸ್ತೆ ಬದಿ ಎಸೆದು ಹೋಗಿದ್ದರು. ನಾಪತ್ತೆಯಾಗಿದ್ದ ಶವದ ಕಾಲು ಕದ್ರಿ ಪಾರ್ಕ್ ರಸ್ತೆ ಸಮೀಪದ ಶ್ರೀನಿವಾಸ್ ಮಲ್ಯ ಪಾರ್ಕ್ ಹಿಂಭಾಗದಲ್ಲಿ ಇಂದು ಮುಂಜಾನೆ ಪತ್ತೆಯಾಗಿದ್ದು ಪೊಲೀಸರು ಪರಿಶೀಲನೆ ನಡೆಸಿದ್ದಾರೆ.
ಆರೋಪಿಗಳಿಂದ ಮೃತದೇಹವನ್ನು ಎಸೆಯಲು ಬಳಸಿದ್ದ ಸ್ಕೂಟರ್, ಮೃತ ಶ್ರೀಮತಿ ಶೆಟ್ಟಿ ಧರಿಸಿದ್ದ ೮ ಚಿನ್ನದ ಉಂಗುರಗಳು ಹಾಗೂ ೧ ಚಿನ್ನದ ಚೈನ್ ಅನ್ನು ವಶಕ್ಕೆ ಪಡೆಯಲಾಗಿದೆ. ಆರೋಪಿಗಳನ್ನು ಪತ್ತೆಹಚ್ಚಲು ವಿವಿಧ ತಂತ್ರಜ್ಞಾನಗಳ ಸಹಾಯದಿಂದ ಸಾಧ್ಯವಾಯಿತು ಎಂದು ಕಮಿಷನರ್ ತಿಳಿಸಿದ್ದಾರೆ. ೩೦ ಮಂದಿ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ ಪತ್ತೆಕಾರ್ಯದಲ್ಲಿ ಪಾಲ್ಗೊಂಡಿದ್ದು ಎಲ್ಲರಿಗೂ ಸೂಕ್ತ ಬಹುಮಾನ ನೀಡಲಾಗುವುದು ಎಂದು ಕಮಿಷನರ್ ಹೇಳಿದರು.
ಶ್ರೀಮತಿ ಶೆಟ್ಟಿ ಹತ್ಯೆ ಪ್ರಕರಣದ ಆರೋಪಿ ಜೂಲಿನ್ ಸ್ಯಾಮ್ಸನ್ ಪೊಲೀಸರ ಬಂಧನದ ಭೀತಿಯಿಂದ ಆತ್ಮಹತ್ಯೆಗೆ ಯತ್ನಿಸಿದ್ದು ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ. ಆರೋಪಿಯ ಬಗ್ಗೆ ನಿಖರ ಮಾಹಿತಿ ಕಲೆಹಾಕಿದ ಪೊಲೀಸರು ಆತನ ಬಂಧನಕ್ಕೆ ತೆರಳುವ ಸುದ್ದಿ ತಿಳಿದ ಸ್ಯಾಮ್ಸನ್ ಕೃತ್ಯವೆಸಗಿದ್ದಾನೆ ಎಂದು ತಿಳಿದುಬಂದಿದೆ.

Leave a Comment