ಮಹಿಳೆಯ ಅವಮಾನಿಸಿದ ಸಚಿವರನ್ನು ಸಂಪುಟದಿಂದ ಕೈಬಿಡಲು ಒತ್ತಾಯ

ತಿಪಟೂರು, ಮೇ ೨೩- ಹೋರಾಟಗಾರ್ತಿ, ರೈತ ಮಹಿಳೆಯನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ಅವಮಾನಿಸಿದ ಸಚಿವ ಜಿ.ಸಿ.ಮಾಧುಸ್ವಾಮಿಯನ್ನು ಸಚಿವ ಸಂಪುಟದಿಂದ ಕೈಬಿಡಬೇಕು ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲ್ಲೂಕು ಘಟಕ ಒತ್ತಾಯಿಸಿದೆ.

ಕರ್ನಾಟಕ ರಾಜ್ಯ ರೈತ ಸಂಘ ತಾಲ್ಲೂಕು ಘಟಕದ ಅಧ್ಯಕ್ಷ ಬಸ್ತೀಹಳ್ಳಿ ರಾಜಣ್ಣ, ಸಾರ್ವಜನಿಕವಾದ ಕೆರೆಯ ಒತ್ತುವರಿಯನ್ನು ತೆರವು ಮಾಡಿಕೊಡಬೇಕೆಂದು ಸಂಬಂಧಪಟ್ಟ ಸಚಿವರನ್ನು ಕೇಳಲು ಹೋದಂತಹ ಹೋರಾಟಗಾರ್ತಿಯ ವಿರುದ್ಧ ಕೋಪದಿಂದ ಹರಿಹಾಯ್ದು ಅವಾಚ್ಯ ಕಟು ಶಬ್ದಗಳಿಂದ ನಿಂದಿಸಿ, ಪೊಲೀಸರಿಂದ ಹೊರ ತಳ್ಳಿಸಿರುವ ಘಟನೆ ಖಂಡನೀಯ.

ಇಂತಹ ಸಚಿವರು ಜನಸಾಮಾನ್ಯರ ಕಷ್ಟವನ್ನು ಆಲಿಸುವಂತಹ ಮನಸ್ಥಿಯನ್ನು ಹೊಂದಿರುವುದಿಲ್ಲ. ಇಂತಹವರು ಸಚಿವ ಸಂಪುಟದಲ್ಲಿದ್ದರೆ ಸರ್ಕಾರಕ್ಕೆ ಕಳಂಕ ಬರುತ್ತದೆ. ಆದ್ದರಿಂದ ಕೂಡಲೇ ಸಾರ್ವಜನಿಕ ಕ್ಷಮೆಯಾಚಿಸಿ, ಸಚಿವ ಸಂಪುಟದಿಂದ ಅವರನ್ನು ಕೈಬಿಡುವಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರನ್ನು ಒತ್ತಾಯಿಸಿದ್ದಾರೆ.

ಸಚಿವರಾದವರು ಸಮಸ್ಯೆಗಳನ್ನು ಹೇಳಿಕೊಳ್ಳಲು ಬಂದ ಮಹಿಳೆಯರ ಜತೆ ಹೇಗೆ ವರ್ತಿಸಬೇಕು ಎಂಬ ಸಾಮಾನ್ಯ ಜ್ಞಾನವೂ ಇದ್ದಂತೆ ಕಾಣುವುದಿಲ್ಲ. ಸಮಸ್ಯೆಯನ್ನು ಸಚಿವರ ಬಳಿ ಹೇಳದೇ ಯಾರ ಬಳಿ ಹೇಳಬೇಕು. ತಮ್ಮ ತಪ್ಪನ್ನು ಸರಿ ಎಂದು ಸಮರ್ಥಿಸಿಕೊಳ್ಳುವ ಸಚಿವರ ಇಂತಹ ವರ್ತನೆಗಳು ಹೊಸದೇನಲ್ಲ.

ಇಂತಹವರು ರೈತ ಪರವಾದಂತಹ ಸರ್ಕಾರ ಎಂದು ಹೇಳಿಕೊಳ್ಳುವ ಸಚಿವ ಸಂಪುಟದಲ್ಲಿ ಸಚಿವರಾಗಿ ಇರಲು ಯಾವುದೇ ಅರ್ಹತೆಗಳನ್ನು ಹೊಂದಿರುವುದಿಲ್ಲ. ಆದ್ದರಿಂದ ಕೂಡಲೇ ಸಚಿವ ಸಂಪುಟದಿಂದ ಕೈಬಿಟ್ಟು ಸರ್ಕಾರದ ಘನತೆ, ಗೌರವವನ್ನು ಉಳಿಸಿಕೊಳ್ಳಬೇಕು ಎಂದು ಹಸಿರು ಸೇನೆಯ ತಾಲ್ಲೂಕು ಘಟಕದ ಅಧ್ಯಕ್ಷ ದೇವರಾಜು.ಟಿ.ಎಸ್. ಆಗ್ರಹಿಸಿದ್ದಾರೆ.

Leave a Comment