ಮಹಿಳೆಯರ ಸುರಕ್ಷತೆಗಾಗಿ ಪೊಲೀಸ್ ಇಲಾಖೆಯಿಂದ ಕರಾಟೆ ತರಬೇತಿ

ದಾವಣಗೆರೆ, ಜ. 11 – ಪೊಲೀಸ್ ಇಲಾಖೆ ವತಿಯಿಂದ ಮಹಿಳೆಯರ ಸುರಕ್ಷತೆಗಾಗಿ ಕರಾಟೆ ತರಬೇತಿಯನ್ನು ನೀಡಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಭೀಮಾಶಂಕರ್ ಎಸ್. ಗುಳೇದ್ ಹೇಳಿದರು. ನಗರದ ಎವಿಕೆ ಕಾಲೇಜಿನಲ್ಲಿಂದು ಪೊಲೀಸ್ ಇಲಾಖೆಯಿಂದ ಆಯೋಜಿಸಿದ್ದ ಅಪರಾಧ ತಡೆ ಮಾಸಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ಬೆಂಗಳೂರಿನಂತಹ ಮಹಾನಗರದಲ್ಲಿ ಮಹಿಳೆಯರ ಮೇಲೆ ಅತ್ಯಾಚಾರ, ದೌರ್ಜನ್ಯಗಳು ನಡೆಯುತ್ತಿರುವುದು ವಿಷಾಧನೀಯ. ಎಲ್ಲಿಯವರೆಗೆ ಮಹಿಳೆಯರು ಮಧ್ಯರಾತ್ರಿಯಲ್ಲಿ ಸ್ವತಂತ್ರವಾಗಿ ಸಂಚರಿಸಲು ಸಾಧ್ಯವಾಗುವುದಿಲ್ಲವೊ ಅಲ್ಲಿಯವರೆಗೆ ನಮಗೆ ಸ್ವತಂತ್ರ ಬರುವುದಿಲ್ಲ. ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯಗಳನ್ನು ತಡೆಯಲು ಪೊಲೀಸ್ ಇಲಾಖೆಯೊಂದಿಗೆ ಸಾರ್ವಜನಿಕರು ಸಹಕಾರ ನೀಡುವುದು ಅತ್ಯಗತ್ಯವಾಗಿದೆ. ಪೊಲೀಸ್ ಇಲಾಖೆ ಸಾರ್ವಜನಿಕರ ಸೇವೆಗಾಗಿ ಇದೆ. ಇಲಾಖೆಯ ಬಗ್ಗೆ ಭಯ,ಗೌರವ ಪ್ರತಿಯೊಬ್ಬರಲ್ಲೂ ಇದೆ. ಪೊಲೀಸ್ ಇಲಾಖೆ ಅವಶ್ಯಕತೆ ಇರಬಾರದು ಎಂದರೆ ಕಳ್ಳತನ, ಮಹಿಳೆಯರ ಮೇಲೆ ಅತ್ಯಾಚಾರ, ಭ್ರಷ್ಟಾಚಾರ ಇಂತಹ ಅಹಿತಕರ ಘಟನೆಗಳು ನಿಲ್ಲಬೇಕು. ದಾವಣಗೆರೆ ನಗರ ಮಹಿಳೆಯರಿಗೆ ಉತ್ತಮ ಸುರಕ್ಷತಾ ಸ್ಥಳವಾಗಿದೆ. ಪೊಷಕರು ತಮ್ಮ ಮೇಲೆ ಹೆಚ್ಚಿನ ಜವಾಬ್ದಾರಿ ಹೊಂದಿರುತ್ತಾರೆ. ಹಾಗಾಗಿ ವಿದ್ಯಾರ್ಥಿನಿಯರು, ತಂದೆ -ತಾಯಿಗಳಿಗೆ ಗೌರವ ತರುವಂತೆ ನಡೆದುಕೊಳ್ಳಬೇಕು.

ನಗರದಲ್ಲಿ ಇತ್ತೀಚಿನ ದಿನಗಳಲ್ಲಿ ಸರಗಳ್ಳತನ ಪ್ರಕರಣಗಳು ಹೆಚ್ಚಾಗುತ್ತಿದ್ದು, ಸರಗಳ್ಳರ ಪತ್ತೆಗಾಗಿ ಕಾರ್ಯಾಚರಣೆ ನಡೆಸಲಾಗುತ್ತಿದೆ. ಇದರ ಜೊತೆಗೆ ಸಾರ್ವಜನಿಕರ ಸಹಕಾರ ಅತ್ಯಗತ್ಯವಾಗಿದೆ. ಮಹಿಳೆಯರು ಚಿನ್ನಾಭರಣಗಳನ್ನು ಹಾಕಿಕೊಂಡು ಹೋಗುವಾಗ ಎಚ್ಚರಿಕೆ ವಹಿಸಬೇಕು ಎಂದರು.
ನಗರದಲ್ಲಿ ಸಿಸಿ ಕ್ಯಾಮರಗಳನ್ನು ಅಳವಡಿಸುವುದರಿಂದ ಅಪರಾಧ ಪ್ರಕರಣಗಳು ಕಡಿಮೆ ಆಗುತ್ತವೆ. ಇತ್ತೀಚಿನ ದಿನಗಳಲ್ಲಿ ಎಟಿಎಂ ನಲ್ಲಿರುವ ಹಣವನ್ನು ದೋಚುವಂತಹ ಪ್ರಕರಣಗಳು ಹೆಚ್ಚಾಗುತ್ತಿವೆ. ಬ್ಯಾಂಕ್ ನವರ ಹೆಸರು ಹೇಳಿಕೊಂಡು ಪೋನ್ ಮಾಡಿದವರಿಗೆ ಮಾಹಿತಿ ನೀಡದೇ ಹತ್ತಿರವಿರುವ ಬ್ಯಾಂಕ್ ಗಳಿಗೆ ತೆರಳಿ ಪರಿಶೀಲಿಸಲಬೇಕು. ಯಾವುದೇ ಕಾರಣಕ್ಕೂ ಪೋನ್ ಮಾಡಿದವರಿಗೆ ಎಟಿಎಂ ನಂಬರ್ ಗಳನ್ನು ಕೊಡಬೇಡಿ ಎಂದು ವಿದ್ಯಾರ್ಥಿನಿಯರಿಗೆ ಕರೆ ನೀಡಿದರು.
ಎಎಸ್ಪಿ ಯಶೋಧ ವಂಟಗೋಡಿ ಮಾತನಾಡಿ, ಪ್ರಸುತ್ತ ದಿನದಲ್ಲಿ ಮಹಿಳೆಯರ ಮೇಲೆ ಹೆಚ್ಚು ದೌರ್ಜನ್ಯಗಳು ನಡೆಯುತ್ತಿರುವುದು ವಿಷಾಧಕರ ಸಂಗತಿ.

ಪೋಷಕರು ನಿಮ್ಮ ಮೇಲೆ ಹೊಂದಿರುವ ಜವಾಬ್ದಾರಿಯನ್ನು ಕಾಪಾಡಿಕೊಳ್ಳಿ. ಹಾಸ್ಟೆಲ್ ಹಾಗೂ ಗ್ರಾಮಾಂತರದಿಂದ ಬಸ್ಸಿನಲ್ಲಿ ಬರುವ ವಿದ್ಯಾರ್ಥಿನಿಯರು ಯಾವುದೇ ಅಹಿತಕರ ಉಟನೆಗಳಿಗೆ ಆಸ್ಪದ ನೀಡಬಾರದು. ಫೇಸ್ ಬುಕ್, ಟ್ವಿಟರ್ ಗಳಲ್ಲಿ ಪರಿಚಯವಿಲ್ಲದ ವ್ಯಕ್ತಿಯೊಡನೆ ಸಲುಗೆಯಿಂದ ಇರುವುದರಿಂದ ಪ್ರೀತಿ, ಪ್ರೇಮಗಳು ಉಂಟಾಗಿ ತಮ್ಮ ಜೀವನವನ್ನು ತಾವೇ ಹಾಳು ಮಾಡಿಕೊಳ್ಳುವಂತಾಗುತ್ತದೆ. ಹೀಗಾಗಿ ಎಚ್ಚರಿಕೆಯಿಂದ ರಕ್ಷಣೆಯನ್ನು ಮಾಡಿಕೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ ಡಿವೈಎಸ್ಪಿ ಅಶೋಕ್ ಕುಮಾರ್, ಎವಿಕೆ ಕಾಲೇಜಿನ ಪ್ರಾಂಶುಪಾಲ ಎಸ್.ಪಿ. ಶಿವಪ್ರಕಾಶ್, ಸಂಗನಾಥ್, ಮುರುಗೇಶ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Leave a Comment