ಮಹಿಳೆಯರು ಸ್ವಯಂ ಉದ್ಯೋಗದಿಂದ ಆರ್ಥಿಕ ಸ್ವಾವಲಂಬನೆ ಹೊಂದಬೇಕು- ಶ್ರೀಮತಿ ವೇದ

ಬಳ್ಳಾರಿ ಫೆ.17- ಮಹಿಳೆಯರು ಸ್ವಯಂ ಉದ್ಯೋಗವನ್ನು ಮಾಡುವುದರ ಮೂಲಕ ಆರ್ಥಿಕ ಸ್ವಾವಲಂಬನೆಯನ್ನು ಹೊಂದಬೇಕೆಂದು ಬೆಂಗಳೂರಿನ ಲೇಡಿಸ್ ಸೆಂಟರ್‍ನ ಮುಖ್ಯಸ್ಥೆ, ಬಾಟಿಕ್ ಉದ್ಯಮಿ ಶ್ರೀಮತಿ ವೇದ ಅವರು ತಿಳಿಸಿದರು.

ಅವರು ಸ್ಥಳೀಯ ಶ್ರೀಮತಿ ಸರಳಾದೇವಿ ಸತೀಶ್ಚಂದ್ರ ಅಗರವಾಲ್ ಸರ್ಕಾರಿ ಪ್ರಥಮ ದರ್ಜೆ ಸ್ವಾಯತ್ತ ಕಾಲೇಜಿನಲ್ಲಿ ಬುಧವಾರದಂದು ಮಹಿಳಾ ಲೈಂಗಿಕ ದೌರ್ಜನ್ಯ ವಿರೋಧಿ ಕೋಶ ಮತ್ತು ಮಹಿಳಾ ಸಬಲೀಕರಣ ಕೋಶ ಇವುಗಳ ಸಂಯುಕ್ತಾಶ್ರಯದಲ್ಲಿ “ಮಹಿಳೆಯರಿಗೆ ಸ್ವಯಂ ಉದ್ಯೋಗ ಪ್ರೇರಣೆ” ಎಂಬ ವಿಷಯವಾಗಿ ಹಮ್ಮಿಕೊಂಡಿದ್ದ ಕಾರ್ಯಾಗಾರದಲ್ಲಿ ವಿದ್ಯಾರ್ಥಿನಿಯರನ್ನು ಉದ್ದೇಶಿಸಿ ಮಾತನಾಡಿದರು.

ಪ್ರಸ್ತುತ ದಿನಗಳಲ್ಲಿ ಮಹಿಳೆಯರು ಯಾವುದರಲ್ಲೂ ಕಡಿಮೆ ಇಲ್ಲ. ಪುರುಷರಿಗೆ ಸರಿ ಸಮಾನವಾಗಿ ಬದುಕಲು ಸಾಧ್ಯವಿದೆ. ಮಹಿಳೆಯರು ಆರ್ಥಿಕ ಸ್ವಾವಲಂಬನೆ ಹೊಂದಬೇಕಾದರೆ ಹಲವಾರು ಮಾರ್ಗಗಳಿವೆ. ಆ ನಿಟ್ಟಿನಲ್ಲಿ ಸ್ವಯಂ ಉದ್ಯೋಗವನ್ನು ಕೈಗೊಳ್ಳಲು ಸರ್ಕಾರ ಅನೇಕ ಯೋಜನೆಗಳನ್ನು ರೂಪಿಸಿದೆ. ಯೋಜನೆಗಳ ಸದುಪಯೋಗ ಪಡಿಸಿಕೊಂಡು ಸ್ವಯಂ ಉದ್ಯೋಗಿಗಳಾಗಬೇಕೆಂದು ಸಲಹೆ ನೀಡಿದರು.

ಕಾಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಮಹಿಳಾ ಸಬಲೀಕರಣದ ಕೋಶದ ಸಂಚಾಲಕಿ ಆರ್.ಎಂ.ಶ್ರೀದೇವಿ ಅವರು, ಮಹಿಳೆಯರು ತಾವು ಸ್ತ್ರೀಯರು ಎಂಬ ಕೀಳರಿಮೆ ಬಿಡಬೇಕು. ಧೈರ್ಯವಾಗಿ ಕೆಲಸ ಕಾರ್ಯಗಳಲ್ಲಿ, ಉದ್ಯೋಗಗಳಲ್ಲಿ ಮುನ್ನಡೆಯಬೇಕು. ಇತರರಿಗೆ ಮಾದರಿಯಾಗಿ ಜೀವನ ಸಾಗಿಸಬೇಕು. ಇಂದು ಎಲ್ಲಾ ಪೋಷಕರು ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಪ್ರೋತ್ಸಾಹಿಸುತ್ತಿದ್ದಾರೆ. ಕಾಲೇಜಿನಲ್ಲಿ ಇನ್ನು ಹಲವಾರು ಮಹಿಳಾ ಸಬಲೀಕರಣಕ್ಕೆ ಸಂಬಂಧಪಟ್ಟಂತೆ ಕಾರ್ಯಾಗಾರಗಳನ್ನು ಏರ್ಪಡಿಸಲಾಗುವುದು. ಇದರ ಸದುಪಯೋಗ ಪಡಿಸಿಕೊಳ್ಳಬೇಕೆಂದು ತಿಳಿಸಿದರು.

ಕಾಲೇಜಿನ ಪ್ರಾಂಶುಪಾಲ ಪ್ರೊ.ಅಬ್ದುಲ್ ಮುತಾಲಿಬ್ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ನಮ್ಮ ದೇಶದಲ್ಲಿ ಮಹಿಳೆಯರಿಗೆ ಮಾತೃ ಸ್ಥಾನವನ್ನು ನೀಡಲಾಗಿದೆ. ಗೌರವದಿಂದ ಕಾಣಲಾಗುತ್ತಿದೆ. ಆದರೆ ಮಹಿಳೆಯರು ಸಮಾಜದಲ್ಲಿ ನಡೆಯುವ ದೌರ್ಜನ್ಯಗಳನ್ನು ಪ್ರತಿರೋಧಿಸುವ ಮನೋಭಾವ ಬೆಳೆಸಿಕೊಳ್ಳಬೇಕು. ಅಂತಹ ಗುಣ ನಿಮ್ಮಿಂದಲೇ ಆರಂಭವಾಗಬೇಕು ಎಂದು ಹೇಳಿದರು. ಕಾರ್ಯಕ್ರಮದಲ್ಲಿ ನೂರಾರು ವಿದ್ಯಾರ್ಥಿನಿಯರು ಹಾಗೂ ಕಾಲೇಜಿನ ಮಹಿಳಾ ಬೋಧಕ ಸಿಬ್ಬಂದಿಯವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ಆರಂಭದಲ್ಲಿ ಶಾಂತಲಾ ಸ್ವಾಗತಿಸಿದರು. ಅತಿಥಿಗಳಾದ ಶ್ರೀಮತಿ ವೇದ ಅವರನ್ನು ಮಹಿಳಾ ದೌರ್ಜನ್ಯ ವಿರೋಧಿ ಕೋಶದ ಸಂಚಾಲಕಿ ಡಾ.ಎಸ್.ಎಂ.ಶೈಲಜಾ ಅವರು ಪರಿಚಯಿಸಿದರು. ಡಾ.ಬಿ.ಸರೋಜಾ ಕಾರ್ಯಕ್ರಮ ನಿರೂಪಿಸಿದರು. ಕೊನೆಯಲ್ಲಿ ಬಿ.ಶೋಭಾರಾಣಿ ವಂದಿಸಿದರು.

Leave a Comment