ಮಹಿಳೆಯರು-ಮಕ್ಕಳ ಮೇಲಿನ ದೌರ್ಜನ್ಯ ತಡೆಗೆ “ವಿಶೇಷ ಕಲ್ಪತರು ಪಡೆ” ರಚನೆ

ತುಮಕೂರು, ಆ. ೭- ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಮಹಿಳೆಯರು ಮತ್ತು ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣಗಳನ್ನು ತಡೆಗಟ್ಟುವ ಸಲುವಾಗಿ ಮಹತ್ವದ ಹೆಜ್ಜೆಯನ್ನಿಟ್ಟಿರುವ ಜಿಲ್ಲಾ ಪೊಲೀಸ್ ಇಲಾಖೆಯು 40 ವರ್ಷಕ್ಕಿಂತ ಕಡಿಮೆ ವಯಸ್ಸಿನ 40 ಮಂದಿ ಮಹಿಳಾ ಸಿಬ್ಬಂದಿಗಳನ್ನು ಒಳಗೊಂಡ “ವಿಶೇಷ ಕಲ್ಪತರು ಪಡೆ”ಯನ್ನು ರಚಿಸಿದೆ.

ಮಹಿಳೆಯರು ಮತ್ತು ಮಕ್ಕಳು ತಮ್ಮನ್ನು ತಾವು ರಕ್ಷಿಸಿಕೊಳ್ಳುವ ಕುರಿತು ಪೊಲೀಸ್ ಇಲಾಖೆ ವತಿಯಿಂದ ತುರ್ತು ಸೇವೆ ಒದಗಿಸುವ ಸದುದ್ದೇಶದಿಂದ ಈ ವಿಶೇಷ ಪಡೆಯನ್ನು ರಚಿಸಲಾಗಿದೆ ಎಂದು ಕೇಂದ್ರ ವಲಯ ಐಜಿಪಿ ಶರತ್ಚಂದ್ರ ತಿಳಿಸಿದರು.

ನಗರದ ಜಿಲ್ಲಾ ಪೊಲೀಸ್ ಕಚೇರಿಗೆ ಭೇಟಿ ನೀಡಿದ ಅವರು ಈ ವಿಶೇಷ ಕಲ್ಪತರು ಪಡೆಯ ಕಾರ್ಯಾಚರಣೆಗೆ ಚಾಲನೆ ನೀಡಿ ಜಿಲ್ಲೆಯಲ್ಲಿ ಮಹಿಳೆಯರು ಮತ್ತು ಮಕ್ಕಳ ಮೇಲಿನ ದೌರ್ಜನ್ಯ ತಡೆಗಟ್ಟುವ ಜತೆಗೆ ಮಹಿಳೆಯರು ಮತ್ತು ಮಕ್ಕಳಲ್ಲೂ ತಮ್ಮ ತಾವು ರಕ್ಷಿಸಿಕೊಳ್ಳುವ ವಿಧಾನಗಳ ಕುರಿತು ಮಾಹಿತಿ ನೀಡುವಂತೆಯೂ ವಿಶೇಷ ಪಡೆಯ ಸಿಬ್ಬಂದಿಗೆ ಸಲಹೆ ಮಾಡಿದರು.

ಈ ವಿಶೇಷ ಪಡೆಗೆ ಜುಲೈ 26 ರಿಂದ ಆಗಸ್ಟ್ 7ರ ವರೆಗೆ ಸುಮಾರು 18 ದಿನಗಳ ಕಾಲ ವಿವಿಧ ಆಯಾಮಗಳಲ್ಲಿ ತರಬೇತಿಯನ್ನು ನೀಡಲಾಗಿದೆ.

ಮೊದಲ 5 ದಿನಗಳ ಕಾರ್ಯಕ್ರಮದಲ್ಲಿ ದುರ್ಗಾ ಸಂಸ್ಥೆಯ ಸಂಸ್ಥಾಪಕರಾದ ಡಾ. ಬೃಂದಾ ಅಡಿಗ ಅವರು ತಮ್ಮ ತಂಡದವರೊಂದಿಗೆ ಮಹಿಳೆ ಮತ್ತು ಮಕ್ಕಳ ಸುರಕ್ಷತೆ, ಮಹಿಳೆ ಮತ್ತು ಸಮಾಜದ ಸಂಬಂಧ, ಫೋಕ್ಸೋ ಕಾಯ್ದೆ, ಐಟಿಪಿ ಕಾಯ್ದೆ, ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳಾದ ಕಲಂ 34 ಐಪಿಸಿ, 376 ಐಪಿಸಿ, 509 ಐಪಿಸಿ, ಆಸಿಡ್ ದಾಳಿ ಪ್ರಕರಣಗಳು ಹಾಗೂ ಇತರೆ ಕಾನೂನು ವಿಚಾರಗಳ ಕುರಿತು ಪ್ರಾಯೋಗಿಕವಾಗಿ ತರಬೇತಿ ನೀಡಿದ್ದಾರೆ.

ಪ್ರಶಿಕ್ಷಣಾರ್ಥಿಗಳಿಗೆ ದೈಹಿಕ, ಮಾನಸಿಕ ಮತ್ತು ಆರೋಗ್ಯವನ್ನು ಬಲಪಡಿಸುವ ನಿಟ್ಟಿನಲ್ಲಿ 6 ದಿನಗಳ ಕಾಲ ಯೋಗ ತರಬೇತಿ, 7 ದಿನಗಳ ಕಾಲ ಕರಾಟೆ ತರಬೇತಿ ಮತ್ತು 3 ದಿನಗಳ ಕಾಲ ತುಮಕೂರು ವಿಶ್ವವಿದ್ಯಾನಿಲಯದಲ್ಲಿ ಪ್ರಾಯೋಗಿಕ ಕಾರ್ಯಕ್ರಮದಲ್ಲಿ ಯೋಗ, ಪ್ರಾಣಾಯಾಮ ಮತ್ತು ಧ್ಯಾನದ ತರಬೇತಿಯನ್ನು ನೀಡಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಕೆ. ವಂಶಿಕೃಷ್ಣ ವಿವರಿಸಿದರು.

ಉಳಿದ 10 ದಿನಗಳ ನಡೆದ ತರಬೇತಿಯಲ್ಲಿ ಪ್ರಶಿಕ್ಷಣಾರ್ಥಿಗಳಿಗೆ ಜಿಲ್ಲೆಯ ಡಿವೈಎಸ್ಪಿ, ಸರ್ಕಲ್ ಇನ್ಸ್‌ಪೆಕ್ಟರ್, ಸಬ್‌ಇನ್‌ಪೆಕ್ಟರ್‌ಗಳಿಂದ ಮತ್ತು ಕಾನೂನು ತಜ್ಞರಿಂದ ಮಹಿಳೆಯರ ಮತ್ತು ಮಕ್ಕಳ ವಿರುದ್ಧದ ಪ್ರಕರಣಗಳ ಬಗ್ಗೆ ಕಾನೂನು ತರಗತಿಗಳನ್ನು ನಡೆಸಲಾಯಿತು ಎಂದರು.

ಮಧ್ಯಾಹ್ನದ ನಂತರ ನಗರದ ವಿವಿಧ ಶಾಲಾ-ಕಾಲೇಜುಗಳಾದ ಎಂಪ್ರೆಸ್, ಸಿದ್ದಗಂಗಾ ಮಹಿಳಾ ಕಾಲೇಜು, ವಿದ್ಯಾವಾರಿಧಿ ಕಾಲೇಜು, ವಿದ್ಯಾನಿಕೇತನ ಕಾಲೇಜು, ಸರ್ವೋದಯ ಕಾಲೇಜುಗಳಿಗೆ ಭೇಟಿ ನೀಡಿ ಶಾಲಾ ಮಕ್ಕಳು ಮತ್ತು ಕಾಲೇಜು ವಿದ್ಯಾರ್ಥಿಗಳಿಗೆ ಸುರಕ್ಷತೆಯ ಬಗ್ಗೆ ಹಾಗೂ ತಮ್ಮನ್ನು ತಾವು ಅಪರಾಧಗಳಿಂದ ರಕ್ಷಿಸಿಕೊಳ್ಳುವ ಕುರಿತು ಹಾಗೂ ಕಾನೂನಿನ ಬಗ್ಗೆ ಅರಿವು ಮೂಡಿಸಲಾಯಿತು.

ಈ ವಿಶೇಷ ಪಡೆಯು ಆಯಾ ಉಪವಿಭಾಗ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸಲಿದ್ದು, ಪ್ರಮುಖ ಬಂದೋಬಸ್ತ್ ಕರ್ತವ್ಯ, ಮಹಿಳೆಯರು ಮತ್ತು ಮಕ್ಕಳ ಮೇಲೆ ನಡೆಯುವ ದೌರ್ಜನ್ಯ ಪ್ರಕರಣಗಳ ಮೇಲೆ ತುರ್ತು ನಿಗಾ ವಹಿಸಿ ಅಗತ್ಯ ಕಾನೂನು ಕ್ರಮ ಕೈಗೊಳ್ಳುವ ಮೂಲಕ ಮಹಿಳೆಯರು ಮತ್ತು ಮಕ್ಕಳಿಗೆ ಅರಿವು ಮೂಡಿಸುವ ಕಾರ್ಯದಲ್ಲಿ ಸದಾ ನಿರತವಾಗಿರುತ್ತದೆ ಎಂದು ಎಸ್ಪಿ ಡಾ ವಂಶಿಕೃಷ್ಣ ಹೇಳಿದರು.

ಈ ಸಂದರ್ಭದಲ್ಲಿ ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಶೋಭಾರಾಣಿ, ಸಿಪಿಐ ಪಾರ್ವತಮ್ಮ, ಪಿಎಸ್ಐಗಳಾದ ವಿಜಯಲಕ್ಷ್ಮಿ, ಮಹಾಲಕ್ಷ್ಮಮ್ಮ, ಕುಮಾರಿ ಮತ್ತು ವಿಶೇಷ ಪಡೆಯ ಸಿಬ್ಬಂದಿಗಳು ಭಾಗವಹಿಸಿದ್ದರು.

Leave a Comment