ಮಹಿಳೆಯರಿಗೆ ಮೀಸಲಿರುವ ಹಣ ಸದ್ಭಳಕೆಯಾಗಲಿ- ಎನ್.ಭೃಂಗಿಶ್

ಬೆಂಗಳೂರು, ಫೆ. ೧೨- ಸರ್ಕಾರದ ವಿವಿಧ ಇಲಾಖೆಗಳಲ್ಲಿ ಮಹಿಳೆಯರ ಕಲ್ಯಾಣಕ್ಕಾಗಿ ಮೀಸಲಿರುವ ಬಜೆಟ್‌ನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುವ ಆ ಕಾರ್ಯ ಆಗಬೇಕಿದೆ ಎಂದು ಮುಖ್ಯಮಂತ್ರಿಗಳ ಮಾಧ್ಯಮ ಕಾರ್ಯದರ್ಶಿ ಎನ್.ಭೃಂಗಿಶ್ ಹೇಳಿದರು.
ನಗರದ ರೇಸ್‌ಕೋರ್ಸ್ ರಸ್ತೆಯ ಭಾರತೀಯ ವಿದ್ಯಾಭವನದ ಸಭಾಂಗಣದಲ್ಲಿಂದು ಕರ್ನಾಟಕ ಮಾಧ್ಯಮ ಅಕಾಡೆಮಿ, ಕರ್ನಾಟಕ ಪತ್ರಕರ್ತೆಯರ ಸಂಘ ಹಾಗೂ ವಿಜಯಪುರ ಮಹಿಳಾ ವಿವಿ ಸಹಯೋಗದೊಂದಿಗೆ ಆಯೋಜಿಸಿದ್ದ, ’ಮಾಧ್ಯಮದಲ್ಲಿ ಮಹಿಳೆ ಹೊಸ ಸವಾಲುಗಳ’ ಕುರಿತ ವಿಚಾರ ಸಂಕಿರಣದಲ್ಲಿ ಮಾತನಾಡಿದ ಅವರು ಇಲಾಖೆಗಳಲ್ಲಿರುವ ಲಿಂಗ ಆಧಾರಿತ ಬಜೆಟ್‌ನ್ನು ಅನುಷ್ಠಾನಗೊಳಿಸಿದರೆ ಮಹಿಳೆಯರಿಗೆ ಪ್ರಯೋಜನವಾಗುತ್ತದೆ. ಹಾಗಾಗಿ, ಸಮರ್ಪಕ ಅನುಷ್ಠಾನದತ್ತ ಗಮನ ಹರಿಸುವ ಅಗತ್ಯವಿದೆ ಎಂದರು.

w1
ಮಹಿಳೆಯರಿಗೆ ಎಲ್ಲ ರಂಗದಲ್ಲೂ ಸವಾಲುಗಳು ಇವೆ. ಹಾಗೆಯೇ, ಮಾಧ್ಯಮದಲ್ಲೂ ಸವಾಲುಗಳಿವೆ. ಆತ್ಮಿವಿಶ್ವಾಸ, ಸ್ವಂತಿಕೆ, ಕೌಶಲ್ಯದ ಮೂಲಕ ಸವಾಲುಗಳನ್ನು ಎದುರಿಸಿ ಯಶಸ್ವಿಯಾಗಬಹುದು ಎಂದರು. ಈಗಿನ ತಂತ್ರಜ್ಞಾನ ಯುಗದಲ್ಲಿ ತಂತ್ರಜ್ಞಾನವನ್ನು ಸಮರ್ಪಕವಾಗಿ ಬಳಸಿಕೊಂಡು ವೃತ್ತಿ ಕೌಶಲ್ಯವನ್ನು ಹೆಚ್ಚಿಸಿಕೊಂಡು ಪುರುಷ ಪತ್ರಕರ್ತರಿಗಿಂತ ಮಿಗಿಲಾಗಿ ಬೆಳೆಯುವ ಪ್ರಯತ್ನವನ್ನು ಮಹಿಳಾ ಪತ್ರಕರ್ತರು ಮಾಡಬಹುದಾಗಿದೆ ಎಂದರು.
ರಾಜ್ಯ ಸರ್ಕಾರ ವ್ಯಾಪ್ತಿಯೊಳಗೆ ಬರೋಬ್ಬರಿ ೫೩ ಇಲಾಖೆಗಳಿದ್ದು, ಇದುವರೆಗೂ ವಾರ್ತಾ ಇಲಾಖೆ ಹೊರತುಪಡಿಸಿ ಹಲವು ಇಲಾಖೆಯಲ್ಲಿ ಲಿಂಗಾಧಾರಿತ ಬಜೆಟ್ ಮೂಡಿ ಬಂದಿಲ್ಲ. ಅಲ್ಲದೆ, ಶೇಕಡಾವಾರು ೩೩ ಪ್ರಮಾಣದಲ್ಲಿ ಮಹಿಳೆಯರಿಗೆ ಆದ್ಯತೆ ನೀಡಬೇಕೆಂದು ಯೋಜನಾ ಮತ್ತು ನೀತಿ ಆಯೋಗ ಹೇಳಿದೆ ಎಂದು ತಿಳಿಸಿದರು.
ಮಾಧ್ಯಮ ಸೇರಿ ಬೇರೆ ಕ್ಷೇತ್ರದಲ್ಲಿ ಇರುವ ಮಹಿಳೆಯರು ಸಹ ಸವಾಲುಗಳನ್ನು ಎದುರಿಸುತ್ತಿದ್ದಾರೆ. ಆದರೆ, ಪ್ರಮುಖವಾಗಿ ರಕ್ಷಣೆ ನೀಡಬೇಕಾಗಿದೆ ಎಂದ ಅವರು, ಲೈಂಗಿಕ ಕಿರುಕುಳ ಸೇರಿ ಇನ್ನಿತರ ಗಂಭೀರ ಆರೋಪ ಕೇಳಿ ಬಂದಾಗ ಸರ್ಕಾರಿ ಕಚೇರಿ ವ್ಯಾಪ್ತಿಯಲ್ಲಿ ತಿಂಗಳಿಗೊಮ್ಮೆ ಸಭೆ ನಡೆಸಬೇಕೆಂದು ಕಾನೂನು ಇದ್ದರೂ, ಇದು ಜರುಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

w2
ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ಸ್ಥಾನಿಕ ಸಂಪಾದಕಿ ಸಾಂತ್ವನಾ ಭಟ್ಟಾಚಾರ್ಯ ಮಾತನಾಡಿ, ಪ್ರಾದೇಶಿಕ ಮಾಧ್ಯಮಗಳಲ್ಲೂ ಮಹಿಳೆಯರು ಹೆಚ್ಚಾಗಬೇಕು. ಆಗ ಮಾತ್ರ, ತಳಮಟ್ಟದ ಶೋಷಣೆ ಬಯಲಿಗೆ ಎಳೆಯಲು ಸಾಧ್ಯ. ಅಲ್ಲದೆ, ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳಾ ಪತ್ರಕರ್ತೆಯರು ಇರುವುದು ಹೆಮ್ಮೆಯ ಸಂಗತಿ ಎಂದು ನುಡಿದರು.
ಹಿರಿಯ ಪತ್ರಕರ್ತೆ ಡಾ. ವಿಜಯಾ ಮಾತನಾಡಿ, ಮಾಧ್ಯಮಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಮಹಿಳೆಯರಿಗೆ ಸರಿಯಾದ ಶ್ರೇಣಿ ಹಾಗೂ ಉತ್ತಮ ಸಂಬಳ ಸಿಗುತ್ತಿಲ್ಲ. ಜತೆಗೆ ಮಹಿಳೆಯರಿಗೆ ಮಾಧ್ಯಮದಲ್ಲಿ ಅನಿಶ್ಚಿತತೆ ಯಾವಾಗಲು ಕಾಡುತ್ತಿರುತ್ತದೆ ಎಂದು ಅಭಿಪ್ರಾಯಪಟ್ಟರು.
ಮಾಧ್ಯಮದಲ್ಲಿ ಹೊಸತನ ಬರುತ್ತಿರುವುದು ಸ್ವಾಗತಾರ್ಹ. ಇದರೊಂದಿಗೆ ಪ್ರತಿ ಮಹಿಳೆಯೂ ಹೊಂದಿಕೊಂಡು ಹೋಗಬೇಕು. ಪತ್ರಿಕಾ ಮಾಧ್ಯಮದಲ್ಲಿ ಕಾರ್ಯ ನಿರ್ವಹಿಸುವ ಮಹಿಳೆಗೆ ನಾನಾ ರೀತಿಯ ತೊಂದರೆ ಎದುರಾಗುತ್ತವೆ. ಅವನ್ನೆಲ್ಲ ಮೆಟ್ಟಿ ನಿಲ್ಲಬೇಕು ಎಂದರು.

w1
ಮುದ್ರಣ ಮಾಧ್ಯಮ ಹೆಚ್ಚೆಂದರೆ ಇನ್ನೂ ಏಳೆಂಟು ವರ್ಷ ಚಾಲ್ತಿಯಲ್ಲಿರಬಹುದು ಎಂದ ಅವರು, ಪತ್ರಿಕೋದ್ಯಮ ಓದುತ್ತಿರುವ ವಿದ್ಯಾರ್ಥಿಗಳು ಪತ್ರಿಕಾ ಮಾಧ್ಯಮದಲ್ಲಿ ಕೆಲಸ ಸಿಗಬಹುದು ಎಂಬುದನ್ನು ಬಿಟ್ಟು ಹೊಸ ಹೊಸ ರೀತಿಯ ಪ್ರಯತ್ನಗಳಿಗೆ ಹಾಗೂ ಡಿಜಿಟಲ್ ಮಾಧ್ಯಮಗಳಲ್ಲಿ ತೊಡಗಿಕೊಳ್ಳಬೇಕು ಎಂದು ನುಡಿದರು.

w4

ಈ ಸಂದರ್ಭದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಪ್ರಧಾನ ಕಾರ್ಯದರ್ಶಿ ಕ್ಯಾಪ್ಟನ್ ಪಿ. ಮಣಿವಣ್ಣನ್, ವಾರ್ತಾ ಇಲಾಖೆಯ ಆಯುಕ್ತ ಎಸ್.ಎನ್. ಸಿದ್ದರಾಮಪ್ಪ, ಹಿರಿಯ ಪತ್ರಕರ್ತೆ ಡಾ. ಆರ್. ಪೂರ್ಣಿಮಾ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

Leave a Comment