ಮಹಿಳೆಯರಲ್ಲಿ `ಪಿ.ಸಿ.ಒ.ಎಸ್’ ಸಮಸ್ಯೆ

`ಪಿಸಿಒಎಸ್’ ಅಂದರೆ ಪಾಲಿಸಿಸ್ಟಿಕ್ ಒವೇರಿಯನ್ ಸಿಂಡ್ರೊಮ್, ಇದನ್ನು `ಪಿಸಿಒಡಿ’ ಎಂದೂ ಕರೆಯಲಾಗುತ್ತದೆ. ಸಂತಾನೋತ್ಪತ್ತಿ ಸಾಮರ್ಥ್ಯ ಹೊಂದಿರುವ ಮಹಿಳೆಯರಲ್ಲಿ ಕಂಡು ಬರುವ ಒಂದು ಬಗೆಯ ಸಮಸ್ಯೆಯಾಗಿದೆ. ಮುಂಚೆ 30ರ ಆಸುಪಾಸಿನ ಮಹಿಳೆಯರಲ್ಲಿ ಈ ಸಮಸ್ಯೆ ಕಂಡು ಬರುತ್ತಿತ್ತು. ಇತ್ತೀಚಿನ ವರ್ಷಗಳಲ್ಲಿ 20ರ ಆಸುಪಾಸಿನ ಯುವತಿಯರಲ್ಲೂ ಇದು ಗೋಚರಿಸುತ್ತಿದೆ.

ಏನಿದು `ಪಿಸಿಒಎಸ್’?: ಮಹಿಳೆಯ ದೇಹದಲ್ಲಿ ಸ್ರವಿಸುವ ಹಾರ್ಮೋನಿನ ಏರುಪೇರಿನಿಂದಾಗಿ ಈ ಸಮಸ್ಯೆ ಉದ್ಭವಿಸುತ್ತದೆ. ಇದು ಋತುಚಕ್ರದ ಮೇಲೆ, ಹಾರ್ಮೋನಿನ ಉತ್ಪಾದನೆಯ ಮೇಲೆ, ಸಂತಾನೋತ್ಪತ್ತಿ ಸಾಮರ್ಥ್ಯದ ಮೇಲೆ ಪ್ರಭಾವ ಬೀರುತ್ತದೆ. ಬಂಜೆತನಕ್ಕೆ ಪಿ.ಸಿ.ಓ.ಎಸ್ ಸಮಸ್ಯೆ ಈಗ ಪ್ರಮುಖ ಕಾರಣವಾಗಿದೆ.

`ಪಿಸಿಒಎಸ್’ ಸಮಸ್ಯೆ ಇದ್ದಾಗ ಏನು ಮಾಡಬೇಕು?

`ಪಿಸಿಒಎಸ್’ ಸಮಸ್ಯೆಯನ್ನು ಕೇವಲ ಗರ್ಭಧಾರಣೆಯ ಸಮಸ್ಯೆ ಎಂದು ಭಾವಿಸದೆ, ಅದನ್ನೇ ಒಂದು ಸಮಗ್ರ ಸಮಸ್ಯೆಯೆಂಬಂತೆ ಭಾವಿಸಿ ಚಿಕಿತ್ಸೆ ನೀಡುವ ಕಡೆ ಗಮನಹರಿಸಬೇಕು. ಮಧುಮೇಹ ಸಮಸ್ಯೆ ಇದ್ದರೆ ನಿಯಮಿತವಾಗಿ ಪರೀಕ್ಷೆ ಮಾಡಿಸಿಕೊಳ್ಳಬೇಕು.

ಇದರ ಜತೆಗೆ ಸಮತೋಲಿತ ಆಹಾರ ಪದ್ಧತಿ ಅನುಸರಿಸಿ ದೈನಂದಿನ ವ್ಯಾಯಾಮ ಮಾಡುವುದು, ಧೂಮಪಾನ ಚಟದಿಂದ ದೂರ ಸರಿಯುವುದು ಈ ತೊಂದರೆಯ ಪ್ರಮಾಣವನ್ನು ಸಾಕಷ್ಟು ತಗ್ಗಿಸಲು ನೆರವಾಗುತ್ತದೆ.

ಏನೇನು ಆಹಾರ ಸೇವಿಸಬೇಕು?

* ವೈದ್ಯರು ಸೂಚಿಸಿದ ಪ್ರಮಾಣದಲ್ಲಿಯೇ ಆಹಾರ ಸೇವನೆ ಮಾಡಬೇಕು.

* ಆಹಾರದ ಬಗ್ಗೆ ನಿಯಮಿತವಾಗಿ ಯೋಜನೆ ರೂಪಿಸಿಕೊಳ್ಳಬೇಕು.

* ಚಹ, ಕಾಫಿ, ಆಲ್ಕೋಹಾಲ್ ಸೇವನೆ ಕಡಿಮೆ ಮಾಡಬೇಕು.

* ಆಹಾರದ ಬಗ್ಗೆ ನಿಯಮಿತವಾಗಿ ಯೋಜನೆ ರೂಪಿಸಿಕೊಳ್ಳಬೇಕು. ಒಂದೇ ಸಲಕ್ಕೆ ಹೆಚ್ಚು ಆಹಾರ ಸೇವಿಸದೆ, ಆಗಾಗ ಒಂದಿಷ್ಟು ಆಹಾರ ಸೇವಿಸುವುದು ಒಳ್ಳೆಯದು, ದಿನಕ್ಕೆ 5-6 ಸಲ ಮಿತ ಆಹಾರ ಸೇವನೆ ತಪ್ಪಲ್ಲ.

* ಪ್ರೋಟಿನ್ ಒಳಗೊಂಡಿರುವ ಕಾಳುಗಳು, ನಿಮ್ಮ ಆಹಾರದಲ್ಲಿ ಸೇರ್ಪಡೆಗೊಳ್ಳಲಿ.

* ಒಳ್ಳೆಯ ಕೊಬ್ಬು ಇರುವ ಆಹಾರ ಪದಾರ್ಥಗಳ ಸೇವನೆ ಹಿತಕರ ಪರಿಣಾಮ ಬೀರುತ್ತದೆ.

* ಸಕ್ಕರೆ ಪದಾರ್ಥಗಳನ್ನು ಅಂದರೆ ಕೇಕ್, ಬಿಸ್ಕತ್ತು, ಚಾಕ್ಲೇಟ್‌ಗಳನ್ನು ಆದಷ್ಟು ದೂರ ಇಡಿ.

* ಸೇಬು, ಸೀಬೆ, ಮೂಸಂಬಿ, ಕಿತ್ತಳೆ, ದ್ರಾಕ್ಷಿ, ಒಣ ಹಣ್ಣುಗಳು, ಇವುಗಳನ್ನು ಸಾಧ್ಯವಾದಾಗೆಲ್ಲ ಸೇವಿಸಿ.

* ರಾತ್ರಿ 8ರ ಬಳಿಕ ಆಹಾರ ಸೇವನೆ ಮಾಡುವುದನ್ನು ತಪ್ಪಿಸಿ.

* ವೈದ್ಯರ ಸೂಚನೆಗಳನ್ನು ಚಾಚೂ ತಪ್ಪದೇ ಪಾಲಿಸುವವರು ಆರೋಗ್ಯಕರ ಮಗುವನ್ನು ಪಡೆದು ನೆಮ್ಮದಿಯ ಜೀವನ ನಡೆಸಬಹುದು. ಜೀವನಶೈಲಿಯಲ್ಲಿ ಬದಲಾವಣೆ ಇರಲಿ.

* ಪ್ರತಿದಿನ 30 ನಿಮಿಷಗಳ ಕಾಲ ವೇಗದ ನಡಿಗೆ ಅನುಸರಿಸಿ.

* ಸೈಕ್ಲಿಂಗ್, ಈಜು ಕೂಡ ಒಳ್ಳೆಯ ವ್ಯಾಯಾಮಗಳಾಗಿವೆ.

* ತೂಕ ಕಡಿಮೆ ಮಾಡಿಕೊಳ್ಳುವ ಗುರಿ ನಿರ್ಧರಿಸಿ ತಿಂಗಳಿಗೆ 1.5 ರಿಂದ 2 ಕಿಲೋ ತೂಕ ಕಡಿಮೆಯಾದರೆ ಅದು ಒಳ್ಳೆ.ಯ ಬೆಳವಣಿಗೆ.

* ದಿನಕ್ಕೆ 6-7 ಗಂಟೆಯ ಸಮೃದ್ಧ ನಿದ್ರೆ ಅವಶ್ಯಕ.

* ಒತ್ತಡ ನಿವಾರಿಸಿಕೊಳ್ಳಲು ನಿಮಗೆ ನೀವೇ ಯೋಜನೆ ಹಾಕಿಕೊಳ್ಳಿ. ಇಲ್ಲವೇ ಕುಟುಂಬದವರ, ಕೌನ್ಸಿಲರ್’ಗಳ ಸಹಾಯ ಪಡೆದುಕೊಳ್ಳಿ.

* ಯಾವಾಗಲಾದರೊಮ್ಮೆ ಸ್ಪೈಸಿ ಫುಡ್’ ಸೇವಿಸಬಹುದು. ಆದರೆ ಅದೇ ನಿಯಮಿತವಾಗಬಾರದು.

* ಪಿಸಿಒಎಸ್ ನಿವಾರಣೆ ಆಗಲಾರದು. ಆದರೆ ಉತ್ತಮ ಆರೋಗ್ಯಕರ ವಿಧಾನಗಳ ಮೂಲಕ ಅದರ ಲಕ್ಷಣಗಳನ್ನು ಖಂಡಿತ ತಗ್ಗಿಸಬಹುದು.

ಲಕ್ಷಣಗಳೇನು?

* ಪುರುಷ ಹಾರ್ಮೋನು ಆಂಡ್ರೊಜೆನ್’ಗಳ ಮಟ್ಟ ಅಧಿಕಗೊಳ್ಳುತ್ತದೆ.

* ಋತುಸ್ರಾವ ಆಗುವುದು ಇಲ್ಲ ಅಥವಾ ಅದು ನಿಯಮಿತ.

* ಅಂಡಾಶಯಗಳಲ್ಲಿ ಸಿಸ್ಟ್‌ಗಳು ಅಂದರೆ ನೀರು ಗುಳ್ಳೆಗಳಂಥವು ಇರುತ್ತವೆ.

* ಋತುಸ್ರಾವದ ಅವಧಿಯಲ್ಲಿ ಕೆಲವರಿಗೆ ಅತಿಯಾಗಿ ರಕ್ತಸ್ರಾವ ಉಂಟಾಗುತ್ತದೆ. ಇದರಿಂದಾಗಿ ಗರ್ಭಧಾರಣೆಗೆ ಕಷ್ಟವಾಗುತ್ತದೆ.

* ಕೆಲವರಿಗೆ ದೇಹದ ಮೇಲೆ ಅದರಲ್ಲೂ ಮುಖದ ಮೇಲೆ ಅತಿಯಾಗಿ ಕೂದಲು ಬೆಳೆಯುತ್ತವೆ. ತಲೆಯ ಕೂದಲು ಉದುರುತ್ತವೆ.

* ಕೆಲವರಿಗೆ ದೇಹದ ತೂಕ ಅತಿಯಾಗಿ ಹೆಚ್ಚಳವಾಗುತ್ತದೆ.

* ಚರ್ಮ ಜಿಡ್ಡುಯುಕ್ತವಾಗುತ್ತದೆ. ಮೊಡವೆಗಳು ಕಾಣಿಸಿಕೊಳ್ಳಬಹುದು.

* ಕೆಲವರಲ್ಲಿ ಖಿನ್ನತೆ ಆವರಿಸಿಕೊಳ್ಳುತ್ತದೆ. ಮೂಡ್ ಹಠಾತ್ ಬದಲಾಗುತ್ತದೆ.

ಡಾ. ಬಿ. ರಮೇಶ್

ಆಲ್ಟಿಯಸ್ ಹಾಸ್ಪಿಟಲ್, ರಾಜಾಜಿನಗರ, ಬೆಂಗಳೂರು

E.mail:endoram2006@yahoo.in

Leave a Comment