ಮಹಿಳೆಯರನ್ನು ವಂಚಿಸುತ್ತಿದ್ದ ಆರೋಪಿಯ ಬಂಧನ

ಮಂಡ್ಯ. ಸೆ. 11 ವಯಸ್ಸಾದ ಮಹಿಳೆಯರನ್ನು ಪರಿಚಯಸ್ಥನಂತೆ ಮಾತನಾಡಿ ನಂತರ ಅವರನ್ನು ಅಜ್ಞಾತ ಸ್ಥಳಕ್ಕೆ ಕರೆದುಕೊಂಡು ಹೋಗಿ ಅವರ ಬಳಿ ಇದ್ದ ಚಿನ್ನದ ಒಡವೆಗಳು, ಹಣ ಮತ್ತು ಇನ್ನಿತರ ಬೆಲೆ ಬಾಳುವ ಪದಾರ್ಥಗಳನ್ನು ಅಪಹರಿಸಿ ಪರಾರಿಯಾಗುತ್ತಿದ್ದ ಓರ್ವನನ್ನು ಮಂಡ್ಯ ಜಿಲ್ಲಾ ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರಿನ ಗುಡ್ಡದಹಳ್ಳಿ ನಿವಾಸಿ ಬಿ. ಸೋಮಶೇಖರ್ ಎಂಬಾತನೇ ಪೊಲೀಸರು ಬಂಧಿಸಿರುವ ಆರೋಪಿಯಾಗಿದ್ದು, ಈತ ಸೋಮ, ಸೋಮಶೇಖರಾಚಾರಿ, ಸೂರ್ಯ, ಸುರೇಶ್ ನಾಗರಾಜ, ಲೋಕೇಶ್ ಬಿನ್ ಬ್ರಹ್ಮಚಾರಿ ಎಂಬ ವಿವಿಧ ಹೆಸರುಗಳೊಂದಿಗೆ ವಯಸ್ಸಾದ ಮಹಿಳೆಯರೊಂದಿಗೆ ಪರಿಚಯ ಮಾಡಿಕೊಂಡು ಬಿಳಿಯ ಬಣ್ಣದ ಕಾರಿನಲ್ಲಿ ಬಂದು ಅವರಿಗೆ ಡ್ರಾಪ್ ಕೊಡುತ್ತೇನೆಂದು ಹೇಳಿ ಅವರನ್ನು ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಅವರು ಧರಿಸಿದ್ದ ಚಿನ್ನಾಭರಣಗಳು . ಅವರಲ್ಲಿದ್ದ ಹಣ, ಹಾಗೂ ಬೆಲೆ ಬಾಳುವ ಇನ್ನಿತರ ವಸ್ತುಗಳನ್ನು ಕಿತ್ತುಕೊಂಡು ನಂತರ ಅವರನ್ನು ಕಾರಿನಿಂದ ಹೊರಗೆ ದಬ್ಬಿ ಪರಾರಿಯಾಗುತ್ತಿದ್ದ. ಇದುವರೆಗೂ ಬಂಧಿತ ಆರೋಪಿ ಮಂಡ್ಯ, ತುಮಕೂರು, ರಾಮನಗರ ಹಾಗೂ ಹಾಸನ ಜಿಲ್ಲೆಗಳಲ್ಲಿ ಇಂತಹ 23 ಪ್ರಕರಣಗಳನ್ನು ಎಸಗಿ ಪರಾರಿಯಾಗಿದ್ದನೆಂದು ಪೊಲೀಸರು ತಿಳಿಸಿದ್ದಾರೆ.
ಮಂಡ್ಯ ಜಿಲ್ಲೆಯಲ್ಲಿ ನಡೆದ ಪ್ರಕರಣಗಳಿಗೆ ಸಂಬಂಧಿಸಿದಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರ ಆದೇಶದ ಮೇರೆಗೆ ನಾಗಮಂಗಲ ಡಿ.ವೈ.ಎಸ್.ಪಿ. ಹೆಚ್. ಎನ್. ಧರ್ಮೆಂದ್ರ ರವರ ನೇತೃತ್ವದಲ್ಲಿ ಕಾರ್ಯಾಚರಣೆಯನ್ನು ನಡೆಸಿ ಆರೋಪಿ ಸೋಮಶೇಖರನನ್ನು ಕಳೆದ ತಿಂಗಳ 28 ರಂದು ಬಂಧಿಸಲಾಗಿದೆ.

Leave a Comment