ಮಹಿಳೆಗೆ ಗುಪ್ತಾಂಗ ತೋರಿಸಿದ ವಿಕೃತ ಸೆರೆ

ಮುಂಬೈ, ಮೇ ೧೪- ಎಟಿಎಂನಲ್ಲಿ ಹಣ ಡ್ರಾ ಮಾಡಿಕೊಳ್ಳುತ್ತಿದ್ದ ಮಹಿಳೆಗೆ ವ್ಯಕ್ತಿಯೊಬ್ಬ ಮರ್ಮಾಂಗ ತೋರಿಸಿದ ಘಟನೆ ಮುಂಬೈನಲ್ಲಿ ನಡೆದಿದೆ.
ಮುಂಬೈನ ಕೋಪ್ರಿ ನಿವಾಸಿ ಸಂದೀಪ್ ಕುಂಭಕರ್ಣ (೩೮) ಮರ್ಮಾಂಗ ತೋರಿಸಿದ ವ್ಯಕ್ತಿ. ಹರಿ ಓಂ ನಗರದ ರಸ್ತೆಯಲ್ಲಿನ ಸ್ಟೇಟ್ ಬ್ಯಾಂಕ್ ಎಟಿಎಂನಲ್ಲಿ ನಿನ್ನೆ ನಸುಕಿನ ಜಾವ ೩ ಗಂಟೆ ಸುಮಾರಿಗೆ ಘಟನೆ ನಡೆದಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಆಗಿದ್ದೇನು?:
ಹರಿ ಓಂ ನಗರದ ರಸ್ತೆಯಲ್ಲಿರುವ ಸ್ಟೇಟ್ ಬ್ಯಾಂಕ್ ಎಟಿಎಂನಲ್ಲಿ ಮಹಿಳೆ ಹಣ ಪಡೆಯುತ್ತಿದ್ದಳು. ಈ ವೇಳೆ ಅಲ್ಲಿಗೆ ಬಂದ ಸಂದೀಪ್ ಕೂಡ ಎಟಿಎಂನಿಂದ ಹಣ ಪಡೆಯುವ ನೆಪದಲ್ಲಿ ಮಹಿಳೆಗೆ ಮರ್ಮಾಂಗ ತೋರಿಸಿದ್ದಾನೆ. ಈ ದೃಶ್ಯವನ್ನು ಮಹಿಳೆಯು ತನ್ನ ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದಾಳೆ. ಇದರಿಂದ ಮುಜುಗುರಕ್ಕೆ ಒಳಗಾದ ವ್ಯಕ್ತಿ ಅಲ್ಲಿಂದ ಪರಾರಿಯಾಗಿದ್ದಾನೆ. ಎಟಿಎಂನಿಂದ ಹೊರ ಬಂದ ಮಹಿಳೆ ಅಲ್ಲೇ ಸಮೀಪದ ಗಸ್ತಿನ ವ್ಯಾನಿನಲ್ಲಿದ್ದ ಪೊಲೀಸ್ ಸಿಬ್ಬಂದಿಗೆ ವಿಡಿಯೋ ತೋರಿಸಿದ್ದಾಳೆ. ಕೂಡಲೇ ಜಾಗೃತರಾದ ಪೊಲೀಸರು ಆರೋಪಿಯನ್ನು ಒಂದು ಕಿ.ಮೀ ಬೆನ್ನಟ್ಟಿ ಬಂಧಿಸಿದ್ದಾರೆ. ಈ ಘಟನೆಯ ಕುರಿತು ಟ್ವೀಟ್ ಮಾಡಿರುವ ಮಹಿಳೆ, ರಿಕ್ಷಾ ಚಾಲಕನಿಗೆ ಹಣ ಪಾವತಿಸಲು ಎಟಿಎಂನಿಂದ ಹಣ ಡ್ರಾ ಮಾಡಿಕೊಳ್ಳುತ್ತಿದ್ದೆ. ಈ ವೇಳೆ ಹಣ ಪಡೆಯಲು ಬಂದಿದ್ದ ಯುವಕ ತನ್ನ ಮರ್ಮಾಂಗವನ್ನು ತೋರಿಸಿದ್ದಾನೆ. ಅದಕ್ಕಾಗಿ ಹಣ ನೀಡುವಂತೆ ಒತ್ತಾಯಿಸಿದ. ಅಷ್ಟೇ ಅಲ್ಲದೆ ನನ್ನನ್ನು ಮುಟ್ಟಲು ಬಂದಿದ್ದ ಎಂದು ಹೇಳಿದ್ದಾಳೆ. ಆರೋಪಿ ಸಂದೀಪ್ ಕುಂಭಕರ್ಣ ಈ ಹಿಂದೆಯೂ ಇಂತಹ ಕೃತ್ಯ ಎಸಗಿದ್ದ ಎಂದು ಕೆಲ ಮಹಿಳೆಯರು ಹೇಳಿಕೊಂಡಿದ್ದಾರೆ. ಈ ಸಂಬಂಧ ಸಂದೀಪ್ ವಿರುದ್ಧ ಐಪಿಸಿ ಸೆಕ್ಷನ್ ೩೫೪ (ಮಹಿಳೆಯ ಮಾನಭಂಗಕ್ಕೆ ಯತ್ನ), ೫೦೯ (ಮಹಿಳೆಯ ಮುಂದೆ ಅಸಭ್ಯ ರೀತಿ ವರ್ತನೆ) ಅಡಿ ಪ್ರಕರಣ ದಾಖಲಾಗಿದೆ. ಆರೋಪಿಯನ್ನು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

ಮುಂಬೈ

Leave a Comment