ಮಹಿಳೆಗೆ ಇರಿದು ಸರಗಳವು

ಬೆಂಗಳೂರು, ಮಾ. ೧೫- ವಾಯು ವಿಹಾರಕ್ಕೆ ಹೋಗುತ್ತಿದ್ದ ಮಹಿಳೆಯೊಬ್ಬರಿಗೆ ಚಾಕುವಿನಿಂದ ಕೈಗೆ ಚುಚ್ಚಿ, ಬೆದರಿಸಿ ಮಾಂಗಲ್ಯಸರ ಕಸಿದು ಪರಾರಿಯಾಗಿರುವ ದುರ್ಘಟನೆ ಬಾಗಲೂರಿನಲ್ಲಿ ನಡೆದಿದೆ.

ಬಾಗಲೂರಿನ ವಿಮಾನ ನಿಲ್ದಾಣ ರಸ್ತೆಯ ಲಕ್ಷ್ಮಿ (22) ಚಾಕು ಇರಿತದಿಂದ ಕೈಗೆ ಗಾಯಗೊಂಡು ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಮನೆಯ ಸಮೀಪದ ಏರ್‌ಪೋರ್ಟ್ ರಸ್ತೆಯ ಮೇರಿ ಎನ್‌ಕ್ಲೈವ್ ಸ್ಕೂಲ್ ರಸ್ತೆಯಲ್ಲಿ ನಿನ್ನೆ ಮುಂಜಾನೆ 5.30ರ ವೇಳೆ ಲಕ್ಷ್ಮಿ ಅವರು, ವಾಯು ವಿಹಾರ ಮಾಡುತ್ತಿದ್ದಾಗ ಬೈಕ್‌ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಸರ ಕಸಿಯಲು ಮುಂದಾಗಿದ್ದಾರೆ.

ಪ್ರತಿರೋಧ ತೋರಿದ ಲಕ್ಷ್ಮಿ ಅವರ ಕೈಗೆ ಚಾಕುವಿನಿಂದ ಇರಿದು, ಬೆದರಿಸಿ 40 ಗ್ರಾಂ. ತೂಕದ ಸರ ಕಸಿದು ಪರಾರಿಯಾಗಿದ್ದು, ಈ ಸಂಬಂಧ ಬಾಗಲೂರು ಪೊಲೀಸರು ಪ್ರಕರಣ ದಾಖಲಿಸಿ, ದುಷ್ಕರ್ಮಿಗಳ ಪತ್ತೆಗೆ ತೀವ್ರ ಶೋಧ ನಡೆಸಿದ್ದಾರೆ.

Leave a Comment