ಮಹಿಳಾ ಸಬಲೀಕರಣಕ್ಕೆ ಆದ್ಯತೆ: ಜಯಮಾಲಾ

ಮೈಸೂರು,ಅ.11- ಮಹಿಳೆಯರ ಸಬಲೀಕರಣಕ್ಕಾಗಿ ಸರ್ಕಾರ ಹಲವು ಯೋಜನೆಗಳನ್ನು ರೂಪಿಸಿಕೊಟ್ಟಿದ್ದು ಮಹಿಳೆಯರು ಅದನ್ನು ಸದುಪಯೋಗಪಡಿಸಿಕೊಂಡು ಸಮಾಜದಲ್ಲಿ ಗುರುತಿಸಿಕೊಳ್ಳಿ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವೆ ಜಯಮಾಲಾ ತಿಳಿಸಿದರು.
ಜೆ.ಕೆ. ಮೈದಾನದಲ್ಲಿಂದು ಮಹಿಳಾ ಮತ್ತು ಮಕ್ಕಳ ದಸರಾ ಉಪಸಮಿತಿ ವತಿಯಿಂದ ಮಹಿಳಾ ದಸರಾ ಮತ್ತು ಉದ್ಯಮ ಸಂಭ್ರಮ, ವಸ್ತು ಪ್ರದರ್ಶನ ಮತ್ತು ಮಾರಾಟ ಮೇಳದ ಉದ್ಘಾಟನೆ ನೆರವೇರಿಸಿ ಮಾತನಾಡಿದರು. ಅವಕಾಶ ಸಿಗದಿದ್ದರೆ ಮಹಿಳೆಯರ ಸಬಲೀಕರಣ ಆಗುವುದಾದರೂ ಹೇಗೆ? ಮಹಿಳೆಯರಿಗೆ ಉದ್ಯೋಗ ಸಿಗಬೇಕು. ಅವರೂ ಕೂಡ ಮುಂದೆ ಬರಬೇಕು. ಮಹಿಳೆಯರನ್ನು ಸಬಲೀಕರಣಗೊಳಿಸಬೇಕು ಎಂಬುದು ಸರ್ಕಾರದ ಜೊತೆ ಎಲ್ಲರ ಆಸೆ ಕೂಡ ಆಗಿದೆ ಎಂದರು.
ಸರ್ಕಾರ ಮಹಿಳೆಯರಿಗೆಂದೇ ಹಲವು ಯೋಜನೆಗಳನ್ನು ರೂಪಿಸಿದೆ. ಸರ್ಕಾರ ಮಹಿಳೆಯರು ಉತ್ಪಾದಿಸುವ ವಸ್ತುಗಳಿಗಾಗಿ ಮಾರುಕಟ್ಟೆಯನ್ನೂ ಕೂಡ ಕಲ್ಪಿಸಿ ಕೊಟ್ಟಿದೆ. ಈ ಮಾರುಕಟ್ಟೆಯ ಮೂಲಕ ಹೊರ ರಾಜ್ಯಗಳಿಂದ ಒಳ್ಳೊಳ್ಳೆಯ ವಸ್ತುಗಳನ್ನು ತರಿಸಿಕೊಳ್ಳಬಹುದು, ಹಾಗೂ ನಮ್ಮಲ್ಲಿಯ ವಸ್ತುಗಳನ್ನು ಅಲ್ಲಿಗೆ ಕಳುಹಿಸಬಹುದು. ಗುಣಮಟ್ಟದ ತರಬೇತಿಯನ್ನೂ ಕೂಡ ಹೆಣ್ಣುಮಕ್ಕಳು ಪಡೆಯಬಹುದು. ನಮಗೇನು ಬೇಕು ಎನ್ನುವುದನ್ನು ನಾವು ಅವರಿಂದ ಕಲಿಯಬಹುದು. ನಮ್ಮಿಂದ ಅವರೂ ಕೂಡ ಕಲಿಯಬಹುದು ಎಂದು ತಿಳಿಸಿದರು. ಇಡೀ ವರ್ಷದಿಂದ ಮಾಡಿರತಕ್ಕಂತಹ ಕರಕುಶಲ ವಸ್ತುಗಳನ್ನು ಇಲ್ಲಿ ಪ್ರದರ್ಶನಕ್ಕೆ ಇರಿಸಲಾಗಿದೆ. ನಮ್ಮ ಹೆಣ್ಣು ಮಕ್ಕಳಲ್ಲಿ ಇರತಕ್ಕಂತಹ ಎಲ್ಲ ಪ್ರತಿಭೆಗಳೂ ಹೊರಗೆ ಬಂದಿವೆ. ನಿಮ್ಮಲ್ಲಿರುವ ಕಲೆಗಳನ್ನು ನೋಡಿದರೆ ಖೂಷಿಯಾಗತ್ತೆ ಎಂದು ಶ್ಲಾಘಿಸಿದರು. ಬೀದರ್ ನಿಂದ ಚಾಮರಾಜನಗರದವರೆಗೂ, ಕಾರವಾರದಿಂದ ಕೋಲಾರದವರೆಗಿನ ಎಲ್ಲ ಮಹಿಳೆಯರೂ ಪಾಲ್ಗೊಂಡಿದ್ದಾರೆ. ಇದೊಂದು ಸುಸಂದರ್ಭ. ದಸರಾ ನೋಡಲು ಬಂದವರು, ಬರುವವರೂ ನಮ್ಮ ಹೆಣ್ಣು ಮಕ್ಕಳು ಬೆವರು ಸುರಿಸಿ ಮಾಡಿದ ಕಲೆಗಳನ್ನು ಒಂದು ಸಲ ಬಂದು ನೋಡಿ ಹೋಗಿ ಅವರಿಗೂ ಖುಷಿಯಾಗಲಿದೆ ಎಂದರು.
ಇದೇ ವೇಳೆ ಪ್ರದರ್ಶನ ಮಳಿಗೆಗಳಿಗೆ ಹೋಗಿ ಸಚಿವರು ಖುದ್ದು ಪರಿಶೀಲಿಸಿದರಲ್ಲದೇ ಮಾಹಿತಿ ಪಡೆದುಕೊಂಡರು.
ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಜ್ಯೋತಿ ಮತ್ತಿತರರು ಉಪಸ್ಥಿತರಿದ್ದರು.

Leave a Comment