ಮಹಿಳಾ ವಿಶ್ವಕಪ್ ಟಿ20 ಸೆಮಿಫೈನಲ್‌ಗೆ ಭಾರತ- ಕಿವೀಸ್ ವಿರುದ್ಧ ರೋಚಕ ಜಯ

ಮೆಲ್ಬೋರ್ನ್, ಫೆ 27 – ಅತ್ತ ಕಿವೀಸ್ ತಂಡದ ವಿರುದ್ಧ ಟೀಂ ಇಂಡಿಯಾ ಆಟಗಾರರು ಏಕದಿನ ಹಾಗೂ ಮೊದಲ ಟೆಸ್ಟ್ ಪಂದ್ಯದಲ್ಲಿ ಸೋತು ಮುಖಭಂಗ ಅನುಭವಿಸಿದ್ದರೇ ಇತ್ತ ಮಹಿಳಾ ಟಿ20 ವಿಶ್ವಕಪ್ ಪಂದ್ಯದಲ್ಲಿ ಭಾರತದ ವನಿತೆಯರ ತಂಡ ಕಿವೀಸ್ ವನಿತೆಯರ ತಂಡವನ್ನು ಮಣಿಸಿ ಸೆಮಿಫೈನಲ್‌ಗೆ ಲಗ್ಗೆ ಇಟ್ಟಿದೆ.

ಇಂದು ನಡೆದ ಪಂದ್ಯದಲ್ಲಿ ಕೊನೆಯ ಎಸೆತದವರೆಗೂ ತೀವ್ರ ಕುತೂಹಲ ಕೆರಳಿಸಿತ್ತು. ನ್ಯೂಜಿಲೆಂಡ್ ವಿರುದ್ಧ ಭಾರತ ಅಂತಿಮ ಕ್ಷಣದಲ್ಲಿ ನಾಲ್ಕು ರನ್‌ಗಳ ರೋಚಕ ಜಯ ಸಾಧಿಸುವ ಮೂಲಕ ಸೆಮಿಫೈನಲ್ ಪ್ರವೇಶ ಮಾಡಿ ಗೆಲುವಿನ ನಾಗಲೋಟ ಮುಂದುವರೆಸಿದೆ. ಇಲ್ಲಿನ ಜಂಕ್ಷನ್ ಓವಲ್ ಕ್ರೀಡಾಂಗಣದಲ್ಲಿ ಭಾರತ ನೀಡಿದ್ದ 134 ರನ್ ಗುರಿ ಬೆನ್ನತ್ತಿದ್ದ ನ್ಯೂಜಿಲೆಂಡ್ ತಂಡ ಕೊನೆಯ ಎಸೆತದವರೆಗೂ ಹೋರಾಟ ನಡೆಸಿತಾದರೂ ನಿಗದಿತ 20 ಓವರ್‌ಗಳಿಗೆ ಆರು ವಿಕೆಟ್ ಕಳೆದುಕೊಂಡು 129 ರನ್ ಗಳಿಗೆ ಶಕ್ತವಾಯಿತು. ಆ ಮೂಲಕ ಕೇವಲ ನಾಲ್ಕು ರನ್‌ಗಳಿಂದ ಸೋಲು ಒಪ್ಪಿಕೊಂಡಿತು.

ನ್ಯೂಜಿಲೆಂಡ್ ಇನಿಂಗ್ಸ್‌ನಲ್ಲಿ ಅತ್ಯಂತ ಆಕರ್ಷಕ ಬ್ಯಾಟಿಂಗ್ ಮಾಡಿದ ಅಮೇಲಿಯಾ ಕೆರ್ ಅಂತಿಮ ಎಸೆತದವರೆಗೂ ಸ್ಪೋಟಕ ಬ್ಯಾಟಿಂಗ್ ಮಾಡಿದರು. ಕೇವಲ 19 ಎಸೆತಗಳಲ್ಲಿ ಆರು ಬೌಂಡರಿಯೊಂದಿಗೆ 34 ರನ್ ಗಳಿಸಿದರು. ಆ ಮೂಲಕ ತಂಡದ ಗೆಲುವಿಗೆ ಸಾಕಷ್ಟು ಹೋರಾಟ ನಡೆಸಿದರೂ ಪ್ರಯೋಜನವಾಗಲಿಲ್ಲ. ಇದಕ್ಕೂ ಮುನ್ನ ಮಧ್ಯಮ ಕ್ರಮಾಂಕದಲ್ಲಿ ಮ್ಯಾಡಿ ಗ್ರೀನ್ ಮತ್ತು ಕ್ಯಾಟಿ ಮಾರ್ಟಿನ್ ಕ್ರಮವಾಗಿ 24 ಮತ್ತು 25 ರನ್ ಗಳಿಸಿ ವಿಕೆಟ್ ಒಪ್ಪಿಸಿದ್ದರು. ಇನ್ನುಳಿದಂತೆ ನಾಯಕಿ ಸೋಫಿಯಾ ಡಿವೈನ್(14) ಸೇರಿದಂತೆ ರಾಚೆಲ್ ಪ್ರೀಸ್ಟ್(12) ಹಾಗೂ ಸೂಜಿ ಬೇಟ್ಸ್(6) ನಿರಾಸೆ ಮೂಡಿಸಿದರು. ನ್ಯೂಜಿಲೆಂಡ್ ತಂಡಕ್ಕೆ ಸಾಧಾರಣ ಮೊತ್ತದ ಗುರಿ ನೀಡಿದ್ದರೂ ಶಿಸ್ತುಬದ್ಧ ಬೌಲಿಂಗ್ ನೆರವಿನಿಂದ ಭಾರತ ಗೆದ್ದು ಬೀಗಿತು. ಎಲ್ಲ ಬೌಲರ್‌ಗಳು ತಲಾ ಒಂದೊಂದು ವಿಕೆಟ್ ಪಡೆದು ಮಿಂಚಿದರು.

ಟಾಸ್ ಗೆದ್ದು ಭಾರತವನ್ನು ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿದ ನ್ಯೂಜಿಲೆಂಡ್ ನಾಯಕಿ ಸೋಫಿಯಾ ಡಿವೈನ್ ನಿರ್ಧಾರವನ್ನು ತಂಡದ ಬೌಲಿಂಗ್ ವಿಭಾಗ ಸಮರ್ಥಿಸಿಕೊಂಡಿತು. ಮಧ್ಯಮ ಕ್ರಮಾಂಕದ ಬ್ಯಾಟಿಂಗ್ ವೈಫಲ್ಯದಿಂದಾಗಿ ಭಾರತ ನಿಗದಿತ ೨೦ ಓವರ್ ಗಳಿಗೆ ಎಂಡು ವಿಕೆಟ್ ನಷ್ಟಕ್ಕೆ ೧೩೩ ರನ್ ಗಳಿಸಿತು. ಆ ಮೂಲಕ ನ್ಯೂಜಿಲೆಂಡ್ ಗೆ ೧೩೪ ರನ್ ಸಾಧಾರಣ ಗುರಿ ನೀಡಿತ್ತು ನ್ಯೂಜಿಲೆಂಡ್ ಪರ ಅತ್ಯುತ್ತಮ ಬೌಲಿಂಗ್ ಮಾಡಿದ ರೋಸ್ಮೇರಿ ಮೈರ್ ಮತ್ತು ಅಮೇಲಿಯಾ ಕೆರ್ ತಲಾ ಎರಡು ವಿಕೆಟ್ ಪಡೆದರು. ಲೀ ತಹುಹಾ, ಸೋಫಿಯಾ ಡಿವೈನ್ ಮತ್ತು ಲೆಹ್ ಕಸ್ಪ್ರೆಕ್ ತಲಾ ಒಂದು ವಿಕೆಟ್ ಪಡೆದರು.
ಸಂಕ್ಷಿಪ್ತ ಸ್ಕೋರ್
ಭಾರತ: 20 ಓವರ್ 133/8(ಶಫಾಲಿ ವರ್ಮಾ 46, ತಾನಿಯಾ ಭಾಟಿಯಾ 23; ರೋಸ್ಮೇರಿ ಮೈರ್ 27 ಕ್ಕೆ 2, ಅಮೇಲಿಯಾ ಕೆರ್ 21 ಕ್ಕೆ 2)

ನ್ಯೂಜಿಲೆಂಡ್: 20 ಓವರ್  129/6(ಅಮೇಲಿಯಾ ಕೆರ್ ಔಟಾಗದೆ 34, ಕ್ಯಾಟಿ ಮಾರ್ಟಿನ್ 25, ಮ್ಯಾಡಿ ಗ್ರೀನ್ 24; ಶಿಖಾ ಪಾಂಡೆ 21 ಕ್ಕೆ 1, ರಾಜೇಶ್ವರಿ ಗಾಯಕ್ವಾಡ್ 22 ಕ್ಕೆ 1)

Leave a Comment