ಮಹಿಳಾ ಬ್ಯಾಂಕ್‌ಗಳನ್ನು ಹೆಚ್ಚಿಸಲು ಸಲಹೆ

ಬೆಂಗಳೂರು, ಆ.೨೫-ರಾಜ್ಯದಲ್ಲಿ ಬೆರಳೆಣಕೆಯಷ್ಟು ಮಹಿಳಾ ಬ್ಯಾಂಕ್‌ಗಳು ಉಳಿದಿದ್ದು, ಇದರ ಸಂಖ್ಯೆ ಹೆಚ್ಚಿಸಿ, ಸ್ವಾವಲಂಬನೆ ಮೂಲಕ ದೇಶಕ್ಕೆ ಕೊಡುಗೆ ನೀಡಬೇಕು ಎಂದು ಮಾಜಿ ಸಚಿವ ಹೆಚ್.ಕೆ.ಪಾಟೀಲ್ ನುಡಿದರು.

ನಗರದಲ್ಲಿಂದು ಪುರಭವನದಲ್ಲಿ ಶ್ರೀ ಲಕ್ಷ್ಮೀ ಮಹಿಳಾ ಸಹಕಾರ ಬ್ಯಾಂಕ್ ಏರ್ಪಡಿಸಿದ್ದ, ರಜತ ಮಹೋತ್ಸವ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ರಾಜ್ಯದಲ್ಲಿ ೨೬೪ ಸಹಕಾರಿ ಬ್ಯಾಂಕ್‌ಗಳಿದ್ದು, ೪೦೦ ಕೋಟಿಗೂ ಹೆಚ್ಚು ಲಾಭ, ಐದು ಲಕ್ಷ ಕೋಟಿ ಬಂಡವಾಳದಲ್ಲಿ ಹೆಜ್ಜೆ ಹಾಕಲಾಗುತ್ತಿವೆ. ಇದು ಅತ್ಯದ್ಬುತ ಬೆಳವಣಿಗೆಯಾಗಿದೆ.ಮಹಿಳಾ ಸಹಕಾರಿ ಬ್ಯಾಂಕ್‌ಗಳು ಲಾಭದ ಜೊತೆಗೆ ಮಹಿಳಾ ಉದ್ಯೋಗ ಸೃಷ್ಠಿಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ತಿಳಿಸಿದರು.

ಪ್ರತಿ ವರ್ಷ ೨೫೦ಕ್ಕೂ ಮಹಿಳಾ ಉದ್ಯೋಗ ಸೃಷ್ಟಿಯಾದರೆ ಸಮಾಜದಲ್ಲಿ ಮಹಿಳೆಯರು ಆರ್ಥಿಕವಾಗಿ ಸಬಲರಾಗುತ್ತಾರೆ ಎಂದ ಅವರು, ಇತ್ತೀಚೆಗೆ ಬ್ಯಾಂಕ್‌ಗಳ ನಿಬಂಧನೆಗಳನ್ನು ಸರಳಿಕರಣಗೊಳಿಸಲಾಗಿದ್ದು, ಉನ್ನತಿಯತ್ತ ಮಹಿಳಾ ಬ್ಯಾಂಕ್ ಹೆಜ್ಜೆ ಇಡಬೇಕಿದೆ ಎಂದರು.

ಸಹಕಾರಿ ಬ್ಯಾಂಕ್ ಕ್ಷೇತ್ರಕ್ಕೆ ಸರ್ಕಾರದ ಸಹಾಯ, ಸಹಕಾರ ವಿಲ್ಲ. ಇದರ ಅವಶ್ಯಕತೆಯೂ ಇಲ್ಲ. ಸಹಕಾರಿ ಕ್ಷೇತ್ರ ಬೆಳೆಯಬಾರದು ಎಂಬ ಉದ್ದೇಶದಿಂದ ಅನುಮತಿಯನ್ನೂ ನೀಡಲಿಲ್ಲ. ಸಹಕಾರಿ ಕ್ಷೇತ್ರದ ಎಲ್ಲ ಬೆಳವಣಿಗೆ ಗಳಿಗೂ ಆರ್‌ಬಿಐ ಆಧುನಿಕ ತಂತ್ರಜ್ಞಾನ ಅಳವಡಿಕೆ ನೆಪದಲ್ಲಿ ಅಡೆತಡೆ ತರುತ್ತಿದ್ದಾರೆ.ಆದರೆ, ಸಹಕಾರಿ ಬ್ಯಾಂಕ್‌ಗಳ ಬೆಳವಣಿಗೆಗೆ ಅರ್‌ಬಿಐ ಉತ್ತಮ ಅವಕಾಶಗಳನ್ನು ಕಲ್ಪಿಸಿ ಪ್ರೋತ್ಸಾಹಿಸಬೇಕಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಬಿಬಿಎಂಪಿ ಮೇಯರ್ ಗಂಗಾಂಬಿಕೆ ಮಲ್ಲಿಕಾರ್ಜುನ, ಮಾಜಿ ಸಚಿವೆ
ಲೀಲಾವತಿ ಆರ್. ಪ್ರಸಾದ್, ಪಟ್ಟಣ ಸಹಕಾರಿ ಸಂಘದ ಸದಸ್ಯ ಕೃಷ್ಣಾ, ಬ್ಯಾಂಕ್ ಅಧ್ಯಕ್ಷೆ ವಿ. ಕಮಲಾ ನಟರಾಜನ್, ಸಂಸ್ಥಾಪಕ ಅಧ್ಯಕ್ಷೆ ಡಾ. ವಾಸವಿ ರಂಗಮಾಧಾಮ್ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.

Leave a Comment