ಮಹಿಳಾ ಪೌರಕಾರ್ಮಿಕರಿಗೆ ಬಾಗಿನ

ಗೌರಿ ಹಬ್ಬ: ಪಾಲಿಕೆ ಸದಸ್ಯರಿಂದ ಅರ್ಥಪೂರ್ಣ ಆಚರಣೆ
ಮೈಸೂರು, ಸೆ. 12. ಇಂದು ಗೌರಿ ಹಬ್ಬದ ಹಿನ್ನೆಲೆಯಲ್ಲಿ ಮೈಸೂರು ಮಹಾನಗರ ಪಾಲಿಕೆಯ ಸದಸ್ಯರಿಬ್ಬರು
ಗೌರಿ ಹಬ್ಬವನ್ನ ಅರ್ಥಪೂರ್ಣವಾಗಿ ಆಚರಿಸಿದರು. ಮಹಾನಗರ ಪಾಲಿಕೆಯ ಮಹಿಳಾ ಪೌರಕಾರ್ಮಿಕರಿಗೆ ಬಾಗಿನ ವಿತರಿಸುವ ಮೂಲಕ ಹಬ್ಬಕ್ಕೆ ಇನ್ನಷ್ಟು ಮೆರಗು ತಂದರು. 3ನೇ ವಾರ್ಡಿನ ಪಕ್ಷೇತರ ಸದಸ್ಯ ಕೆ.ವಿ. ಶ್ರೀಧರ್ ಹಾಗೂ 55ನೇ ವಾರ್ಡಿನ ಬಿಜೆಪಿ ಬಂಡಾಯ ಸದಸ್ಯ ಮಾ.ವಿ. ರಾಮಪ್ರಸಾದ್ ಹೀಗೆ ವಿಭಿನ್ನ ರೀತಿಯಲ್ಲಿ ಗೌರಿ ಹಬ್ಬ ಆಚರಿಸಿ ಗಮನ ಸೆಳೆದರು.
ಈ ವೇಳೆ ಮಾತನಾಡಿದ ಶ್ರೀಧರ್, ಗೌರಿ ಹಬ್ಬದಲ್ಲಿ ಮಹಿಳಾ ಪೌರಕಾರ್ಮಿಕರಿಗೆ ಬಾಗಿನ ನೀಡುವ ಸಂಪ್ರದಾಯವನ್ನು ತಾವು ಪ್ರತಿವರ್ಷ ಪಾಲಿಸಿಕೊಂಡು ಬಂದಿರುವುದಾಗಿ ಹೇಳಿದರು.
ತಮ್ಮ ವಾರ್ಡಿನ ಪರಿಸರವನ್ನು ಶುಚಿಯಾಗಿಡುವಲ್ಲಿ ಪೌರಕಾರ್ಮಿಕರ ಪರಿಶ್ರಮ ದೊಡ್ಡದಾಗಿದೆ ಎಂದರು.
ಮಾ.ವಿ. ರಾಮಪ್ರಸಾದ್ ಮಾತನಾಡಿ, ವಾರ್ಡ್ ಶುಚಿಯಾಗಿಡುವಲ್ಲಿ ಮಹಿಳಾ ಪೌರಕಾರ್ಮಿಕರ ಪಾತ್ರವನ್ನು ಕಡೆಗಣಿಸುವಂತಿಲ್ಲ. ಈ ಹಿನ್ನೆಲೆಯಲ್ಲಿ ಆ ಎಲ್ಲ ಮಹಿಳಾ ಪೌರಕಾರ್ಮಿಕರಿಗೆ ಇನ್ನಷ್ಟು ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಈ ಕಾರ್ಯ ಹಮ್ಮಿಕೊಳ್ಳಲಾಗಿದೆ ಎಂದರು.

Leave a Comment