ಮಹಿಳಾ ಟಿ೨೦ ವಿಶ್ವಕಪ್-ಆಂಗ್ಲರಿಗೆ ಶರಣಾದ ಕೌರ್ ಪಡೆ ಆಸೀಸ್/ಆಂಗ್ಲರ ಮಧ್ಯೆ ಫೈನಲ್ ಫೈಟ್

ಆಂಟಿಗುವಾ, ನ ೨೩- ಇಲ್ಲಿನ ನಾರ್ಥ್ ಸೌಂಡ್‌ನ ವಿವಿಯನ್ ರಿಚರ್ಡ್ಸ್ ಕ್ರಿಕೆಟ್ ಮೈದಾನದಲ್ಲಿ ನಡೆದ ಎರಡನೇ ಸೆಮಿಫೈನಲ್ ಹಣಾಹಣಿಯಲ್ಲಿ ಇಂಗ್ಲೆಂಡ್‌ಗೆ ಭಾರತದ ವನಿತೆಯರ ತಂಡ ಸೋಲನುಭವಿಸುವ ಮೂಲಕ ಹರ್ಮನ್‌ಪ್ರೀತ್ ಪಡೆಯ ವಿಶ್ವಕಪ್ ಕನಸು ಭಗ್ನವಾಗಿದೆ.

ಟಿ೨೦ ಮಹಿಳಾ ವಿಶ್ವಕಪ್‌ನ ಗ್ರೂಪ್ ಸ್ಟೇಜ್‌ನಲ್ಲಿ ನಾಲ್ಕಕ್ಕೆ ನಾಲ್ಕೂ ಪಂದ್ಯಗಳನ್ನು ಗೆದ್ದು ಸೆಮಿಫೈನಲ್ ಪ್ರವೇಶಿಸಿದ್ದ ಭಾರತದ ವನಿತೆಯರು ಆಘಾತಕಾರಿ ಸೋಲನುಭವಿಸಿದ್ದು, ಕ್ರಿಕೆಟ್ ಅಭಿಮಾನಿಗಳು ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.

india-woman-team1

ಇಂಗ್ಲೆಂಡ್‌ನ ಮಾರಕ ಬೌಲಿಂಗ್‌ಗೆ ತತ್ತರಿಸಿದ ಭಾರತ ಮಹಿಳಾ ತಂಡ ೧೧೨ ರನ್ ಮೊತ್ತ ಕಲೆಹಾಕಿತ್ತು. ಪ್ರತಿಯಾಗಿ ಆಂಗ್ಲರ ಪಡೆಯು ೮ ವಿಕೆಟ್ ಹಾಗೂ ೧೭ ಬಾಲ್ ಕೈಲಿರುಂತೆಯೇ ಗೆಲುವಿನ ಗುರಿ ಮುಟ್ಟಿತು. ಇದರೊಂದಿಗೆ ಫೈನಲ್ ತಲುಪಿದ ಇಂಗ್ಲೆಂಡ್ ವನಿತೆಯರು ಟಿ೨೦ ಚಾಂಪಿಯನ್‌ಪಟ್ಟಕ್ಕಾಗಿ ಆಸ್ಟ್ರೇಲಿಯಾವನ್ನು ಎದುರಿಸಲಿದ್ದಾರೆ.

ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಹರ್ಮನ್‌ಪ್ರೀತ್ ಪಡೆ ಉತ್ತಮ ಆರಂಭ ಪಡೆದರೂ ಮಧ್ಯಮ ಕ್ರಮಾಂಕದಲ್ಲಿ ವೈಫಲ್ಯ ಅನುಭವಿಸಿತು. ಸ್ಮೃತಿ ಮಂದಾನ ೩೪ ರನ್ ಹಾಗೂ ಜೆಮಿಮ ರೋಡ್ರಿಗಸ್ ೨೬ ರನ್ ಗಳಿಸಿದ್ದು ಬಿಟ್ಟರೆ ಉಳಿದವರಿಂದ ಉತ್ತಮ ಕೊಡುಗೆ ಬರಲಿಲ್ಲ. ಆರಂಭಿಕ ನಾಲ್ವರು ಆಟಗಾರ್ತಿಯರು ಎರಡಂಕಿ ದಾಟಿದರೆ ಉಳಿದ ಯಾರೂ ಸಹ ಏಳಕ್ಕಿಂತ ಹೆಚ್ಚು ರನ್ ಬಾರಿಸಲಿಲ್ಲ. ನೀರಸ ಬ್ಯಾಟಿಂಗ್ ಪರಿಣಾಮ ೧೯.೩ ಓವರ್‌ನಲ್ಲಿ ಭಾರತದ ಮಹಿಳಾ ಪಡೆ ೧೧೨ ರನ್ ಗಳಿಸಿ ಆಲ್‌ಔಟ್ ಆಯಿತು. ಅಲ್ಪ ಮೊತ್ತದ ಗುರಿ ಹೊತ್ತ ಇಂಗ್ಲೆಂಡ್ ಮಹಿಳಾ ತಂಡ ೨೪ ರನ್ನಾಗುವಷ್ಟರಲ್ಲಿ ೨ ವಿಕೆಟ್ ಕಳೆದುಕೊಂಡಾಗ ರೋಚಕ ಹಣಾಹಣಿಯ ಸಾಧ್ಯತೆ ಕಾಣುತ್ತಿತ್ತು. ಆದರೆ, ಆಮಿ ಜೋನ್ಸ್ ಮತ್ತು ನಟಾಲೀ ಸ್ಕೈವರ್ ಅವರು ಸಮಯೋಚಿತ ಪ್ರದರ್ಶನ ನೀಡಿ ಭಾರತಕ್ಕಿದ್ದ ಸಣ್ಣ ಗೆಲುವಿನ ಆಸೆಗೂ ತಣ್ಣೀರೆರಚಿದರು. ಗ್ರೂಪ್ ಸ್ಟೇಜ್‌ನಲ್ಲಿ ಆಸ್ಟ್ರೇಲಿಯಾವನ್ನೂ ಸೋಲಿಸಿದ್ದ ಭಾರತದ ಮಹಿಳೆಯರು ಸೆಮಿಫೈನಲ್‌ನಲ್ಲಿ ಇಷ್ಟು ಹೀನಾಯ ಸೋಲನುಭವಿಸಲಿದೆ ಎಂದು ಯಾರು ಊಹಿಸರಲಿಲ್ಲ.

india-woman-team

ನ ೨೪ ಫೈನಲ್ ಫೈಟ್

ಮೊದಲ ಸೆಮೀಸ್‌ನಲ್ಲಿ ವಿಂಡೀಸ್ ತಂಡವನ್ನು ೭೧ ರನ್‌ಗಳಿಂದ ಸೋಲಿಸುವ ಮೂಲಕ ಆಸಿಸ್ ಮಹಿಳಾ ಟೀಮ್ ಮೊದಲ ತಂಡವಾಗಿ ಫೈನಲ್ ಪ್ರವೇಶಿಸಿತ್ತು. ಸದ್ಯ ಇಂಗ್ಲೆಂಡ್ ಭಾರತವನ್ನು ಸೋಲಿಸಿ ಫೈನಲ್ ತಲುಪಿದ್ದು, ಈ ಮೂಲಕ ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ ಕಪ್‌ಗಾಗಿ ನ ೨೪ರಂದು ಹಣಾಹಣಿ ನಡೆಸಲಿವೆ.

ಸ್ಕೋರು ವಿವರ:

ಭಾರತ ಮಹಿಳಾ ತಂಡ ೧೯.೩ ಓವರ್ ೧೧೨ ರನ್ ಆಲೌಟ್

(ಸ್ಮೃತಿ ಮಂಧಾನ ೩೪, ಜೆಮಿಮಾ ರಾಡ್ರಿಗೆಸ್ ೨೬, ಹರ್ಮಾನ್‌ಪ್ರೀತ್ ಕೌರ್ ೧೬, ತನಿಯಾ ಭಾಟಿಯಾ ೧೧ ರನ್, ಹೀದರ್ ನೈಟ್ ೯/೩, ಕರ್ಸ್ಟೀ ಗಾರ್ಡಾನ್ ೨೦/೨, ಸೋಫೀ ಎಕ್ಕಲ್‌ಸ್ಟೋನ್ ೨೨/೨)

ಇಂಗ್ಲೆಂಡ್ ಮಹಿಳಾ ತಂಡ ೧೭.೧ ಓವರ್ ೧೧೬/೨

(ಅಮಿ ಜೋನ್ಸ್ ಅಜೇಯ ೫೩, ನಟಾಲೀ ಸ್ಕಿವರ್ ಅಜೇಯ ೫೨ ರನ್)

Leave a Comment