ಮಹಿಳಾ ಆರೋಗ್ಯ ಸಹಾಯಕಿಗೆ ಬೀಳ್ಕೊಡುಗೆ

ಪಿರಿಯಾಪಟ್ಟಣ, ಸೆ.6- ತಾಲ್ಲೂಕಿನ ಭುವನಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ 35 ವರ್ಷಗಳ ಕಾಲ ಮಹಿಳಾ ಆರೋಗ್ಯ ಸಹಾಯಕಿಯಾಗಿ ಸೇವೆ ಸಲ್ಲಿಸಿ ನಿವೃತ್ತರಾದ ಎನ್.ಜಿ.ಮಾಚಮ್ಮರವರಿಗೆ ಸಿಬ್ಬಂದಿಗಳು ಹಾಗೂ ಗ್ರಾಮಸ್ಥರು ಸನ್ಮಾನಿಸಿ ಬೀಳ್ಕೊಟ್ಟರು.
ಭುವನಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಜಿ.ಸಿ.ರಾಜೇಶ್ ಮಾತನಾಡಿ ಯಾವುದೇ ಒಬ್ಬ ವ್ಯಕ್ತಿ ಸಾರ್ವಜನಿಕ ಕ್ಷೇತ್ರದಲ್ಲಿ ಉತ್ತಮ ಹೆಸರು ಗಳಿಸಬೇಕೆಂದರೆ ಅವರು ಮಾಡುವ ಕೆಲಸ ಕಾರ್ಯಗಳಿಂದ ಮಾತ್ರ ಸಾಧ್ಯ ಸರ್ಕಾರಿ ನೌಕರರು ಸಾರ್ವಜನಿಕ ಸೇವೆಯಲ್ಲಿ ಪ್ರಾಮಾಣಿಕತೆ ಹಾಗೂ ನಿಷ್ಠೆಯಿಂದ ಕರ್ತವ್ಯ ನಿರ್ವಹಿಸಿದರೆ ಜನಮನ್ನಣೆ ಗಳಿಸಬಹುದು ಎಂದು ಅಭಿಪ್ರಾಯಪಟ್ಟರು.
ಆರೋಗ್ಯ ಕೇಂದ್ರದಲ್ಲಿ 35 ವರ್ಷಗಳ ಕಾಲ ಸಹಾಯಕಿಯಾಗಿ ಸೇವೆ ಸಲ್ಲಿಸಿ ಸುತ್ತಮುತ್ತಲ ಗ್ರಾಮಸ್ಥರುಗಳ ಶ್ಲಾಘನೆಗೆ ಸಾಕ್ಷಿಯಾಗಿದ್ದ ಎನ್.ಜಿ.ಮಾಚಮ್ಮರವರ ಸೇವೆ ಮರೆಯಲಾದದ್ದು.ಅವರ ನಿವೃತ್ತಿಜೀವನ ಸಂತೋಷಕರವಾಗಿರಲಿ ಎಂದು ಹಾರೈಸಿದರು.
ನಿವೃತ ಆರೋಗ್ಯ ಸಹಾಯಕಿ ಎನ್.ಜಿ.ಮಾಚಮ್ಮ ಮಾತನಾಡಿ ಭುವನಹಳ್ಳಿ ಗ್ರಾಮದಲ್ಲಿ ಕರ್ತವ್ಯಕ್ಕೆ ಸೇರಿ 35 ವರ್ಷಗಳ ನಿರಂತರ ಸೇವೆ ಸಲ್ಲಿಸಿ ಇಲ್ಲಿಯೇ ಸ್ವಯಂನಿವೃತ್ತಿ ಪಡೆಯುತ್ತಿರುವುದು ಸಂತಸವಾಗುತ್ತಿದೆ. ಸೇವಾವಧಿಯಲ್ಲಿ ಉತ್ತಮ ಕರ್ತವ್ಯಕ್ಕೆ ಸ್ಪೂರ್ತಿ ನೀಡಿದ ವೈದ್ಯರು ಹಾಗೂ ಸುತ್ತಮುತ್ತಲ ಗ್ರಾಮಸ್ಥರುಗಳಿಗೆ ಧನ್ಯವಾದ ತಿಳಿಸಿದರು.
ಇದೇ ಸಂದರ್ಭ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ರೂ.10 ಸಾವಿರಗಳ ದೇಣಿಗೆ ನೀಡಿದರು.
ಕಾರ್ಯಕ್ರಮದಲ್ಲಿ ತಾಲ್ಲೂಕಿನ ವಿವಿಧ ಪ್ರಾಥಮಿಕ ಆರೋಗ್ಯ ಕೇಂದ್ರಗಳ ವೈದ್ಯಾಧಿಕಾರಿಗಳಾದ ಡಾ.ಪ್ರಕಾಶ್, ಡಾ.ಬಸವರಾಜ್, ಡಾ.ಸಂದೀಪ್, ಡಾ.ಮಮತಾ, ಡಾ.ಸುನಿಲ್, ಗ್ರಾ.ಪಂ.ಸದಸ್ಯರಾದ ದೇವರಾಜ್, ಮಲ್ಲೇಶ್, ನಾರಾಯಣಶೆಟ್ಟಿ, ಮುಖಂಡರಾದ ಯ.ಈಶ್ವರಯ್ಯ, ನಾಗೇಂದ್ರ, ರಾಮೇಗೌಡ, ಗಿರೀಶ್, ಕುಮಾರ್, ಅಶ್ವಥ್, ಚಂದ್ರು ಸೇರಿದಂತೆ ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರು ಹಾಜರಿದ್ದರು.

Leave a Comment