ಮಹಾ ಸರ್ಕಾರ ಮೇಲುಗೈಗೆ ಠಾಕ್ರೆ-ಪವಾರ್ ಮುಸುಕಿನ ಗುದ್ದಾಟ

ಮುಂಬೈ, ಫೆ. ೧೯- ಮಹಾರಾಷ್ಟ್ರದಲ್ಲಿನ ಶಿವಸೇನಾ ನೇತೃತ್ವದ ಮೈತ್ರಿಕೂಟ ಸರ್ಕಾರವನ್ನು ’ರಿಮೋಟ್ ಕಂಟ್ರೋಲ್ನಲ್ಲಿ ಇಟ್ಟುಕೊಳ್ಳಲು ಎನ್‌ಸಿಪಿ ನಾಯಕ ಶರದ್ ಪವಾರ್ ಹಾಗೂ ಮುಖ್ಯಮಂತ್ರಿ ಉದ್ದವ್ ಠಾಕ್ರೆ ನಡುವೆ ತೀವ್ರ ಪೈಪೋಟಿ ಉಂಟಾಗಿದ್ದು, ಸರ್ಕಾರದ ಸ್ಥಿರತೆ ಮೇಲೆ ಪರಿಣಾಮ ಉಂಟುಮಾಡುವ ಸೂಚನೆಗಳು ಕಂಡುಬರುತ್ತಿವೆ.
ಈ ಇಬ್ಬರು ನಾಯಕರ ನಡುವೆ ಇದೇ ವಿಚಾರಕ್ಕೆ ಒಳಗೊಳಗೇ ಹೊಗೆಯಾಡುತ್ತಿರುವುದು ಇದೀಗ ಗುಟ್ಟಾಗಿ ಉಳಿದಿಲ್ಲ. ಎನ್‌ಸಿಪಿ ಮುಖಂಡರಾಗಿರುವ ಶರದ್ ಪವಾರ್ ತಮ್ಮ ರಾಜಕೀಯ ಜೀವನದುದ್ದಕ್ಕೂ ಅಧಿಕಾರವನ್ನು ಅನುಭವಿಸಿ ಬಂದಿದ್ದು, ರಾಜಕೀಯ ಪಟ್ಟುಗಳನ್ನು ಬಲ್ಲವರಾಗಿದ್ದಾರೆ. ಇದೇ ಮೊದಲ ಬಾರಿಗೆ ಅಧಿಕಾರ ರಾಜಕಾರಣಕ್ಕೆ ಪ್ರವೇಶ ಮಾಡಿರುವ ಉದ್ದವ್ ಠಾಕ್ರೆ ಕುಟುಂಬ ಇದರ ಆಳ – ಅಗಲವನ್ನು ತಿಳಿದುಕೊಳ್ಳುವಲ್ಲಿ ಪರಿಣಿತರಾಗಿಲ್ಲ.
ಉದ್ದವ್ ಠಾಕ್ರೆ ಅವರ ತಂದೆ ಶಿವಸೇನೆಯ ಸಂಸ್ಥಾಪಕ ಬಾಳಾ ಠಾಕ್ರೆ ತಮ್ಮ ಜೀವನದುದ್ದಕ್ಕೂ ಅಧಿಕಾರ ರಾಜಕಾರಣಕ್ಕೆ ನೇರವಾಗಿ ಪ್ರವೇಶಿಸದೆ, ರಿಮೋಟ್ ಕಂಟ್ರೋಲ್ ಮುಖಾಂತರವೇ ಸರ್ಕಾರದ ಮೇಲೆ ಹಿಡಿದ ಸಾಧಿಸಿದ್ದರು.
ಮುಖ್ಯಮಂತ್ರಿಗಳನ್ನು ನೇಮಕ ಮಾಡುವ ಅಧಿಕಾರ ಇದ್ದ ಸಂದರ್ಭದಲ್ಲಿ ಬಾಳಾ ಠಾಕ್ರೆ, ಮನೋಹರ್ ಜೋಶಿ ಹಾಗೂ ನಾರಾಯಣ್ ರಾಣೆ ಅವರನ್ನು ಅಧಿಕಾರದಲ್ಲಿ ಕೂರಿಸಿ, ತೆರೆಮರೆಯಲ್ಲಿ ಸರ್ಕಾರವನ್ನು ನಿಯಂತ್ರಿಸುತ್ತಿದ್ದರು.
ಶರದ್ ಪವಾರ್ ಅವರ ಸೋದರ ಸಂಬಂಧಿ ಅಜಿತ್ ಪವಾರ್ ಅವರನ್ನು ಮೈತ್ರಿಕೂಟ ಸರ್ಕಾರದಲ್ಲಿ ಮುಖ್ಯಮಂತ್ರಿಯನ್ನಾಗಿ ಮಾಡಿದ್ದು, ಅವರ ಮೂಲಕ ಸರ್ಕಾರದ ಮೇಲೆ ಹಿಡಿತ ಸಾಧಿಸಲು ಹವಣಿಸುತ್ತಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.
ಎನ್‌ಸಿಪಿ ಕಾಂಗ್ರೆಸ್ ಮತ್ತು ಶಿವಸೇನೆ ಮೈತ್ರಿಕೂಟ ಸರ್ಕಾರ ಅಧಿಕಾರಕ್ಕೆ ಬರಲು ಕಾರಣೀಭೂತರಾಗಿರುವ ಶರದ್ ಪವಾರ್ ತಮ್ಮ ನಿವಾಸ ಬೀಚ್ ಕ್ಯಾಂಡಿಯಲ್ಲಿರುವ ಸಿಲ್ವರ್ ಓಕ್ ಮುಖಾಂತರವೇ ನಡೆಸಬೇಕೆಂಬ ಆಶಯವನ್ನು ಹೊಂದಿದ್ದಾರೆ.
ಸಿಎಎ, ಎನ್‌ಆರ್‌ಸಿ, ಎನ್‌ಪಿಆರ್ ಕಾರ್ಯಕ್ರಮಗಳಿಗೆ ಎನ್‌ಸಿಪಿ ವಿರೋಧ ವ್ಯಕ್ತಪಡಿಸುತ್ತಲೇ ಬಂದಿದೆ. ಆದರೆ ಈ ಮೊದಲು ಶಿವಸೇನೆ ಈ ಕಾರ್ಯಕ್ರಮಗಳ ಪರವಾಗಿ ನಿಂತಿತ್ತು. ನಾಯಕರಲ್ಲಿನ ಭಿನ್ನಾಭಿಪ್ರಾಯದಿಂದಾಗಿ ಮೈತ್ರಿಕೂಟ ಸರ್ಕಾರಕ್ಕೆ ಯಾವುದೇ ತೊಂದರೆಯಿಲ್ಲ ಎಂದು ಶರದ್ ಪವಾರ್ ಬಹಿರಂಗವಾಗಿ ಹೇಳಿದ್ದರೂ, ಮುಸುಕಿನ ಗುದ್ದಾಟ ಮುಂದುವರೆದಿದೆ ಎಂದು ರಾಜಕೀಯ ವಲಯದಲ್ಲಿ ವಿಶ್ಲೇಷಿಸಲಾಗುತ್ತಿದೆ.

Leave a Comment