ಮಹಾ ಮಳೆಗೆ 307 ಮಂದಿ ಬಲಿ

ಬೆಂಗಳೂರು, ಆ. ೧೪- ಕರ್ನಾಟಕ, ಕೇರಳ, ಒಡಿಶಾ, ಮಹಾರಾಷ್ಟ್ರ ಮತ್ತು ಗುಜರಾತ್‌ನಲ್ಲಿ ಜನರ ಬದುಕೇ ಕೊಚ್ಚಿ ಹೋಗುವಂತಹ ಭೀಕರ ಮಳೆಯಿಂದಾಗಿ ಈವರೆಗೆ 307 ಜೀವಗಳು ಬಲಿಯಾಗಿದ್ದು ಕರ್ನಾಟಕ ಒಂದರಲ್ಲೇ 54 ಮಂದಿ ಅಸುನೀಗಿದ್ದಾರೆ.
ಕೇರಳದಲ್ಲಿ ಈವರೆಗೆ 91 ಮಂದಿ, ಮಹಾರಾಷ್ಟ್ರದಲ್ಲಿ 48, ಗುಜರಾತ್‌ನಲ್ಲಿ ಕನಿಷ್ಠ ಪಕ್ಷ 98 ಮಂದಿ ಆಗಸ್ಟ್ ಮೊದಲ ವಾರಾಂತ್ಯದವರೆಗೆ ಸತ್ತಿದ್ದಾರೆ. ಇನ್ನೂ ಹಲವಾರು ಮಂದಿ ಈವರೆಗೆ ನಾಪತ್ತೆಯಾಗಿರುವ ಕಾರಣ ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆಗಳಿವೆ.
ಪ್ರವಾಹ ಬಹುತೇಕ ರಾಜ್ಯಗಳಲ್ಲಿ ಇಳಿಮುಖವಾಗುತ್ತಿದೆಯಾದರೂ ಹಲವಾರು ಕಡೆ ಮುಂದಿನ 5 ದಿನಗಳ ಕಾಲ ಭಾರಿ ಮಳೆಯಾಗುವ ಸಂಭವವಿದೆ ಎಂದು ಭಾರತದ ಹವಾಮಾನ ಇಲಾಖೆ ಮುನ್ಸೂಚನೆ ನೀಡಿರುವುದು ಆತಂಕಕ್ಕೆ ಕಾರಣವಾಗಿದೆ.
ಅಧಿಕೃತ ಅಂಕಿ-ಅಂಶಗಳ ಪ್ರಕಾರ ಕರ್ನಾಟಕದಲ್ಲಿ ಈವರೆಗೆ 54 ಮಂದಿ ಸತ್ತಿರುವುದು ಖಚಿತ ಪಟ್ಟಿದ್ದು 12 ಮಂದಿ ಈವರೆಗೆ ಕಾಣೆಯಾಗಿದ್ದಾರೆ. ಈವರೆಗೆ 4 ಲಕ್ಷ ಜನರನ್ನು ರಕ್ಷಿಸಲಾಗಿದ್ದು, 1224 ಪರಿಹಾರ ಕೇಂದ್ರಗಳನ್ನು ತೆರೆಯಲಾಗಿದೆ. ಅವುಗಳಲ್ಲಿ 3,93,956 ಮಂದಿ ಆಶ್ರಯ ಪಡೆದಿದ್ದಾರೆ.
ಬೆಂಗಳೂಕು, ರಾಜ್ಯದ ಕರಾವಳಿ, ಚಿಕ್ಕಮಗಳೂರು, ಹಾಸನ, ಕೊಡಗು ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ವಿದೇಶೀಯರೂ ಸೇರಿದಂತೆ ಮುಳುಗಡೆಯಾಗಿರುವ ಹಂಪಿಯಿಂದ 365 ಮಂದಿಯನ್ನು ವಿರೂಪಾಪುರ ಗಡ್ಡಿಯ ಶಾಂತಿ ಗೆಸ್ಟ್ ಹೌಸ್‌ನಿಂದ ವಿಜಯನಗರಕ್ಕೆ ಹೆಲಿಕಾಪ್ಟರುಗಳಲ್ಲಿ ಕರೆ ತರಲಾಗಿದೆ.
ಪರಿಹಾರ ಕಾಮಗಾರಿಗಳಿಗಾಗಿ ಕರ್ನಾಟಕದ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಕೇಂದ್ರದಿಂದ 10,000 ಕೋಟಿ ರೂ.ಗಳ ಪರಿಹಾರ ಕೋರಿದ್ದಾರೆ.

Leave a Comment