ಮಹಾ ಬಿಕ್ಕಟ್ಟು ಕ್ಷಣ,ಕ್ಷಣಕ್ಕೂ ಕುತೂಹಲ

ಮುಂಬೈ, ನ. ೭- ಮಹಾರಾಷ್ಟ್ರದಲ್ಲಿ ನೂತನ ಸರ್ಕಾರ ರಚನೆ ಸಂಬಂಧ ರಾಜಕೀಯ ಬೆಳವಣಿಗೆಗಳು ಕ್ಷಣಕ್ಕೊಂದು ತಿರುವು ಪಡೆಯುತ್ತಿದ್ದು, ಬಿಜೆಪಿ ಮತ್ತು ಶಿವಸೇನೆ ಮೈತ್ರಿಯಲ್ಲಿ ಬಿರುಕು ಕಾಣಿಸಿಕೊಳ್ಳುವ ಹಂತ ತಲುಪಿವೆ. ತನ್ನ ಶಾಸಕರನ್ನು ಕುದುರೆ ವ್ಯಾಪಾರ ಮಾಡಲು ಮಿತ್ರಪಕ್ಷ ಬಿಜೆಪಿ ಮುಂದಾಗಿದೆ ಎಂದು ಆರೋಪಿಸಿರುವ ಶಿವಸೇನೆ ನಾಯಕರು, ತಮ್ಮ ಶಾಸಕರನ್ನು ತಾರಾ ಹೊಟೇಲ್‌ಗಳಲ್ಲಿ ಕೂಡಿಹಾಕುವ ಪ್ರಕ್ರಿಯೆಗೂ ಮುಂದಾಗಿರುವುದು ಸರ್ಕಾರ ರಚನೆಯ ಕಗ್ಗಂಟು ಸದ್ಯಕ್ಕೆ ಪರಿಹಾರವಾಗುವ ಲಕ್ಷಣಗಳು ಕಂಡುಬರುತ್ತಿಲ್ಲ.

ಚುನಾವಣಾ ಫಲಿತಾಂಶ ಪ್ರಕಟವಾಗಿ ಎರಡು ವಾರಗಳಾದರೂ, ನೂತನ ಸರ್ಕಾರ ಅಸ್ತಿತ್ವಕ್ಕೆ ಬರದೆ, ಮಹಾರಾಷ್ಟ್ರ ರಾಜಕಾರಣ ಡೋಲಾಯಮಾನ ಸ್ಥಿತಿ ತಲುಪಿದೆ. ದಶಕಗಳ ಕಾಲ ಕೂಡಿಬಾಳಿದ್ದ ಬಿಜೆಪಿ – ಶಿವಸೇನೆ ಇದೀಗ ಹಾವು – ಮುಂಗುಸಿಗಳಾಗುವ ಸ್ಥಿತಿ ನಿರ್ಮಾಣವಾಗಿದೆ ಎಂದರೂ ತಪ್ಪಾಗಲಾರದು.

ತನ್ನ ನೇತೃತ್ವದಲ್ಲೇ ಸರ್ಕಾರ ರಚನೆಯಾಗಬೇಕು ಎಂದು ಬಿಜೆಪಿ ನಾಯಕರು ಪಟ್ಟುಹಿಡಿದಿರುವುದು ಶಿವಸೇನೆ ನಾಯಕರಿಗೆ ಮುಜುಗರ ಮಾತ್ರವಲ್ಲದೆ, ಸಂಬಂಧ ಕಳಚಿಕೊಳ್ಳುವ ಹಂತಕ್ಕೆ ತಲುಪಿದ್ದಾರೆ.

ಇದೇ 9ಕ್ಕೆ ಪ್ರಸಕ್ತ ವಿಧಾನಸಭೆಯ ಅಧಿಕಾರಾವಧಿ ಪೂರ್ಣಗೊಳ್ಳಲಿದ್ದು, ಈ ಗಡುವು ಸಮೀಪಿಸಲು ಕೇವಲ 48 ಗಂಟೆಗಳು ಮಾತ್ರ ಬಾಕಿಯಿದೆ. ಈ ನಡುವೆ ಶಿವಸೇನೆ ನಾಯಕರು ಆತಂಕಕ್ಕೆ ಒಳಗಾಗಿದ್ದು, ತಮ್ಮ ಪಕ್ಷದ ಶಾಸಕರಲ್ಲಿ ಬಿರುಕು ಉಂಟುಮಾಡಲು ಬಿಜೆಪಿ ನಾಯಕರು ಮುಂದಾಗಿದ್ದಾರೆ ಎಂದು ಆರೋಪಿಸುವ ಮೂಲಕ ನಿಮ್ಮ ದಾರಿ ನಿಮಗೆ, ನಮ್ಮ ದಾರಿ ನಮಗೆ ಎಂದು ಖಂಡಾತುಂಡವಾಗಿ ಹೇಳುವ ಹಂತಕ್ಕೆ ಇಂದಿನ ನಾಟಕೀಯ ಬೆಳವಣಿಗೆಗಳು ತಲುಪಿವೆ.

ತಾನೇ ಮತ್ತೊಂದು ಅವಧಿಗೆ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಬೇಕೆಂದು ಪಟ್ಟುಹಿಡಿದಿರುವ ದೇವೇಂದ್ರ ಫಡ್ನವೀಸ್ ಇಂದು ರಾಜ್ಯಪಾಲ ಭಗತ್ ಸಿಂಗ್ ಕೋಶಿಯಾರಿ ಅವರನ್ನು ಭೇಟಿಮಾಡಿ, ಸರ್ಕಾರ ರಚನೆಯ ಹಕ್ಕು ಮಂಡಿಸಲು ಮುಂದಾಗಿದ್ದಾರೆ.

ಬಿಜೆಪಿಯ ಈ ನಡವಳಿಕೆಯಿಂದ ತೀವ್ರ ಅಸಮಾಧಾನಗೊಂಡಿರುವ ಶಿವಸೇನೆ ನಾಯಕರು ತಮ್ಮ ಶಾಸಕರನ್ನು ಒಂದೆಡೆ ಕಾಪಿಟ್ಟುಕೊಳ್ಳಲು ತಾರಾ ಹೊಟೇಲ್‌ಗಳಲ್ಲಿ ವಾಸ್ತವ್ಯ ಕಲ್ಪಿಸಲು ಮುಂದಾಗಿದ್ದಾರೆ.

ರಾಜ್ಯದಲ್ಲಿ ಸರ್ಕಾರ ರಚಿಸಲು ಮಿತ್ರಪಕ್ಷ ಬಿಜೆಪಿಯಿಂದಲೇ ಶಾಸಕರ ಕುದುರೆ ವ್ಯಾಪಾರಕ್ಕೆ ಮುಂದಾಗಿದೆ ಎಂದು ಶಿವಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ ತಮ್ಮ ಮುಖವಾಣಿ ಸಾಮ್ನಾದಲ್ಲಿ ಗಂಭೀರ ಆರೋಪ ಮಾಡಿದ್ದಾರೆ. ಹೀಗಾಗಿ, ಸರ್ಕಾರ ರಚನೆ ಇನ್ನು ತೂಗುಯ್ಯಾಲೆಯಲ್ಲಿದೆ.

ಸರ್ಕಾರ ರಚನೆಗಿರುವ ಗಡುವು ಮುಗಿಯುತ್ತಿರುವ ಬೆನ್ನಲ್ಲೆ ಕೇಂದ್ರ ಸಚಿವ ನಿತಿನ್ ಗಡ್ಕರಿ ತಮ್ಮ ಕಾರ್ಯಕ್ರಮಗಳನ್ನು ರದ್ದುಪಡಿಸಿ ನಾಗಪುರದಿಂದ ವಿಮಾನದಲ್ಲಿ ಮುಂಬೈಗೆ ದೌಡಾಯಿಸಿದ್ದು, ಮುಖ್ಯಮಂತ್ರಿ ಹುದ್ದೆಯನ್ನು ಶಿವಸೇನೆಗೆ ಬಿಟ್ಟುಕೊಡುವ ಕುರಿತಂತೆ ರಾಜಿಸಂಧಾನ ನಡೆಸಿದ್ದು, ಬಿಕ್ಕಟ್ಟು ಅಂತ್ಯಗೊಳ್ಳುವ ಲಕ್ಷಣಗಳು ಗೋಚರಿಸಿವೆ.

ಮಹಾರಾಷ್ಟ್ರದಲ್ಲಿ ತಲೆದೋರಿರುವ ಬಿಕ್ಕಟ್ಟನ್ನು ಬಗೆಹರಿಸುವ ಸಂಬಂಧ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್, ನಿತಿನ್ ಗಡ್ಕರಿ ಅವರಿಗೆ ಹೊಣೆಗಾರಿಕೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಅವರು ನಾಗಪುರಕ್ಕೆ ದೌಡಾಯಿಸಿರುವುದು ವಿದ್ಯಮಾನಗಳಿಗೆ ಹೊಸ ತಿರುವು ಬಂದಿದೆ.

ಶೇ. 50:50 ಅನುಪಾತದಲ್ಲಿ ಶಿವಸೇನೆ ಅಧಿಕಾರ ಹಂಚಿಕೆ ಮುಂದಿಟ್ಟಿರುವ ಪ್ರಸ್ತಾಪವನ್ನು ಮುಖ್ಯಮಂತ್ರಿ ಫಡ್ನವೀಸ್ ತಿರಸ್ಕರಿಸಿರುವುದು ಶಿವಸೇನೆಯ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ.
ಮಹಾರಾಷ್ಟ್ರ ಬಿಜೆಪಿ ಘಟಕದ ಅಧ್ಯಕ್ಷ ಚಂದ್ರಕಾಂತ್ ಪಾಟೀಲ್ ಮತ್ತು ಹಣಕಾಸು ಸಚಿವ ಸುಧೀರ್ ಮಂಗನ್ ತಿವಾರ್ ನೇತೃತ್ವದ ನಿಯೋಗ ಇಂದು ರಾಜ್ಯಪಾಲರನ್ನು ಭೇಟಿಯಾಗಬೇಕಾಗಿದ್ದ ಸಮಯವನ್ನು ಮಧ್ಯಾಹ್ನಕ್ಕೆ ಮುಂದೂಡಿದೆ. ಸರ್ಕಾರ ರಚನೆ ಸಂಬಂಧ ಮಿತ್ರಪಕ್ಷ ಶಿವಸೇನೆಯಿಂದ ಇದುವರೆಗೂ ಪ್ರತಿಕ್ರಿಯೆ ಬಂದಿಲ್ಲ. ಹೀಗಾಗಿ,ರಾಜ್ಯಪಾಲರ ಭೇಟಿಯನ್ನು ಮುಂದೂಡಿದ್ದಾರೆ.

ಆದರೆ, ಸರ್ಕಾರ ರಚನೆ ವಿಷಯವಾಗಿ ಮೈತ್ರಿಕೂಟದ ಪಕ್ಷದಲ್ಲೇ ಭಿನ್ನಮತ ತಾರಕಕ್ಕೇರಿದೆ. ಬಿಜೆಪಿ ಸರ್ಕಾರ ರಚಿಸಲು ಶಿವಸೇನೆಯ ಶಾಸಕರನ್ನು ಒಲಿಸಲು ಮುಂದಾಗಿದ್ದಾರೆ ಎಂದು ಉದ್ಧವ್ ಠಾಕ್ರೆ ಆರೋಪಿಸಿದ್ದಾರೆ. ಈ ಹಿನ್ನೆಲೆಯಲ್ಲಿ ತಮ್ಮ ಶಾಸಕರನ್ನು ಹಿಡಿದಿಟ್ಟುಕೊಳ್ಳಲು ಶಿವಸೇನೆ ಮುಂದಾಗಿದೆ.

ತನ್ನ ಎಲ್ಲ ಶಾಸಕರನ್ನು ಪಂಚತಾರಾ ಹೋಟೆಲ್‌ಗೆ ಕರೆದೊಯ್ಯಲು ನಿರ್ಧರಿಸಲಾಗಿದೆ ಎಂದು ಶಿವಸೇನೆ ಸಂಸದ ಸಂಜಯ್ ರಾವತ್ ತಿಳಿಸಿದ್ದಾರೆ. ಯಾವುದೇ ಕಾರಣಕ್ಕೂ ಮುಖ್ಯಮಂತ್ರಿ ಪದವಿಯನ್ನು ಬಿಜೆಪಿಗೆ ಬಿಟ್ಟುಕೊಡುವುದಿಲ್ಲ ಎಂದು ಅವರು ವ್ಯಕ್ತಪಡಿಸಿದ್ದು, ಶೇ. 50:50ರ ಅನುಪಾತದಲ್ಲಿ ಅಧಿಕಾರ ಹಂಚಿಕೆಯಾಗಲೇಬೇಕು ಎಂದು ಪಟ್ಟು ಹಿಡಿದಿದೆ.

Leave a Comment