ಮಹಾ ಚುನಾವಣೆ ಮತದಾನ ಬಿರುಸು ಹರಿಯಾಣದಲ್ಲಿ ಚುರುಕು

ನವದೆಹಲಿ, ಅ ೨೧- ದೇಶಾದ್ಯಂತ ತೀವ್ರ ಕುತೂಹಲ ಕೆರಳಿಸಿರುವ ಮಹಾರಾಷ್ಟ್ರ ಹಾಗೂ ಹರಿಯಾಣ ವಿಧಾನಸಭೆಗೆ ಬಿರುಸಿನ ಮತದಾನ ಮುಂದುವರೆದಿದೆ. ಮುಕ್ತ ಹಾಗೂ ಶಾಂತಿಯುತ ಮತದಾನಕ್ಕಾಗಿ ಚುನಾವಣಾ ಆಯೋಗ ಎರಡು ರಾಜ್ಯಗಳಲ್ಲಿ ವ್ಯಾಪಕ ಬಂದೋಬಸ್ತ್ ಕೈಗೊಂಡಿದೆ. ಮಹಾರಾಷ್ಟ್ರದ ವಿವಿಧೆಡೆ ಮಳೆ ಬಿದ್ದ ಕಾರಣ ಆರಂಭದಲ್ಲಿ ಕೆಲವೆಡೆ ಮತದಾನಕ್ಕೆ ಅಡ್ಡಿಯುಂಟಾಗಿತ್ತು. ಮಧ್ಯಾಹ್ನ 1.30ರ ವೇಳೆಗೆ 2 ರಾಜ್ಯಗಳಲ್ಲಿ ಶೇ. 30 ರಿಂದ ಶೇ. 35 ರಷ್ಟು ಮತದಾನ ವಾಗಿದೆ.
ಜಮ್ಮು-ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನ ರದ್ದುಪಡಿಸಿದ ನಂತರ ಇದೇ ಮೊದಲ ಬಾರಿಗೆ ಈ ಎರಡು ರಾಜ್ಯಗಳಲ್ಲಿ ಚುನಾವಣೆ ನಡೆಯುತ್ತಿದೆ. ಹೀಗಾಗಿ ರಾಜಕೀಯ ಪಕ್ಷಗಳಿಗೆ ಈ ಚುನಾವಣೆ ಪ್ರತಿಷ್ಠೆಯ ಅಖಾಡವೆನಿಸಿದೆ. ಬೆಳಿಗ್ಗೆಯಿಂದಲೇ ಮತದಾರರು ಸರದಿ ಸಾಲಿನಲ್ಲಿ ನಿಂತು ತಮ್ಮ ಹಕ್ಕನ್ನು ಚಲಾಯಿಸಿದ ದೃಶ್ಯ ಕಂಡು ಬಂತು.
ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್, ಶಿವಸೇನೆ ನಾಯಕ ಉದ್ಧವ್ ಠಾಕ್ರೆ ಕುಟುಂಬ, ಎನ್.ಸಿ.ಪಿ. ನಾಯಕ ಶರದ್ ಪವಾರ್, ಅಳಿಯ ಮೊಮ್ಮಕ್ಕಳ ಜೊತೆ ಮತಗಟ್ಟೆಗೆ ಆಗಮಿಸಿ ಹಕ್ಕು ಚಲಾಯಿಸಿದರು. ಬಾಂದ್ರಾ ಮತಗಟ್ಟೆಯಲ್ಲಿ ಬಾಲಿವುಡ್ ನಟಿ ಮಾಧುರಿ ದೀಕ್ಷಿತ್, ಮಾಜಿ ಕ್ರಿಕೆಟಿಗ ಸಚ್ಚಿನ್ ತೆಂಡೂಲ್ಕರ್ ತಮ್ಮ ಕುಟುಂಬದೊಂದಿಗೆ ಆಗಮಿಸಿ ಹಕ್ಕನ್ನು ಚಲಾಯಿಸಿದರು.
ಮಹಾರಾಷ್ಟ್ರದ 288 ವಿಧಾನಸಭಾ ಕ್ಷೇತ್ರಗಳಿಗೆ ಮತದಾನ ನಡೆಯುತ್ತಿದ್ದು ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಸೇರಿದಂತೆ 3,237 ಅಭ್ಯರ್ಥಿಗಳ ಭವಿಷ್ಯ ನಿರ್ಧಾರವಾಗಲಿದೆ.
ಮಹಾರಾಷ್ಟ್ರದಲ್ಲಿ 19,000 ಮತಗಟ್ಟೆಗಳನ್ನು ಸ್ಥಾಪಿಸಲಾಗಿದ್ದು, ಸೂಕ್ಷ್ಮ ಹಾಗೂ ಅತಿ ಸೂಕ್ಷ್ಮ ಮತಗಟ್ಟೆ ಕೇಂದ್ರಗಳಲ್ಲಿ ಬಿಗಿ ಭದ್ರತೆ ಕೈಗೊಳ್ಳಲಾಗಿದ್ದು, 3 ಲಕ್ಷ ಪೊಲೀಸರನ್ನು ನಿಯೋಜಿಸಲಾಗಿತ್ತು.
ಮಹಾರಾಷ್ಟ್ರದಲ್ಲಿ ಬಿಜೆಪಿ ಮತ್ತು ಶಿವಸೇನೆ ಮೈತ್ರಿ ಮಾಡಿಕೊಂಡು ಚುನಾವಣಾ ಅಖಾಡಕ್ಕೆ ಇಳಿದಿದೆ. ಬಿಜೆಪಿ 150 ಹಾಗೂ ಶಿವಸೇನೆ 124 ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತಿದೆ.
ಒಂದು ತಿಂಗಳಿಂದ ಬಿಜೆಪಿ ಮತ್ತು ಶಿವಸೇನೆ ಮೈತ್ರಿ ಕೂಟದ ನಾಯಕರು ಸಾವರ್ಕರ್ ಗೆ ಭಾರತ ರತ್ನ ಮತ್ತು ಕಾಶ್ಮೀರದ 370ನೇ ವಿಧಿ ರದ್ದು ಮಾಡಿದ ವಿಷಯವನ್ನು ಮುಂದಿಟ್ಟುಕೊಂಡು ಬಿರುಸಿನ ಪ್ರಚಾರ ಕೈಗೊಂಡು ಈ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಮತ್ತೇ ಅಧಿಕಾರಕ್ಕೆ ಬರುವ ಹುಮ್ಮಸ್ಸಿನಲ್ಲಿದೆ. ಪ್ರಧಾನಿ ನರೇಂದ್ರ ಮೋದಿ ಕೇಂದ್ರ ಸಚಿವರಾದ ರಾಜನಾಥ್ ಸಿಂಗ್, ಅಮಿತ್ ಷಾ, ಅಬ್ಬರದ ಪ್ರಚಾರ ನಡೆಸಿದ್ದರು.
ಆದರೆ ಶರತ್ ಪವಾರ್ ನೇತೃತ್ವದ ಎನ್.ಸಿ.ಪಿ. ಮತ್ತು ಕಾಂಗ್ರೆಸ್ ಮೈತ್ರಿ ಪಕ್ಷಗಳು ಕೇಂದ್ರ ಸರ್ಕಾರದ ಆರ್ಥಿಕ ಹಿಂಜರಿಕೆ ವಿಷಯವನ್ನು ಪ್ರಮುಖ ಅಸ್ತ್ರವನ್ನಾಗಿ ಬಳಸಿಕೊಂಡು ಈ ಬಾರಿ ಚುನಾವಣೆಯಲ್ಲಿ ಪ್ರಚಾರ ನಡೆಸಿ ಅಧಿಕಾರಕ್ಕೆ ಬರಲು ರಣತಂತ್ರ ರೂಪಿಸಿದೆ. ಕಾಂಗ್ರೆಸ್ ನಿಂದ ರಾಹುಲ್ ಗಾಂಧಿ, ಎನ್.ಸಿ.ಪಿ. ನಾಯಕ ಶರದ್ ಪವಾರ್ ಸೇರಿದಂತೆ ಘಟಾನುಘಟಿ ನಾಯಕರು ಮತದಾರರ ಮನಗೆಲ್ಲಲು ಪ್ರಯತ್ನಿಸಿದ್ದರು.
ಮತ್ತೊಂದೆಡೆ ಹರಿಯಾಣದ 9 ವಿಧಾನಸಭಾ ಕ್ಷೇತ್ರಗಳಿಗೆ ಮತದಾನ ಚುರುಕಿನಿಂದ ಸಾಗಿದೆ. ಬೆಳಿಗ್ಗೆಯಿಂದಲೇ ಮತದಾರರು ಉದ್ದನೇಯ ಸಾಲಿನಲ್ಲಿ ನಿಂತು ತಮ್ಮ ಹಕ್ಕನ್ನು ಚಲಾಯಿಸುತ್ತಿದ್ದ ದೃಶ್ಯ ಕಂಡು ಬಂದಿದೆ. 1169 ಅಭ್ಯರ್ಥಿಗಳ ಹಣೆ ಬರಹವನ್ನು ಮತದಾರ ಪ್ರಭು ನಿರ್ಧರಿಸಲಿದ್ದಾರೆ. ಭದ್ರತೆಗಾಗಿ 75,000 ಪೊಲೀಸರನ್ನು ನಿಯೋಜಿಸಲಾಗಿದ್ದು ಯಾವುದೇ ಅಹಿತಕರ ಘಟನೆ ನಡೆಯದಂತೆ ಕಟ್ಟೆಚ್ಚರವಹಿಸಲಾಗಿದೆ.
ಹರಿಯಾಣದಲ್ಲಿ ಆರಂಭದಲ್ಲಿ ಮತದಾನ ಪ್ರಕ್ರಿಯೆ ಮದಗತಿಯಿಂದ ಸಾಗಿತ್ತು. ಹೊತ್ತು ಕಳೆದಂತೆ ಹೆಚ್ಚಿನ ಸಂಖ್ಯೆಯಲ್ಲಿ ಯುವ ಮತದಾರರು ಸೇರಿದಂತೆ ಅನೇಕರು ಮತಗಟ್ಟೆಗೆ ಆಗಮಿಸಿ ತಮ್ಮ ಹಕ್ಕನ್ನು ಚಲಾಯಿಸಿದರು. ಅಲ್ಲದೇ ಮೊದಲ ಬಾರಿಗೆ ಮತದಾನ ಮಾಡುತ್ತಿರುವ ಯುವಕರಲ್ಲಿ ಉತ್ಸಾಹದಿಂದ ಮತಗಟ್ಟೆಗೆ ಆಗಮಿಸಿ ತಮ್ಮ ಹಕ್ಕನ್ನು ಚಲಾಯಿಸಿದರು.
ಹರಿಯಾಣ ವಿಧಾನಸಭಾ ಚುನಾವಣೆಯಲ್ಲಿ ಸೋನಿಪತ್ ನಲ್ಲಿರುವ ಬೂತ್ ಸಂಖ್ಯೆ 109ರ ಮಾದರಿ ಮತದಾನ ಕೇಂದ್ರದಲ್ಲಿ ಗುಲಾಬಿ ಮೂಲಕ ಮತದಾರರನ್ನು ಸ್ವಾಗತಿಸಲಾಯಿತು. ಮತದಾರರು ಮತಗಟ್ಟೆ ಕೇಂದ್ರಕ್ಕೆ ಪ್ರವೇಶಿಸುವ ದ್ವಾರದಲ್ಲಿ ಸ್ವಾಗತ ಕಮಾನುಗಳನ್ನು ನಿರ್ಮಿಸಲಾಗಿದ್ದು, ಶಾಲಾ ವಿದ್ಯಾರ್ಥಿಗಳಿಂದ ಮತದಾರರಿಗೆ ತಿಲಕ ವಿಟ್ಟು ಮತದಾರರನ್ನು ಸ್ವಾಗತಿಸಿದ್ದು ವಿಶೇಷವಾಗಿತ್ತು. ಇದೇ ಸಂದರ್ಭದಲ್ಲಿ ದೇಶ ಭಕ್ತಿ ಗೀತೆಗಳು ಮೂಡಿ ಬಂದವು.
ಹರಿಯಾಣ ಮತ್ತು ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಈ ಬಾರಿಯು ಬಿಜೆಪಿಯೇ ಅಧಿಕಾರಕ್ಕೆ ಬರಲಿದೆ ಎಂದು ಸಮೀಕ್ಷೆಗಳು ಭವಿಷ್ಯ ನುಡಿದಿವೆ.
ರಾಜಕೀಯವಾಗಿ ಅತ್ಯಂತ ಮಹತ್ವದಾಗಿರುವ ಈ ಚುನಾವಣೆಯಲ್ಲಿ ಸರಣಿ ಸೋಲುಗಳಿಂದ ಪುಟ್ಟಿದೇಳಲು ಕಾಂಗ್ರೆಸ್ ಗೆ ಅವಕಾಶವಿತ್ತು. ಆದರೆ ಕಾಂಗ್ರೆಸ್ ಅಬ್ಬರದ ಪ್ರಚಾರ ನಡೆಸಲು ಎಡವಿದೆ.

ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ಪ್ರಿಯಾಂಕ ಗಾಂಧಿ ಪ್ರಚಾರದ ಅಖಾಡಕ್ಕೆ ಧುಮುಕಲಿಲ್ಲ. ರಾಹುಲ್ ಗಾಂಧಿ 7 ಕಡೆಗಳಲ್ಲಿ ಱ್ಯಾಲಿಯನ್ನು ಉದ್ದೇಶಿಸಿ ಪ್ರಚಾರ ಮಾಡಿದ್ದಾರೆ. ಆದರೆ ಬಿಜೆಪಿ 25 ಕ್ಕೂ ಹೆಚ್ಚು ಕಡೆ ಪ್ರಚಾರ ಮಾಡಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದೆ.
ಸಮೀಕ್ಷೆಗಳ ಭವಿಷ್ಯ ಏನೇ ನುಡಿದಿದ್ದರೂ ಗುರುವಾರ ನಡೆಯುವ ಮತ ಎಣಿಕೆ ಕಾರ್ಯದ ನಂತರ ಜಯದ ಮಾಲೆ ಯಾರ ಕೊರಳಿಗೆ ಎಂಬುವುದು ನಿರ್ಧಾರ ವಾಗಲಿದೆ.

ಬಾಕ್ಸ್
ಭೀಕರ ಅಪಘಾತ ಮೂವರ ಸಾವು
ಮಹಾರಾಷ್ಟ್ರ ವಿಧಾನಸಭಾ ಚುನಾವಣೆಗೆ ತಮ್ಮ ಹಕ್ಕನ್ನು ಚಲಾಯಿಸಲು ತೆರಳುತ್ತಿದ್ದ ವೇಳೆ ಟ್ರಕ್ ಹಾಗೂ ಬಸ್ ಡಿಕ್ಕಿ ಸಂಭವಿಸಿ ಮೂರು ಮಂದಿ ಸಾವನ್ನಪ್ಪಿದ್ದು ಘಟನೆಯಲ್ಲಿ 10ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.
ಪುಣೆ -ಮುಂಬೈ ಎಕ್ಸ್‌ಪ್ರೆಸ್ ವೇ ರಸ್ತೆಯಲ್ಲಿ ಈ ಅಪಘಾತ ಸಂಭವಿಸಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ವೇಗವಾಗಿ ಚಾಲಕ ಬಸ್ ಅನ್ನು ಚಲಾಯಿಸುತ್ತಿದ್ದನು. ಈ ವೇಳೆ ನಿಯಂತ್ರಣ ಕಳೆದುಕೊಂಡು ರಸ್ತೆ ಬದಿಯಲ್ಲಿ ನಿಂತಿದ್ದ ಟ್ರಕ್ ಗೆ ಡಿಕ್ಕಿ ಹೊಡೆದು ಈ ಅವಘಡ ಸಂಭವಿಸಿದೆ. ಬಸ್ ನಲ್ಲಿ 30ಕ್ಕೂ ಹೆಚ್ಚು ಮಂದಿ ಪ್ರಯಾಣಿಸುತ್ತಿದ್ದರು. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಬಾಕ್ಸ್
ಪ್ರಧಾನಿ ಮನವಿ
ಮಹಾರಾಷ್ಟ್ರ ಹಾಗೂ ಹರಿಯಾಣ ವಿಧಾನಸಭೆ ಚುನಾವಣೆಯಲ್ಲಿ ದಾಖಲೆ ಸಂಖ್ಯೆಯಲ್ಲಿ ಮತದಾನ ಮಾಡಿ, ಪ್ರಜಾಪ್ರಭುತ್ವದ ಹಬ್ಬವನ್ನು ಶ್ರೀಮಂತಗೊಳಿಸಬೇಕು ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಮನವಿ ಮಾಡಿದ್ದಾರೆ. ಈ ಸಂಬಂಧ ಟ್ವೀಟ್ ಮಾಡಿರುವ ಅವರು ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಮತಗಟ್ಟೆಗೆ ಆಗಮಿಸಿ ತಮ್ಮ ಹಕ್ಕನ್ನು ಚಲ್ಲಾಯಿಸಬೇಕು ಎಂದು ತಿಳಿಸಿದ್ದಾರೆ.

Leave a Comment