ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಭದ್ರತಾ ಸಿಬ್ಬಂದಿ ಕ್ವಾರಂಟೈನ್ ನಲ್ಲಿ…!!

ಮುಂಬೈ, ಏ 7 ಕೊರೊನಾ ವೈರಸ್ ಹೊಡೆತಕ್ಕೆ ಮಹಾರಾಷ್ಟ್ರ ರಾಜ್ಯ ಅಕ್ಷರಶಹ ಭಯ ಭೀತಗೊಂಡಿದೆ. ವಿಶೇಷವಾಗಿ ಮುಂಬೈಮಹಾ ನಗರದಲ್ಲಿ ದಿನ ದಿನಕ್ಕೂ ಮಾರಣಾಂತಿಕ ಸೋಂಕಿನ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿವೆ. ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರ ಭದ್ರತಾ ಸಿಬ್ಬಂದಿ ಸೋಂಕಿಗೆ ಒಳಗಾಗಿದ್ದಾರೆ. ಸಿಬ್ಬಂದಿಗೆ ಚಹಾ ಪೂರೈಸಿದ ವ್ಯಕ್ತಿಗೆ ಕೊರೊನಾ ಸೋಂಕು ದೃಢಪಟ್ಟಿರುವ ಹಿನ್ನಲೆಯಲ್ಲಿ ಮುಖ್ಯಮಂತ್ರಿ ಭದ್ರತೆಗೆ ನಿಯೋಜನೆಗೊಂಡಿದ್ದ ೧೭೦ ಪೊಲೀಸರು ಹಾಗೂ ಇತರ ಅಧಿಕಾರಿಗಳನ್ನು ಕ್ಯಾರೆಂಟೈನ್‌ಗೆ ಒಳಪಡಿಸಲಾಗಿದೆ.
ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರ ನಿವಾಸ ಮಾತೋ ಶ್ರೀ ಸಮೀಪ ಚಹಾ ಪೂರೈಸುವ ವ್ಯಕ್ತಿ ಕೊರೊನಾ ಸೋಂಕಿಗೆ ಒಳಗಾಗಿದ್ದಾರೆ. ಲಾಕ್ ಡೌನ್ ಜಾರಿಗೆ ಮೊದಲು ಎಲ್ಲಾ ಭದ್ರತಾ ಸಿಬ್ಬಂದಿ ಆತನ ಬಳಿಗೆ ತೆರಳಿ ಚಹಾ ಸೇವಿಸುತ್ತಿದ್ದರು. ಇದರಿಂದಾಗಿ ಸಿಬ್ಬಂದಿ ಒಂದು ವಾರ ಕಾಲ ಸ್ವಯಂ ನಿರ್ಬಂಧಕ್ಕೆ ಒಳಗಾಗಿದ್ದಾರೆ. ಮುಂಬೈನ ಬಾಂದ್ರಾ ಪೂರ್ವದಲ್ಲಿರುವ ಉತ್ತರ ಭಾರತೀಯರ ಸಂಘದ ಕಟ್ಟಡದಲ್ಲಿ ಭದ್ರತಾ ಸಿಬ್ಬಂದಿಯನ್ನು ಕ್ವಾರೆಂಟೈನ್ ನಲ್ಲಿ ಇರಿಸಲಾಗಿದೆ.
ಮುಖ್ಯಮಂತ್ರಿ ನಿವಾಸವಿರುವ ಪ್ರದೇಶದಲ್ಲಿ ಕೊರೊನಾ ವೈರಸ್ ಪ್ರಕರಣ ದೃಢಪಟ್ಟಿರುವ ವಿಷಯ ತಿಳಿಯುತ್ತಿದ್ದಂತೆಯೇ ಮುಂಬೈ ಮುನ್ಸಿಪಲ್ ಕಾರ್ಪೋರೇಶನ್ ಅಧಿಕಾರಿಗಳು ಜಾಗೃತಗೊಂಡಿದ್ದಾರೆ. ಮುಖ್ಯಮಂತ್ರಿ ವಾಸವಾಗಿರುವ ಪ್ರದೇಶವನ್ನು ಕರೋನಾ ನಿಯಂತ್ರಣ ವಲಯ ಎಂದು ಘೋಷಿಸಿ. ಮುಖ್ಯಮಂತ್ರಿಯ ನಿವಾಸ ಸುತ್ತಲಿನ ಪ್ರದೇಶಗಳಲ್ಲಿ ವಿಶೇಷವಾಗಿ ಸೋಂಕು ನಿವಾರಕ ರಾಸಾಯನಿಕ ಸಿಂಪಡಿಸುತ್ತಿದ್ದಾರೆ.
ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಕಳೆದ ಕೆಲವು ದಿನಗಳಿಂದ ಭದ್ರತಾ ಸಿಬ್ಬಂದಿಯೊಂದಿಗೆ ಸಾಮಾಜಿಕ ಅಂತರ ಕಾಪಾಡಿಕೊಂಡು ಬರುತ್ತಿದ್ದಾರೆ. ಚಾಲಕನನ್ನೂ ದೂರ ಇರಿಸಿ ತಮ್ಮ ಕಾರನ್ನು ಸ್ವತಃ ಚಾಲನೆ ಮಾಡಿ ವಿವಿಧ ಕಾರ್ಯಕ್ರಮಗಳಿಗೆ ಹಾಜರಾಗುತ್ತಿದ್ದಾರೆ. ಆದರೆ, ಮುಖ್ಯಮಂತ್ರಿ ಅವರನ್ನು ಇತ್ತೀಚಿಗೆ ಯಾರ್ಯಾರು ಭೇಟಿ ಯಾಗಿದ್ದರು ಎಂಬ ವಿವರಗಳನ್ನು ಅಧಿಕಾರಿಗಳು ಕಲೆ ಹಾಕುತ್ತಿದ್ದಾರೆ. ಮಹಾರಾಷ್ಟ್ರದಲ್ಲಿ ಈವರೆಗೆ ೭೪೮ ಮಂದಿಗೆ ಕೊರೊನಾ ವೈರಸ್ ಸೋಂಕು ತಗುಲಿದೆ. ೪೫ ಜನರು ಮೃತಪಟ್ಟಿದ್ದಾರೆ.

Leave a Comment