ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆ ಹಿನ್ನೆಲೆ: ಬೆಂಗಳೂರಿನಲ್ಲಿ ವೇಣುಗೋಪಾಲ್ ಸಭೆ ಮುಂದೂಡಿಕೆ

ಬೆಂಗಳೂರು, ನ. 22-ಮಹಾರಾಷ್ಟ್ರದಲ್ಲಿ ನಡೆದ ಕ್ಷಿಪ್ರ ರಾಜಕೀಯ ಬೆಳವಣಿಗೆ ಶಿವಸೇನೆ,  ಎನ್‌ಸಿಪಿ ಜೊತೆಗೆ ಕಾಂಗ್ರೆಸ್ ಸರ್ಕಾರ ರಚನೆ ಕಾರಣದಿಂದ  ರಾಜ್ಯ ಕಾಂಗ್ರೆಸ್  ಉಸ್ತುವಾರಿ ಕೆ.ಸಿ. ವೇಣುಗೋಪಾಲ್ ನೇತೃತ್ವದಲ್ಲಿ ನಡೆಯಬೇಕಿದ್ದ ಸಭೆ ಮುಂದೂಡಿಕೆಯಾಗಿದೆ.

ಉಪಚುನಾವಣೆಗೆ  ತಂತ್ರ, ಪ್ರಚಾರ, ಪಕ್ಷ ಸಂಘಟನೆ ವಿಚಾರವಾಗಿ ಚರ್ಚಿಸಲು ವೇಣುಗೋಪಾಲ್ ಶುಕ್ರವಾರ  ಬೆಂಗಳೂರಿಗೆ ಆಗಮಿಸಬೇಕಿತ್ತು. ಮಹಾರಾಷ್ಟ್ರದ ರಾಜಕೀಯ ಬೆಳವಣಿಗೆಗಳಲ್ಲಿ ಎಐಸಿಸಿ ಪ್ರಧಾನ  ಕಾರ್ಯದರ್ಶಿಗಳೂ ಆಗಿರುವ ಕೆ.ಸಿ.ವೇಣುಗೋಪಾಲ್ ತೊಡಗಿರುವ ಕಾರಣ ಸಭೆ ಶನಿವಾರಕ್ಕೆ  ಮುಂದೂಡಿಕೆಯಾಗಿದೆ.

ಈ ಸಂಬಂಧ ಸುದ್ದಿಗಾರರೊಂದಿಗೆ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ  ದಿನೇಶ್ ಗುಂಡೂರಾವ್, ಮಹಾರಾಷ್ಟ್ರ ಸರ್ಕಾರ ರಚನೆ ಹಿನ್ನೆಲೆ ವೇಣುಗೋಪಾಲ್ ನಗರಕ್ಕೆ  ಆಗಮಿಸಿಲ್ಲ. ಶನಿವಾರ ಅವರು ಬಂದ ಬಳಿ ನಾಯಕರ ಸಭೆ ನಡೆಸಲಾಗುವುದು ಎಂದರು.

ಶಿವಸೇನೆ  ಜೊತೆ ಮಹಾರಾಷ್ಟ್ರ ಸರ್ಕಾರ ರಚನೆ ವಿಚಾರವಾಗಿ ಮಾತನಾಡಿದ ಅವರು, ಬಿಜೆಪಿ ದೇಶಕ್ಕೆ  ಅಪಾಯಕಾರಿ ಪಕ್ಷ ಎಂಬುದು ಎಲ್ಲ ಪಕ್ಷಗಳಿಗೂ ಮನವರಿಕೆಯಾಗಿದೆ. ಹೀಗಾಗಿ ಎನ್‌ಡಿಎ  ಒಕ್ಕೂಟವನ್ನು ಬಿಟ್ಟು ಬಿಜೆಪಿ ಮಿತ್ರ ಪಕ್ಷಗಳು ಬಿಟ್ಟು ಹೊರಬರುತ್ತಿವೆ. ಬಿಜೆಪಿ  ವಿರೋಧಿ ಪಕ್ಷಗಳೆಲ್ಲ ಒಂದಾಗಬೇಕೆಂದು ಕೈಜೋಡಿಸುತ್ತಿದ್ದಾರೆ. ಹೀಗಾಗಿ ಕಾಂಗ್ರೆಸ್  ಶಿವಸೇನೆ ಜೊತೆ ಸರ್ಕಾರ ರಚಿಸುತ್ತಿದೆ. ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆಗೆ ಯಾವುದೇ ಸಮಸ್ಯೆಯಾಗುವುದಿಲ್ಲ. ಅಲ್ಲಿ ಸಾಮಾನ್ಯ ಕನಿಷ್ಠ ಕಾರ್ಯಕ್ರಮಗಳನ್ನು  ಜಾರಿಗೆ ತರಲಾಗುವುದು ಎಂದರು.

ಕಾಂಗ್ರೆಸ್‌ನಲ್ಲಿ  ಶಾಸಕಾಂಗ ನಾಯಕ ಸಿದ್ದರಾಮಯ್ಯ ಏಕಾಂಗಿ ಎಂಬ ಬಿಜೆಪಿ ನಾಯಕರ ಆರೋಪಕ್ಕೆ  ಪ್ರತಿಕ್ರಿಯಿಸಿದ ಅವರು, ಸಿದ್ದರಾಮಯ್ಯ ಏಕಾಂಗಿಯಲ್ಲ. ಈಗಾಗಲೇ ಕೆಲವು ನಾಯಕರು ಚುನಾವಣಾ  ಕ್ಷೇತ್ರಗಳಲ್ಲಿ‌ ತೊಡಗಿಸಿಕೊಂಡಿದ್ದು, ಶನಿವಾರದಿಂದ ಎಲ್ಲಾ ನಾಯಕರು ಪ್ರಚಾರದಲ್ಲಿ  ಭಾಗಿಯಾಗಲಿದ್ದಾರೆ. ಕ್ಷೇತ್ರವಾರು ನಾಯಕರಿಗೆ ಪ್ರಚಾರ ಹಂಚಿಕೆಯಾಗಿದೆ ಎಂದರು.

  ಸಿದ್ದರಾಮಯ್ಯ ಎಲ್ಲಿಯೂ ಏಕಾಂಗಿಯಾಗಿಲ್ಲ. ಸುಮ್ಮನೆ ಆರೋಪ ಮಾಡಲೆಂದೇ ಬಿಜೆಪಿ ನಾಯಕರು  ಆರೋಪ ಮಾಡುತ್ತಿದ್ದಾರೆ.  ಅವರಿಗೆ ಬೇರೆ ಕೆಲಸ ಇಲ್ಲದೇ ಹೀಗೆ ಮಾಡುತ್ತಿದ್ದಾರೆ ಎಂದು ತಿರುಗೇಟು ನೀಡಿದರು.

ಚುನಾವಣಾ  ಪ್ರಚಾರಕ್ಕೆ ಹಿರಿಯ ನಾಯಕರಾದ ಡಾ.ಜಿ ಪರಮೇಶ್ವರ್, ಡಿ.ಕೆ.ಶಿವಕುಮಾರ್ ಹಾಗೂ ಮುನಿಯಪ್ಪ  ಸಹ ಆಗಮಿಸಲಿದ್ದು, ಪ್ರಚಾರಕ್ಕೆ ದಿನಾಂಕವನ್ನು ನಿಗದಿಪಡಿಸಿದ್ದಾರೆ. ನಾವೆಲ್ಲ  ಒಗ್ಗಟ್ಟಾಗಿಯೇ ಕೆಲಸ ಮಾಡುತ್ತೇವೆ. ಎಲ್ಲರೂ ಒಂದೇ ಕಡೆ ಪ್ರಚಾರ ಮಾಡಲು ಆಗುವುದಿಲ್ಲ. ಹೀಗಾಗಿ ಕ್ಷೇತ್ರವಾರು ಹಂಚಿಕೆಮಾಡಲಾಗುವುದು ಎಂದು‌ ದಿನೇಶ್ ಗುಂಡೂರಾವ್ ಸ್ಪಷ್ಟಪಡಿಸಿದರು.

Leave a Comment