ಮಹಾಮಳೆಗೆ ಮಂಗಳೂರು ತತ್ತರ ಜಿಲ್ಲಾಡಳಿತ-ಮನಪಾ ನಿರ್ಲಕ್ಷ್ಯ: ಮುಖ್ಯರಸ್ತೆಗಳಲ್ಲೇ ಹರಿದ ನೀರು

ಮಂಗಳೂರು, ಜೂ.೧೩- ದ.ಕ. ಜಿಲ್ಲಾದ್ಯಂತ ನಿನ್ನೆ ಬೆಳಗ್ಗಿನಿಂದ ಎಡೆಬಿಡದೆ ಸುರಿಯುತ್ತಿರುವ ಮಳೆಗೆ ಜನಜೀವನ ಅಸ್ತವ್ಯಸ್ತಗೊಂಡಿದೆ. ಮಂಗಳೂರು ನಗರದ ಅಸಮರ್ಪಕವಾದ ಒಳಚರಂಡಿ ಮತ್ತು ರಾ.ಹೆ.ಯ ಅವ್ಯವಸ್ಥೆಯಿಂದಾಗಿ ಮಳೆ ನೀರು ನಡುರಸ್ತೆಯಲ್ಲಿ ಹರಿಯುತ್ತಿದ್ದು ವಾಹನ ಸಂಚಾರಕ್ಕೆ ಅಡ್ಡಿಯಾಗುತ್ತಿದೆ. ತಗ್ಗುಪ್ರದೇಶಗಳಲ್ಲಿ ನೀರು ಹರಿದು ಕೃತಕ ನೆರೆ ಪರಿಸ್ಥಿತಿ ಉದ್ಭವವಾಗಿದ್ದು ಸ್ಥಳೀಯ ನಿವಾಸಿಗಳ ಆತಂಕಕ್ಕೆ ಕಾರಣವಾಗಿದೆ. ಕೂಳೂರು ಫ್ಲೈ ಓವರ್, ಪಕ್ಕದ ಸರ್ವಿಸ್ ರಸ್ತೆ ಭಾಗಶ: ಮುಳುಗಡೆಗೊಂಡಿದ್ದು ವಾಹನ ಸವಾರರ ಸಂಚಾರಕ್ಕೆ ಕಂಟಕ ಎದುರಾಗಿದೆ. ನಗರದ ಗೂಡ್ಸ್ ಶೆಡ್ ರಸ್ತೆ, ಬಂದರಿನಲ್ಲಿ ನೀರು ಹರಿಯಲು ತೋಡಿಲ್ಲದೆ ರಸ್ತೆಯಲ್ಲೇ ಮಳೆ ನೀರು ಹರಿಯುತ್ತಿದೆ. ಎಂಸಿಎಫ್ ಬಳಿ ಹೆದ್ದಾರಿ ಪಕ್ಕದ ಚರಂಡಿ ಹೂಳು ತುಂಬಿಕೊಂಡಿರುವ ಕಾರಣ ನೀರು ಅರ್ಧರಸ್ತೆಯಲ್ಲಿ ನಿಂತಿದ್ದು ಹೊಳೆಯಂತೆ ಭಾಸವಾಗುತ್ತಿದೆ. ಜಿಲ್ಲಾಡಳಿತ, ಮಹಾನಗರ ಪಾಲಿಕೆ ಮಳೆಹಾನಿ ಎದುರಿಸಲು ಇನ್ನೂ ಸನ್ನದ್ಧವಾಗದೇ ಇರೋದು ಮೊದಲ ಮಳೆಗೇ ಭಾಸವಾಗುತ್ತಿದ್ದು ಜನರು ಆಕ್ರೋಶ ವ್ಯಕ್ತಪಡಿಸುವಂತಾಗಿದೆ.
ನಗರದ ಜ್ಯೋತಿ ಸರ್ಕಲ್, ಬಂಟ್ಸ್ ಹಾಸ್ಟೆಲ್, ಕಂಕನಾಡಿಯ ಫಾದರ್ ಮುಲ್ಲರ್ ಆಸ್ಪತ್ರೆ ಮೊದಲಾದ ಕಡೆಗಳಲ್ಲಿ ಮಳೆ ನೀರು ರಸ್ತೆಯಲ್ಲೇ ನಿಂತು ವಾಹನಗಳ ಸಂಚಾರಕ್ಕೆ ಅಡ್ಡಿಯಾಗಿದೆ. ಕೆಲವೆಡೆ ಮಳೆ ನೀರು ಹರಿದು ಹೋಗಲು ಒಳಚರಂಡಿ ವ್ಯವಸ್ಥೆ ಮಾಡಲಾಗಿದೆಯಾದರೂ ಧಾರಾಕಾರ ಮಳೆಯಿಂದಾಗಿ ರಸ್ತೆಯಿಂದ ಒಳಚರಂಡಿಗೆ ನೀರು ಸರಾಗವಾಗಿ ಹರಿಯಲು ಸಾಧ್ಯವಾಗದೆ ವಾಹನಗಳ ಸವಾರರು ಪರದಾಡುವ ಪರಿಸ್ಥಿತಿ ಇದೆ. ಜ್ಯೋತಿ ಸರ್ಕಲ್‌ನಿಂದ ಬಂಟ್ಸ್ ಹಾಸ್ಟೆಲ್ ಕಡೆಗೆ ಹಾಗೂ ಬಂಟ್ಸ್ ಹಾಸ್ಟೆಲ್‌ನಿಂದ ಜ್ಯೋತಿಗೆ ಸಾಗುವ ರಸ್ತೆಯಲ್ಲಿ ಫುಟ್‌ಪಾತ್ ಇಲ್ಲದೆ ನೀರು ರಸ್ತೆಯಲ್ಲೇ ಹರಿಯುತ್ತಿದೆ. ಪಾದಚಾರಿಗಳು ರಸ್ತೆಯಲ್ಲಿ ನಡೆದಾಡಲು ಕಷ್ಟಪಡಬೇಕಾಗಿದೆ. ಇವಿಷ್ಟು ಮಂಗಳೂರು ನಗರದ ಒಳಭಾಗದ ಕಥೆಯಾದರೆ ಇನ್ನು ಹೊರಭಾಗದ ಪಣಂಬೂರು, ಎಂಸಿಎಫ್, ಕುಳಾಯಿ, ಕೂಳೂರು, ಕೊಟ್ಟಾರ ಬಳಿ ಮಳೆ ಜೋರಾಗಿ ಸುರಿದರೆ ಹೆದ್ದಾರಿಯಲ್ಲಿ ಸಂಚರಿಸುವುದೇ ದುಸ್ತರವಾಗುತ್ತದೆ. ಮಳೆನೀರು ರಸ್ತೆಯಲ್ಲೇ ತುಂಬಿಕೊಂಡು ಅಪಘಾತಕ್ಕೂ ಕಾರಣವಾಗುತ್ತಿದೆ.
ಮಂಗಳೂರಿನ ಆಯಕಟ್ಟಿನ ಜಾಗಗಳಲ್ಲಿ ಕಳೆದ ಹಲವಾರು ವರ್ಷಗಳಿಂದ ಇದೇ ಸಮಸ್ಯೆಯಿದ್ದರೂ ಮಂಗಳೂರು ಮಹಾನಗರ ಪಾಲಿಕೆ, ಜಿಲ್ಲಾಡಳಿತ ಸೂಕ್ತ ಪರಿಹಾರ ಕಂಡುಕೊಂಡಿಲ್ಲ. ನೆರೆನೀರು ಉಕ್ಕಿ ಹರಿದ ಬಳಿಕವಷ್ಟೇ ಕ್ರಮ ಕೈಗೊಳ್ಳುತ್ತಾರೆ. ಇನ್ನುಳಿದಂತೆ ಭಾರೀ ಮಳೆಯ ಅಂದಾಜು ಇದ್ದರೂ ಅದನ್ನು ಎದುರಿಸಲು ವ್ಯವಸ್ಥೆ ಮಾಡಿಕೊಳ್ಳದೇ ಇರುವುದು ಜನರ ಅಸಹನೆಗೆ ಕಾರಣವಾಗುತ್ತುದೆ. ಸಂಬಂಧಪಟ್ಟ ಇಲಾಖೆಗಳಿಗೆ ಹಲವಾರು ಬಾರಿ ದೂರು ಕೊಟ್ಟರೂ ಅಧಿಕಾರಿಗಳು ಕ್ಯಾರೇ ಮಾಡುತ್ತಿಲ್ಲ ಎಂದು ಸಾರ್ವಜನಿಕರು ದೂರುತ್ತಿದ್ದಾರೆ.

Leave a Comment