ಮಹಾನ್ ವಂಚಕಿಯ ಬಹು ವೇಷ ಕಂಡು ಬೆರಗಾದ ಪೊಲೀಸರು

ಬೆಂಗಳೂರು, ನ. ೬ – ಐಎಎಸ್, ಐಪಿಎಸ್ ಅಧಿಕಾರಿ, ವಕೀಲೆ, ಐಎಎಸ್ ಅಧಿಕಾರಿಯ ಪುತ್ರಿ ಹೀಗೆ ನಾನಾ ವೇಶಗಳಲ್ಲಿ ರಾಜಸ್ತಾನ, ಮಹಾರಾಷ್ಟ್ರ, ತೆಲಂಗಾಣ, ಆಂಧ್ರಪ್ರದೇಶ, ಕರ್ನಾಟಕದಲ್ಲಿ ರಾಜಸ್ತಾನ ಮೂಲದ ಖುಷ್ಬು ಶರ್ಮಾ ಅಲಿಯಾಸ್ ಸ್ಮೃತಿ ಶರ್ಮಾಗಳ ಬಹು ವೇಷದ ವಂಚನೆಗಳು ಪೊಲೀಸರನ್ನು ದಂದು ಬಡಿಸಿವೆ.
ರಾಜಸ್ತಾನ, ಮಹಾರಾಷ್ಟ್ರ, ತೆಲಂಗಾಣ, ಆಂಧ್ರಪ್ರದೇಶ, ಕರ್ನಾಟಕದಲ್ಲಿ ವಂಚನೆ ನಡೆಸಿರುವ ಖುಷ್ಬು ವಿರುದ್ಧ ದಾಖಲಾಗಿರುವ ೨೦೦ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಆಕೆ ೧೦ ಕೋಟಿ ರೂ.ಗಳಷ್ಟು ವಂಚನೆ ನಡೆಸಿ ಐಷಾರಾಮಿ ಜೀವನ ನಡೆಸಿರುವ ಆಶ್ಚರ್ಯಕರ ಅಂಶ ಪೊಲೀಸರ ವಿಚಾರಣೆಯಲ್ಲಿ ಕಂಡುಬಂದಿದೆ.
ರೈಲು ಅಪಘಾತದಲ್ಲಿ ಬಲಗೈ ಕಳೆದುಕೊಂಡಿದ್ದರೂ ತನ್ನ ಮಾದಕ ನೋಟ, ಆಕರ್ಷಣೆ, ಮಾತಿನ ವೈಖರಿಯಿಂದ ಉದ್ಯಮಿಗಳು, ಸರ್ಕಾರಿ ಹಾಗೂ ಖಾಸಗಿ ಕಂಪನಿಗಳ ಉನ್ನತ ಅಧಿಕಾರಿಗಳನ್ನು ಬಲೆಗೆ ಕೆಡವಿಕೊಳ್ಳುತ್ತಿದ್ದ ಖುಷ್ಬು ಪುಲಿಕೇಶಿ ನಗರ ಪೊಲೀಸರು ಬಂಧಿಸಿ ಠಾಣೆಯಲ್ಲಿ ಇಟ್ಟುಕೊಂಡಿದ್ದ ವೇಳೆ ತಮ್ಮ ಮೇಲೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ನ್ಯಾಯಾಧೀಶರ ಮುಂದೆಯೇ ಆರೋಪ ಮಾಡಿ ಪೊಲೀಸರನ್ನೇ ದಂಗುಬಡಿಸಿದ್ದಾಳೆ.
ವಕೀಲರೊಬ್ಬರಿಗೆ ಯುಬಿಸಿಟಿಯಲ್ಲಿ ಕಚೇರಿ ಕೊಡಿಸುವುದಾಗಿ ಸುಮಾರು ೨.೫ ಲಕ್ಷ ವಂಚನೆ ಪ್ರಕರಣದಲ್ಲಿ ಪುಲಿಕೇಶಿನಗರ ಪೊಲೀಸರಿಂದ ಬಂಧಿತಳಾಗಿರುವ ಖುಷ್ಬು, ವಿಚಾರಣೆ ವೇಳೆ ಹಲವೆಡೆ ನಡೆಸಿರುವ ವಂಚನೆ ಪ್ರಕರಣಗಳನ್ನು ಒಂದೊಂದಾಗಿ ಬಾಯ್ಬಿಟ್ಟಿದ್ದಾಳೆ. ಪೊಲೀಸರು ಕಲೆ ಹಾಕಿರುವ ಮಾಹಿತಿ ಪ್ರಕಾರ ಖುಷ್ಬು ವಿರುದ್ಧ ರಾಜಸ್ತಾನದಲ್ಲಿ ೧೫೦, ಮಹಾರಾಷ್ಟ್ರದಲ್ಲಿ ೧೮, ತೆಲಂಗಾಣ ಮತ್ತು ಆಂಧ್ರಪ್ರದೇಶದಲ್ಲಿ ತಲಾ ೧೦ ಕೊನೆಗೆ ಬೆಂಗಳೂರಿನಲ್ಲಿ ೩ ವಂಚನೆ ಪ್ರಕರಣಗಳಲ್ಲಿ ಭಾಗಿಯಾಗಿರುವುದು ಪತ್ತೆಯಾಗಿದೆ.
ಕಳೆದ ಮೂರು ತಿಂಗಳಿಂದ ಇಂದಿರಾನಗರದ ಪಿಜಿ ವಸತಿಗೃಹವೊಂದರಲ್ಲಿ ವಾಸ್ತವ್ಯ ಹೂಡಿದ್ದ ಖುಷ್ಬು, ಫೇಸ್‌ಬುಕ್ ಹಾಗೂ ಇನ್ನಿತರ ಸಾಮಾಜಿಕ ಜಾಲತಾಣಗಳಲ್ಲಿ ವಿವಿಧ ಹೆಸರುಗಳಲ್ಲಿ ನಂಬಿಸಿ ವಂಚನೆ ನಡೆಸಿದ್ದು, ೧೦೦ಕ್ಕೂ ಹೆಚ್ಚು ಸಿಮ್ ಕಾರ್ಡ್‌ಗಳನ್ನು ಬಳಸಿರುವುದು ಪತ್ತೆಯಾಗಿದೆ.
ಫೇಸ್‌ಬುಕ್‌ನಲ್ಲಿ ತನ್ನ ಮಾದಕ ನೋಟದ ಫೋಟೋಗಳನ್ನು ಶೇರ್ ಮಾಡಿ ಜನರನ್ನು ಸೆಳೆಯುವ ತಂತ್ರಗಾರಿಕೆಯಲ್ಲಿ ಖುಷ್ಬು ಅವಳದು ಎತ್ತಿದ ಕೈ ಪರಿಚಯವಾದವರಿಗೆ ಕಾಫಿ, ತಿಂಡಿಗೆ ಹೋಟೆಲ್‌ಗಳ ರೂಂಗೆ ಆಹ್ವಾನ ನೀಡಿ ಅಲ್ಲಿಗೆ ಬಂದ ಪುರುಷರೊಂದಿಗೆ ಕೆಲ ಹೊತ್ತು ಕಳೆದು ಅತ್ಯಾಚಾರದ ಪ್ರಕರಣ ಹಾಕುತ್ತೇನೆ ಎಂದು ಬೆದರಿಸಿ ಹಣ, ಚಿನ್ನಾಭರಣ ದೋಚುತ್ತಿದ್ದಳು.
ಇನ್ನೂ ಖುಷ್ಬು ಓಡಾಟವೆಲ್ಲ ಕಾರಿನಲ್ಲೇ. ಪೆಟ್ರೋಲ್ ಬಂಕ್‌ಗಳಿಗೆ ಹೋಗಿ ಪೆಟ್ರೋಲ್ ಹಾಕಿಸಿಕೊಂಡು ನಾನು ಐಎಎಸ್ ಅಧಿಕಾರಿ ನನ್ನ ಸಹಾಯಕ ಬಂದು ಹಣ ನೀಡುತ್ತಾನೆ ಎಂದು ಅಲ್ಲಿಂದ ಪರಾರಿಯಾಗುತ್ತಿದ್ದಳು. ಈ ಸಂಬಂಧ ಜೈಪುರದ ಪೊಲೀಸರು ಆಕೆಯನ್ನು ಬಂಧಿಸಿದ್ದರು. ನಂತರ ಬಿಡುಗಡೆಯಾಗಿದ್ದ ಖುಷ್ಬು ರಾಜಸ್ಥಾನದಿಂದ ಪುಣೆಗೆ ಹೋಗಿ, ಹೋಟೆಲ್ ಮಾಲೀಕರೊಬ್ಬರೊಂದಿಗೆ ಪ್ರೀತಿಯ ನಾಟಕವಾಡಿ ಆತನ ಕಾರು ಕದ್ದು ಪರಾರಿಯಾಗಿದ್ದಳು. ಈ ಸಂಬಂಧ ಪುಣೆ ಪೊಲೀಸರು ಬಂಧಿಸಿದ್ದರು.
ರಾಜಸ್ಥಾನದಲ್ಲಿ ಐಎಎಸ್ ಅಧಿಕಾರಿ ಎಂದು ಸರ್ಕಾರಿ ಅಧಿಕಾರಿಗಳಿಗೆ ಮೋಸ ಮಾಡಿ, ಹಣ ವಸೂಲಿ ಮಾಡಿರುವ ಆರೋಪ ಆಕೆ ಮೇಲಿದೆ, ಗಣ್ಯ ವ್ಯಕ್ತಿಗಳೊಂದಿಗೆ ಸಂಪರ್ಕ ಹೊಂದಿ ಐಷಾರಾಮಿ ಕಾರುಗಳನ್ನು ಹೊಂದಿದ್ದ ಖುಷ್ಬು, ಎಲ್ಲಾ ಕಾರುಗಳಿಗೂ ನಕಲಿ ನಂಬರ್ ಪ್ಲೇಟ್‌ಗಳನ್ನು ಅಂಟಿಸಿದ್ದಳು.
ಇನ್ನು ರಾಜಸ್ಥಾನದ ಖ್ಯಾತ ನಟಿ ತೃಪ್ತಿಪಾಂಡೆ ಮಗಳಂತೆ ಫೇಸ್‌ಬುಕ್‌ನಲ್ಲಿ ಖಾತೆ ತೆರೆದು, ತೃಪ್ತಿ ಪಾಂಡೆ ಹೆಸರಲ್ಲಿ ಎನ್‌ಜಿಓ ಸ್ಥಾಪನೆ ಮಾಡಿದ್ದಾಗಿ ಹೇಳಿಕೊಂಡಿದ್ದಳು. ಈ ಮೂಲಕ ಹಲವರಿಂದ ಲಕ್ಷಾಂತರ ರೂ. ಹಣ ಪಡೆದು ವಂಚಿಸಿದ್ದಾಳೆ.
ರಾಜಸ್ಥಾನದ ಆದರ್ಶ ನಗರದಲ್ಲಿ ಕಾರೊಂದಕ್ಕೆ ಲಿಫ್ಟ್ ಕೇಳಿದ್ದ ಖುಷ್ಬು, ಚಾಲಕನಿಗೆ ಲೈಂಗಿಕ ಕ್ರಿಯೆಗೆ ಪ್ರಚೋದಿಸಿದ್ದಳು. ‘ಆಸೆಯಿದ್ದರೆ, ಗರ್ಭನಿರೋಧಕ ಮಾತ್ರೆ ತೆಗೆದುಕೊಂಡು ಬಾ’ ಎಂದು ಹೇಳಿದ್ದಳು. ಈಕೆಯ ಮಾತು ನಂಬಿದ ಚಾಲಕ ಕಾರಿನಿಂದ ಕೆಳಗಿಳಿದು ಬರುತ್ತಿದ್ದಂತೆ ಮತ್ತೊಂದು ಕಡೆಯಿಂದ ಕಾರು ಹತ್ತಿ ಪರಾರಿಯಾಗಿದ್ದಳು.
ಖುಷ್ಬು ವಂಚನೆ ಮಾಡುವ ಸಲುವಾಗಿಯೇ ೮ಕ್ಕೂ ಅಧಿಕ ನಕಲಿ ಗುರುತಿನ ಚೀಟಿಗಳನ್ನು ಹೊಂದಿದ್ದಾಳೆ. ಫೇಸ್‌ಬುಕ್ ಖಾತೆ ಹೊಂದಿದ್ದಾಳೆ. ೧೦೦ಕ್ಕೂ ಅಧಿಕ ಸಿಮ್‌ಕಾರ್ಡ್ ಬಳಸುತ್ತಿದ್ದಾಳೆ. ಖುಷ್ಬು ಶರ್ಮಾ, ಸ್ಮೃತಿ ಶರ್ಮಾ, ಲೇಡಿ ಕೋಕೆವಾ ಸೇರಿ ೫ ಹೆಸರಿನಲ್ಲಿ ವಂಚನೆ ಮಾಡಿದ್ದಾಳೆ. ೫ ರಾಜ್ಯಗಳಲ್ಲಿ ೮ ರಿಂದ ೧೦ ಕೋಟಿ ವಂಚಿಸಿರುವುದು ಪತ್ತೆಯಾಗಿದೆ.
ವಕೀಲೆ ಎಂದು ಹೇಳಿಕೊಂಡು ಕಪ್ಪು ಗೌನ್ ಧರಿಸಿ ನ್ಯಾಯಾಲಯದ ಆವರಣದಲ್ಲಿ ಓಡಾಡುತ್ತಿದ್ದ ಖುಷ್ಬೂ ವಕೀಲ ವಾಟ್ಸ್ಯಾಪ್ ಗ್ರೂಪ್‌ನಲ್ಲಿದ್ದಳು ಅಲ್ಲದೇ ವಕೀಲರ ನಕಲಿ ಗುರುತಿನ ಪತ್ರ ಹೊಂದಿ ನಗರದ ೪೫೦ಕ್ಕೂ ಹೆಚ್ಚು ವಕೀಲರ ಜೊತೆ ಫೇಸ್‌ಬುಕ್‌ನಲ್ಲಿ ಸಂಪರ್ಕ ಹೊಂದಿರುವುದು ವಿಚಾರಣೆಯಲ್ಲಿ ಗೊತ್ತಾಗಿದೆ.

Leave a Comment