ಮಹಾನಗರ ಪಾಲಿಕೆ ಮತ್ತು ಜಿಲ್ಲಾಡಳಿತದ ವಿರುದ್ಧ ಏಕಾಂಗಿ ಪ್ರತಿಭಟನೆ

ಮೈಸೂರು.ಜ.12- ಸಾರ್ವಜನಿಕ ಸ್ಥಳ, ರಸ್ತೆ, ಫುಟ್ ಪಾತ್ ಹೀಗೆ ಹಲವಾರು ಸ್ಥಳಗಳಲ್ಲಿ ಕಾಮಗಾರಿ ಮಾಡಬಾರದು ಎಂಬ ಸರ್ವೋಚ್ಛ ನ್ಯಾಯಾಲಯದ ಆದೇಶವಿದ್ದರೂ ಅವುಗಳಿಗೆ ಕ್ಯಾರೇ ಎನ್ನದೆ, ಅಂಗಡಿ ಮಳಿಗೆ ನಿರ್ಮಿಸುತ್ತಿರುವ ಮೈಸೂರು ಮಹಾನಗರ ಪಾಲಿಕೆ ಮತ್ತು ಜಿಲ್ಲಾಡಳಿತದ ವಿರುದ್ಧ ಪರಿಸರ ಸಂರಕ್ಷಣಾ ಸಮಿತಿಯ ರಾಜ್ಯಾಧ್ಯಕ್ಷೆ ಭಾನು ಮೋಹನ್ ಅವರು ಏಕಾಂಗಿಯಾಗಿ ಪ್ರತಿಭಟನೆ ನಡೆಸಿದರು.
ಅವರಿಂದು ನ್ಯಾಯಾಲಯದ ಗಾಂಧಿ ಪ್ರತಿಮೆ ಎದುರು ಏಕಾಂಗಿ ಪ್ರತಿಭಟನೆ ನಡೆಸಿ ಮಾತನಾಡಿ ಮೈಸೂರಿನ ಸರಸ್ವತಿಪುರಂನಲ್ಲಿ ಸರ್ವೋಚ್ಛ ನ್ಯಾಯಾಲಯದ ಆದೇಶವನ್ನು ಉಲ್ಲಂಘಿಸಿ ಸರ್ವೀಸ್ ರಸ್ತೆಯಲ್ಲಿ ಅಂಗಡಿ ಮಳಿಗೆ ನಿರ್ಮಿಸುತ್ತಿದ್ದಾರೆ. ಅಲ್ಲದೇ ಸ್ಥಳದಲ್ಲಿ ಮಳೆ ನೀರು ಚರಂಡಿ ಕಾಮಗಾರಿಗೆ ಎಂದು 30ಲಕ್ಷ ಹಣವನ್ನು ಮಂಜೂರಾತಿ ಮಾಡಿಕೊಂಡು ಮಳೆ ನೀರು ಚರಂಡಿ ಕಾಮಗಾರಿ ಮಾಡಿಲ್ಲ. ಇದರ ಜೊತೆಗೆ ಕೌನ್ಸಿಲ್ ಸಭೆಯ ಪತ್ರದಲ್ಲಿ ಈ ಅಂಗಡಿ ಮಳಿಗೆ ಕಟ್ಟಿತ್ತಿರುವುದು ಕಂಡು ಬಂದಿದೆ. ಇದು ಕಾನೂನು ಬಾಹಿರ. ಈ ಬಗ್ಗೆ ನಗರಪಾಲಿಕೆಯ ಆಯುಕ್ತರನ್ನು ಪ್ರಶ್ನಿಸಿದರೆ ಬಂಡವಾಳ ಹಾಕಿದ್ದೇವೆ ಎನ್ನುತ್ತಾರೆ. ಜಿಲ್ಲಾಧಿಕಾರಿಗಳಿಗೆ ಹೇಳಿದರೆ ಈ ಬಗ್ಗೆ ಪರಿಶೀಲನೆ ನಡೆಸುತ್ತೇವೆ ಎಂದು ಹೇಳಿದ್ದು ಇದುವೆರೆಗೂ ಸರಿಯಾದ ಕ್ರಮ ಕೈಗೊಂಡಿಲ್ಲ. ಮಳೆ ಬಂದಾಗ ಮಳೆನೀರು ಭೂಮಿಯೊಳಗೆ ಹೋಗಬೇಕು ಆಗ ಭೂಮಿ ಸಮೃದ್ಧಿಯಾಗುತ್ತದೆ. ಅಂತರ್ಜಲ ಹೆಚ್ಚುತ್ತದೆ. ಆದರೆ ಫುಟ್ ಪಾತ್ ಕಾಮಗಾರಿ ಮಾಡುವಾಗ ಸಿಮೆಂಟ್ ಪ್ಲಾಟ್ ಮಾಡಿ ಟೈಲ್ಸ್ ಹಾಕುವುದರಿಂದ ಮಳೆ ನೀರು ಹರಿದು ಚರಂಡಿ ಸೇರುತ್ತದೆ. ಮರಗಳ ಸುತ್ತ ವೃತ್ತ ನಿರ್ಮಿಸಿ ಎಂದರೆ ಕೆಲವು ಅಧಿಕಾರಿಗಳು ಮಾಡುತ್ತಾರೆ, ಕೆಲವೆಡೆ ಮಾಡಲ್ಲ. ಸಾರ್ವಜನಿಕ ಸ್ಥಳ, ರಸ್ತೆ, ಫುಟ್ ಪಾತ್ ಹೀಗೆ ಹಲವಾರು ಸ್ಥಳಗಳಲ್ಲಿ ಕಾಮಗಾರಿ ಮಾಡಬಾರದು ಎಂಬ ಸರ್ವೋಚ್ಛ ನ್ಯಾಯಾಲಯದ ಆದೇಶವಿದೆ. ನಗರದ ವೃತ್ತಗಳಲ್ಲಿ ಮರವಿದ್ದರೆ ಟ್ರಾಫಿಕ್ ತೊಂದರೆ ಎಂದು ಕಡಿಯುತ್ತಾರೆ. ಇತ್ತೀಚೆಗೆ ಹಣ ಲೂಟಿ ಮಾಡುವ ಉದ್ದೇಶದಿಂದ ವಿದ್ಯುತ್ ಕಂಬಗಳನ್ನು ಹಾಕುತ್ತಿದ್ದಾರೆ. ಇದರ ಜೊತೆ ಸರಸ್ವತಿಪುರಂ ಬೇಕ್ ಪಾಯಿಂಟ್ ಬಳಿ ಕುವೆಂಪುನಗರದ ಜೋಡಿರಸ್ತೆಯಲ್ಲಿ ಈ ರೀತಿ ಕಂಬ ಹಾಕಿ ಸುತ್ತ ಅಲಂಕಾರಿಕ ಕಲ್ಲುಗಳನ್ನು ಹಾಕುತ್ತಿದ್ದಾರೆ. ಇದು ಎಷ್ಟರಮಟ್ಟಿಗೆ ವೈಜ್ಞಾನಿಕವಾಗಿದೆ. ನಗರಪಾಲಿಕೆ ಕಾರ್ಯಪಾಲಕ ಅಭಿಯಂತರರನ್ನು ಕೇಳಿದರೆ ವಾಹನ ಚಲಿಸಲು ತೊಂದರೆಯಾಗುವುದಿಲ್ಲ ಎನ್ನುತ್ತಾರೆ. ರಸ್ತೆಗೆ ಲಕ್ಷಾಂತರ ಹಣ ಯಾಕೆ ಖರ್ಚು ಮಾಡಬೇಕು? ಇದು ಅನ್ಯಾಯವಲ್ಲವೇ, ಸಾರ್ವಜನಿಕ ತೆರಿಗೆ ಹಣವನ್ನು ಈ ರೀತಿ ಪೋಲು ಮಾಡುವುದು ಎಷ್ಟು ಸರಿ? ಮೈಸೂರು ಜಿಲ್ಲೆ ಟಿ.ನರಸೀಪುರ ತಾಲೂಕು ಚೌಹಳ್ಳಿ ಗ್ರಾಮದಲ್ಲಿ ಕೆರೆಯ ಮೇಲೆ 3ಮನೆಗಳನ್ನು ನಿರ್ಮಿಸಿದ್ದಾರೆ. ಇದಕ್ಕೆ ಸಂಬಂಧಪಟ್ಟ ಅಧಿಕಾರಿಗೆ ಆರ್ ಟಿಸಿಯಲ್ಲಿ ಸರ್ಕಾರಿ ಕಟ್ಟೆ ಎಂದು ಇದೆಯಲ್ಲ ಎಂದು ಕೇಳಿದರೆ ಇದು ಒಣಗಿದ ಕೆರೆ ಎಂದು ಬೇಜವಾಬ್ದಾರಿ ಉತ್ತರ ಕೊಡುತ್ತಾರೆ. ಪರಿಸರದ ಬಗ್ಗೆ ಯಾರಿಗೂ ಕಾಳಜಿಯೇ ಇಲ್ಲದಂತಾಗಿದೆ. ಜಿಲ್ಲಾಡಳಿತ ತುರ್ತು ಕ್ರಮ ಕೈಗೊಳ್ಳದಿದ್ದಲ್ಲಿ ತಪ್ಪಿತಸ್ಥರ ವಿರುದ್ಧ ಕಾನೂನು ಪ್ರಕಾರ ದಾವೆ ಹೂಡಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.

Leave a Comment