ಮಹಾತ್ಮರ ಜಯಂತಿ ಆಚರಣೆ ಸಿಎಂ ಜತೆ ಚರ್ಚಿಸಿ ನಿರ್ಧಾರ

ಬೆಂಗಳೂರು, ಫೆ 20: ಮುಖ್ಯಮಂತ್ರಿಗಳು ಹಾಗೂ ವಿಪಕ್ಷ ನಾಯಕರುಗಳೊಂದಿಗೆ ಚರ್ಚೆ ನಡೆಸಿ ಮಹಾತ್ಮರ ಜಯಂತಿಗಳ ಅರ್ಥಪೂರ್ಣ ಆಚರಣೆಗೆ ಕ್ರಮ ಕೈಗೊಳ್ಳಲಾಗುವುದೆಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸಿ.ಟಿ. ರವಿ ಹೇಳಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ನಯನ ಸಭಾಂಗಣದಲ್ಲಿ ಏರ್ಪಡಿಸಿದ್ದ ಸರ್ವಜ್ಞ ಜಯಂತಿ ಉದ್ಘಾಟಿಸಿ ಮಾತನಾಡಿದರು.
ಮನಸ್ಸಿನಲ್ಲಿ ಬೇಡವಾದ ವಿಚಾರಗಳನ್ನಿಟ್ಟುಕೊಂಡು ಮಹಾತ್ಮರ ಜಯಂತಿಗಳ ಆಚರಣೆ ನನಗೆ ಇಷ್ಟವಿಲ್ಲ. ಎಲ್ಲ ಮಹಾತ್ಮರ ಜಯಂತಿಗಳನ್ನು ಎಲ್ಲರೂ ಸೇರಿ ಅರ್ಥಪೂರ್ಣವಾಗಿ ಆಚರಿಸಬೇಕೆಂದು ಹೇಳಿದರು.
ಸಂತ ಸರ್ವಜ್ಞ ತಿರುವಳ್ಳುವರ ಸೇರಿದಂತೆ ವಚನಕಾರರು, ಶರಣರು, ದಾಸರು, ಸಮಾನ ಸಮಾಜದ ಪರಿಕಲ್ಪನೆಯಲ್ಲಿ ಸೇವೆ ಸಲ್ಲಿಸಿದವರು. ಆದರೆ ಇಂದು ನಿರ್ದಿಷ್ಟ ಮಹಾತ್ಮರ ಜಯಂತಿಗಳು ನಿರ್ದಿಷ್ಟ ಜಾತಿಗೆ ಸೀಮಿತವಾಗುತ್ತಿರುವುದು ಸಮಾಜದ ಅಭಿವೃದ್ಧಿಗೆ ಅಡ್ಡಿ ಎಂದು ಕಳವಳ ವ್ಯಕ್ತಪಡಿಸಿದರು.
ಸರ್ವಜ್ಞ ಒಬ್ಬ ದಾರ್ಶನಿಕರು, ಅವಧೂತರು. ಅವರ ವ್ಯಕ್ತಿತ್ವ ಭೂಮಿ, ಆಕಾಶವನ್ನೆ ಆವರಿಸಿದೆ. ಆದರೆ ಸರ್ವಜ್ಞ ಜಯಂತಿ ಆಚರಣೆ ಗಡಿ ಮೀರಿದ ಕಾರ್ಯಕ್ರಮವಾಗಬೇಕೇ ಹೊರತು ಜಾತಿಗೆ ಸೀಮಿತವಾಗಬಾರದೆಂದ ಅವರು ಸರ್ವಜ್ಞ ಯಾವ ವಿಶ್ವವಿದ್ಯಾನಿಲಯಗಳಲ್ಲೂ ಕಲಿಯಲಿಲ್ಲ. ಹುಟ್ಟಿನಿಂದಲೇ ಅವರಿಗೆ ದೈವದತ್ತವಾಗಿ ಸಮಾನ ಸಮಾಜದ ಪ್ರೇರಣೆಯಾಗಿತ್ತು ಎಂದರು.
ಇದುವರೆಗೂ ಜಾತಿ ಆಧರಿಸಿ ಯಾವುದೇ ವ್ಯಕ್ತಿಗೆ ಭಗವಂತ ಪ್ರತ್ಯಕ್ಷನಾಗಿಲ್ಲ. ಅವರ ಭಕ್ತಿ, ಕಾಯಕ, ತತ್ವಕ್ಕೆ ಮನಸೋತು ಸಮಾಜವನ್ನು ಮಾರ್ಮಿಕವಾಗಿ ತಿದ್ದಲು ಯತ್ನಿಸಿದವರಿಗೆ ಭಗವಂತ ಪ್ರತ್ಯಕ್ಷನಾಗಿದ್ದಾನೆ ಎಂದರು.
ವೇದಿಕೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ ರಂಗಪ್ಪ, ಕುಂಬಾರ ಸಮಾಜದ ಶರಣ ಕುಂಬಾರ ಗುಂಡಯ್ಯ ಸ್ವಾಮೀಜಿ, ಅಧ್ಯಕ್ಷ ಮುನಿಸ್ವಾಮಿ ಹಾಗೂ ಉಪನ್ಯಾಸಕ ಮಲ್ಲೇಶಪ್ಪ ಮಾಸೂರು ಉಪಸ್ಥಿತರಿದ್ದರು.

ಸರ್ವಜ್ಞರ ಸಮಾಧಿ ಅಭಿವೃದ್ಧಿ. ಸರ್ವಜ್ಞರ ವಚನಗಳನ್ನು ರಾಜ್ಯಾದ್ಯಂತ ಪ್ರಚಾರ ಮಾಡುವುದು. ಮತ್ತು ಸಮಾಜದ ಅಭಿವೃದ್ಧಿಗೆ ನಿರ್ದಿಷ್ಟ ಅನುದಾನ ಮೀಸಲಿಡುವುದು ಸೇರಿದಂತೆ ಇನ್ನಿತರ ಬೇಡಿಕೆಗಳನ್ನೊಳಗೊಂಡ ಮನವಿಯನ್ನು ಕುಂಬಾರ ಸಂಘದಿಂದ ಸಚಿವರಿಗೆ ಸಲ್ಲಿಸಲಾಯಿತು.

Leave a Comment