ಮಹಾಕಾಯ ವ್ಯಾಯಾಮ ಕೇಂದ್ರ ಲೋಕಾರ್ಪಣೆ

ಬೆಂಗಳೂರು, ಸೆ. ೧೦- ದೇಶದಲ್ಲೇ ಮೊಟ್ಟಮೊದಲ ಬಾರಿಗೆ ಪದ್ಮನಾಭನಗರ ವಿಧಾನಸಭಾ ಕ್ಷೇತ್ರದ ಯಡಿಯೂರು ವಾರ್ಡ್‌ನಲ್ಲಿ 40 ಲಕ್ಷ ರೂ. ವೆಚ್ಚದ ಬಿಬಿಎಂಪಿ ಅನುದಾನದಲ್ಲಿ ಹೈಡ್ರಾಲಿಕ್ ವ್ಯಾಯಾಮ ಉಪಕರಣಗಳನ್ನು ಒಳಗೊಂಡ ಮಹಾಕಾಯ ವ್ಯಾಯಾಮ ಕೇಂದ್ರ ಇಂದು ಲೋಕಾರ್ಪಣೆಗೊಂಡಿದೆ.
ಸೌತ್ ಎಂಡ್ ವೃತ್ತದ ಬಳಿ ಇರುವ ಸಂಜೀವಿನಿ ವನ ಮತ್ತು ಧನ್ವಂತರಿ ವನಗಳ ನಡುವೆ ಸಜ್ಜುಗೊಂಡಿರುವ ಹೈಡ್ರಾಲಿಕ್ ವ್ಯಾಯಾಮ ಉಪಕರಣಗಳನ್ನು 15 ವರ್ಷಗಳಿಂದ 90 ವರ್ಷದ ವೃದ್ಧರೂ ಕೂಡ ಸುಲಭವಾಗಿ ವ್ಯಾಯಾಮ ಮಾಡಬಹುದಾಗಿದೆ.
ವ್ಯಾಯಾಮ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದ ಮಾಜಿ ಉಪಮುಖ್ಯಮಂತ್ರಿ ಆರ್. ಅಶೋಕ್ ಅವರು, ಮೆಕಾನಿಕಲ್ ತಂತ್ರಜ್ಞಾನ ಇರುವ ಉಪಕರಣಗಳ ಬಳಕೆಯಿಂದ ಯಾವುದೇ ಆಕಸ್ಮಿಕ ಹಾನಿಯಾಗುವುದಿಲ್ಲ ಎಂದು ಹೇಳಿದರು.
17 ಎಕರೆ ಔಷಧಿ ವನಗಳ ನಡುವೆ ಆರಂಭಗೊಂಡಿರುವ ವ್ಯಾಯಾಮ ಉಪಕರಣಗಳನ್ನು ಪ್ರತಿಯೊಬ್ಬ ಯುವಕರು, ಹಿರಿಯ ನಾಗರೀಕರು ಪ್ರಯೋಜನ ಪಡೆದುಕೊಳ್ಳಬೇಕು ಎಂದರು.
ಮೇಯರ್ ಆರ್. ಸಂಪತ್ ರಾಜ್ ಅವರು, ಖಾಸಗಿ ಜಿಮ್‌ಗಳಿಗೆ ತೆರಳಿ ಸಾವಿರಾರು ರೂ. ಗಳನ್ನು ಸುರಿಯುವುದರ ಬದಲು ಬಿಬಿಎಂಪಿ ಉದ್ಯಾನವನಗಳಲ್ಲಿರುವ ಜಿಮ್ ಉಪಕರಣಗಳನ್ನು ಬಳಸುವಂತೆ ಸಾರ್ವಜನಿಕರಿಗೆ ಸಲಹೆ ನೀಡಿದರು.
ಹೈಡ್ರಾಲಿಕ್ ವ್ಯವಸ್ಥೆ ಇರುವ ಜಿಮ್ ಉಪಕರಣಗಳನ್ನು ಪಾಲಿಕೆಯ ಉದ್ಯಾನವನಗಳಲ್ಲಿ ಅಳವಡಿಸುವ ಮಧ್ಯೆ ಆಲೋಚಿಸಲಾಗುವುದು ಎಂದು ಹೇಳಿದರು.
ಬಿಬಿಎಂಪಿ ಆಡಳಿತ ಪಕ್ಷದ ಮಾಜಿ ನಾಯಕ ಎನ್.ಆರ್. ರಮೇಶ್ ಅವರು ಮಾತನಾಡಿ, ನವೆಂಬರ್ ತಿಂಗಳಲ್ಲಿ ಈ ಉದ್ಯಾನವನಗಳಲ್ಲಿ ಸೋಲಾರ್ ವ್ಯವಸ್ಥೆಯನ್ನು ಅನುಷ್ಠಾನಗೊಳಿಸಿ ವಿದ್ಯುತ್ ದೀಪಗಳನ್ನು ಅಳವಡಿಸಲಾಗುವುದು. ಇದರಿಂದ ಈ ಉದ್ಯಾನವನಗಳಿಂದ ಬರುತ್ತಿದ್ದ ವಿದ್ಯುತ್ ಶುಲ್ಕ ಕಡಿಮೆಯಾಗಲಿದೆ ಎಂದು ಹೇಳಿದರು.
ಇದೇ ವೇಳೆ ಮೇಯರ್ ಸಂಪತ್ ರಾಜ್ ಮತ್ತು ಮಾಜಿ ಉಪಮುಖ್ಯಮಂತ್ರಿ ಆರ್. ಅಶೋಕ್ ಅವರು, ಯಡಿಯೂರು ವಾರ್ಡ್‌ನ 82 ಮಹಿಳೆಯರಿಗೆ ತಲಾ 3 ಸಾವಿರ ರೂ. ಟೈಲರಿಂಗ್ ತರಬೇತಿಯ ಸಹಾಯಧನ ಮತ್ತು ನಾಲ್ಕು ಮಂದಿ ಬಡ ಪದವಿಧರ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್‌ಗಳನ್ನು ವಿತರಿಸಿದರು.
ಕಾಂಗ್ರೆಸ್ ಸರ್ಕಾರ ಕರೆ ನೀಡಿರುವ ಭಾರತ್ ಬಂದ್‌ನಿಂದ ಜನಜೀವನ ಅಸ್ತವ್ಯಸ್ತಗೊಂಡಿಲ್ಲ. ಸರ್ಕಾರಿ ಪ್ರೇರಿತ ಬಂದ್ ಇದಾಗಿದ್ದು, ಬಲವಂತವಾಗಿ ಕೆ.ಎಸ್.ಆರ್.ಟಿ.ಸಿ, ಬಿಎಂಟಿಸಿ ಬಸ್‌ಗಳ ಸಂಚಾರವನ್ನು ಸ್ಥಗಿತಗೊಳಿಸಿ ಜನರನ್ನು ಸಂಕಷ್ಟಕ್ಕೆ ಈಡುಮಾಡಿದೆ.
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ಬೆಲೆ ಏರಿದರೆ, ಪೆಟ್ರೋಲ್, ಡೀಸೆಲ್ ಬೆಲೆ ತಾನಾಗಿಯೇ ಇಳಿಯುವುದು. ಇದಕ್ಕೆ ಕೇಂದ್ರ ಸರ್ಕಾರವನ್ನು ದೂರುವುದು ಸರಿಯಿಲ್ಲ. ರಾಜ್ಯ ಸರ್ಕಾರವೂ ಕೂಡ ತೆರಿಗೆಯನ್ನು ಕಡಿತಗೊಳಿಸಬೇಕು.
ಈ ಬಾರಿಯ ಮೇಯರ್ ಪಟ್ಟ ಪಡೆಯಲು ಬಿಜೆಪಿ ಯಾವುದೇ ಆಲೋಚನೆ ಮಾಡಿಲ್ಲ.
– ಆರ್. ಅಶೋಕ್, ಮಾಜಿ ಉಪಮುಖ್ಯಮಂತ್ರಿ.

Leave a Comment