ಮಸ್ಕಿ : ತೋಳ ಕಚ್ಚಿ 14 ಜನರಿಗೆ ಗಾಯ – ಆತಂಕ

* ತೋಳವನ್ನು ಹೊಡೆದು ಸಾಯಿಸಿದ ಜನ
ರಾಯಚೂರು.ಫೆ.09- ತೋಳವೊಂದು ಗ್ರಾಮಕ್ಕೆ ನುಗ್ಗಿ 14 ಜನರನ್ನು ಕಚ್ಚಿದ ದಾರುಣ ಘಟನೆ ಮಸ್ಕಿ ತಾಲೂಕಿನ ಪಾಮನಕಲ್ಲೂರು ಗ್ರಾ.ಪಂ.ವ್ಯಾಪ್ತಿಯಲ್ಲಿ ನಡೆದಿದೆ.
ಕಾಡಿನಲ್ಲಿರಬೇಕಾದ ತೋಳ ಚಿಲ್ಕರಾಗಿ ಮತ್ತು ಇಲಕಲ್ ಗ್ರಾಮಗಳಿಗೆ ನುಗ್ಗಿ 14 ಜನರಿಗೆ ಕಚ್ಚಿ ಗಾಯಗೊಳಿಸಿದೆ. ಬೆಳಗಿನ ಜಾವ 4 ಗಂಟೆಗೆ ಇದ್ದಕ್ಕಿದಂತೆ ಗ್ರಾಮದೊಳಗೆ ನುಗ್ಗಿ ಮನಸೋ ಇಚ್ಛೆ ಕಚ್ಚುವಿಕೆಯಿಂದ ಗ್ರಾಮದ ಜನ ಭಯ ಭೀತಗೊಂಡಿದ್ದರು. ತೋಳ ಕಚ್ಚುವಿಕೆಯಿಂದ ಗಾಯಗೊಂಡವರನ್ನು ಚಿಲ್ಕರಾಗಿ ಗ್ರಾಮದ ವೀರಭದ್ರಪ್ಪ ಕುಂಬಾರ, ಹುಲಿಗಪ್ಪ, ಶಾಂತಮ್ಮ, ಪಾರ್ವತಮ್ಮ, ಈರಮ್ಮ, ದುರ್ಗಮ್ಮ, ಪಾರ್ವತಿ, ಆದಪ್ಪ ಹಾಗೂ ಇಲಕಲ್ ಗ್ರಾಮದ ನಿರುಪಾದಿ, ಶಿವಮ್ಮ ಸೇರಿದಂತೆ ಇತರರೆಂದು ಗುರುತಿಸಲಾಗಿದೆ.
ಗಾಯಾಳುಗಳನ್ನು ಲಿಂಗಸೂಗೂರು ತಾಲೂಕಿನ ಆಸ್ಪತ್ರೆಗೆ ಸೇರಿಸಲಾಗಿದೆ. ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗಾಗಿ ರಿಮ್ಸ್ ಆಸ್ಪತ್ರೆಗೆ ಕಳುಹಿಸಲಾಗಿದೆಂದು ಮುಖ್ಯ ವೈದ್ಯಾಧಿಕಾರಿ ಡಾ.ಲಕ್ಕಪ್ಪಅವರು ತಿಳಿಸಿದ್ದಾರೆ. ತೋಳ ಬಂದ ಪ್ರಕರಣಕ್ಕೆ ಸಂಬಂಧಿಸಿ ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡ‌ಲಾಗಿತ್ತು. ಆದರೆ. ಸಂಬಂಧಪಟ್ಟ ಅರಣ್ಯಾಧಿಕಾರಿಗಳು ತಕ್ಷಣಕ್ಕೆ ಆಗಮಿಸದಿರುವುದರಿಂದ ಸಾರ್ವಜನಿಕರು ತೀವ್ರ ಆಕ್ರೋಶಕ್ಕೆ ಗುರಿಯಾಗುವಂತಾಗಿತ್ತು.
ಜನರು ತಾವೇ ತೋಳವನ್ನು ಹೊಡೆದು ಸಾಯಿಸುವ ಮೂಲಕ ಹೆಚ್ಚಿನ ಅಪಾಯ ತಪ್ಪಿಸಿದರು. ಲಿಂಗಸೂಗೂರು ತಾಲೂಕು ಮತ್ತು ಮಸ್ಕಿ ಗಡಿ ಭಾಗದಲ್ಲಿ ಅಗಾಗ ಕಾಡು ಪ್ರಾಣಿಗಳ ಪ್ರತ್ಯಕ್ಷ ಸಾಮಾನ್ಯವಾಗಿದೆ. ಈ ಹಿಂದೆ ಚಿರತೆಯೊಂದು ಪ್ರತ್ಯಕ್ಷವಾಗಿತ್ತು.

Leave a Comment