ಮಸೀದಿ ಧ್ವಂಸ ಹಿಂದೂಗಳ ಶೌರ್ಯ ಪ್ರದರ್ಶನ ಮುಸ್ಲಿಂರಿಗೆ ಕರಾಳ ದಿನ

ಅಯೋಧ್ಯೆ, ಡಿ. ೬- ಬಾಬ್ರಿ ಮಸೀದಿ ಧ್ವಂಸ ಮಾಡಿ ಇಂದಿಗೆ 26 ವರ್ಷಗಳು ಪೂರೈಸಿವೆ.ಈ ಹಿನ್ನೆಲೆಯಲ್ಲಿ ಹಿಂದೂಪರ ಸಂಘಟನೆಗಳು ಇಂದು `ಶೌರ್ಯ’ದಿನ ಆಚರಿಸುತ್ತಿದ್ದು, ಪ್ರತಿಯಾಗಿ ಮುಸ್ಲಿಂ ಸಂಘಟನೆಗಳು ಕರಾಳ ದಿನವಾಗಿ ಆಚರಿಸುತ್ತಿವೆ.
ಹಿಂದೂ ಮತ್ತು ಮುಸ್ಲಿಂ ಸಂಘಟನೆಗಳ ಪರ ವಿರೋಧದ ಪ್ರತಿಭಟನೆಗಳು ನಡೆಸುತ್ತಿರುವ ಹಿನ್ನೆಲೆಯಲ್ಲಿ ರಾಮಜನ್ಮ ಭೂಮಿ ಅಯೋಧ್ಯೆಯಲ್ಲಿ ಬಿಗಿ ಭದ್ರತೆಗಾಗಿ 2,500 ಪೊಲೀಸರನ್ನು ನಿಯೋಜಿಸಲಾಗಿದೆ.
ಅಯೋಧ್ಯೆಯಲ್ಲಿ ಬಹು ಹಂತದ ಪೊಲೀಸ್ ಭದ್ರತೆ ಒದಗಿಸಿದ್ದು, ಯಾವುದೇ ಅಹಿತಕರ ಘಟನೆಗಳಿಗೆ ಅವಕಾಶ ನೀಡದಂತೆ ಉತ್ತರ ಪ್ರದೇಶ ಸರ್ಕಾರ ಎಲ್ಲ ಬಿಗಿ ಭದ್ರತೆ ಹಾಗೂ ಮುಂಜಾಗ್ರತಾಕ್ರಮ ಕೈಗೊಂಡಿದೆ.
ರಾಮಮಂದಿರಕ್ಕೆ ಆಗ್ರಹ
ಶೀಘ್ರವೇ ರಾಮಮಂದಿರ ನಿರ್ಮಾಣಕ್ಕೆ ಅಡಿಗಲ್ಲು ಹಾಕುವ ಜತೆಗೆ ಸ್ವಾಮೀಜಿಗಳು ಮಧ್ಯಪ್ರವೇಶಿಸುವಂತೆ ವಿಶ್ವ ಹಿಂದೂ ಪರಿಷತ್ ಸೇರಿದಂತೆ ವಿವಿಧ ಹಿಂದೂ ಪರ ಸಂಘಟನೆಗಳು ಆಗ್ರಹಿಸಿವೆ.
ಈ ಸಂಬಂಧ ಪ್ರತಿಕ್ರಿಯಿಸಿರುವ ನಿರ್ಮೋಹಿ ಆಕರದ ಮಹಂತ ರಾಮ್‌ದಾಸ್, 1992, ಡಿ. 6 ರಂದು ಬಾಬರಿ ಮಸೀದಿಯನ್ನು ಕರ ಸೇವಕರು ಧ್ವಂಸ ಮಾಡಿದ ವರ್ಷಾಚರಣೆಯನ್ನು ಹಿಂದೂ ಪರ ಸಂಘಟನೆಗಳು ಶೌರ್ಯ ದಿನವನ್ನಾಗಿ ಆಚರಿಸುತ್ತಿವೆ. ಈ ನಡುವೆ ಹನುಮಾನ್ ಗಿರಿ ಸೇರಿದಂತೆ ವಿವಿಧೆಡೆ ಮಹಾ ಮಂಗಳಾರತಿ ಹಮ್ಮಿಕೊಂಡಿರುವುದಾಗಿ ಹೇಳಿದರು.
ವಿಶ್ವಹಿಂದೂ ಪರಿಷತ್, ಭಜರಂಗ ದಳ ಸೇರಿದಂತೆ ವಿವಿಧ ಸಂಘಟನೆಗಳು ನಡೆಸುತ್ತಿರುವ ಶೌರ್ಯ ದಿನಕ್ಕೆ ಪ್ರತಿಯಾಗಿ ಮುಸ್ಲಿಂ ಸಂಘಟನೆಗಳು ಕರಾಳ ದಿನವನ್ನಾಗಿ ಆಚರಿಸುತ್ತಿವೆ. ಈ ಸಂಬಂಧ ಪ್ರತಿಕ್ರಿಯಿಸಿರುವ ಇಕ್ಬಾಲ್ ಅನ್ಸಾರಿ, ಬಾಬರಿ ಮಸೀದಿ ಧ್ವಂಸ ಮಾಡಿದ ದಿನವನ್ನು ಉತ್ತರ ಪ್ರದೇಶದಾದ್ಯಂತ ಕರಾಳ ದಿನವನ್ನಾಗಿ ಆಚರಿಸಲಾಗುತ್ತಿದೆ ಎಂದು ಹೇಳಿದ್ದಾರೆ.

Leave a Comment