ಮಸೀದಿ ದಾಖಲೆಪತ್ರ ಕಳವು

ಬಜ್ಪೆ, ಏ.೨೧- ಮಸೀದಿಗೆ ಸಂಬಂಧಪಟ್ಟ ದಾಖಲೆಪತ್ರಗಳು ಕಳವಾಗಿದೆ ಎಂದು ಗುರುಪುರ ಕೈಕಂಬ ಸಮೀಪದ ಬೈಲುಪೇಟೆ ನಿವಾಸಿ ಅಬ್ದುಲ್ ಅಜೀಜ್ ಮನೆಯಲ್ಲಿ ಈ ರೀತಿ ಕಳವಾಗಿದೆ ಎಂದು ಬಜ್ಪೆ ಠಾಣೆಯಲ್ಲಿ ದೂರು ದಾಖಲಾಗಿದೆ. ಅಬ್ದುಲ್ ಅಜೀಜ್ ಹಾಗೂ ಬೈಲುಪೇಟೆ ಜುಮಾ ಮಸೀದಿಯ ಅಧ್ಯಕ್ಷರ ಮಧ್ಯೆ ಜಾಗದ ವಿಚಾರದಲ್ಲಿ ತಕರಾರಿದ್ದು ಈ ಬಗ್ಗೆ ಹಲವು ತಿಂಗಳಿನಿಂದ ಸಿವಿಲ್ ಕೇಸ್ ನಡೆಯುತ್ತಿದೆ.

ಈ ಬಗ್ಗೆ ಬಜ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದರ ದಾಖಲೆ ಪತ್ರಗಳನ್ನು ಕೋರ್ಟಿಗೆ ಹಾಜರುಪಡಿಸುವಂತೆ ಅಜೀಜ್‌ಗೆ ನೋಟೀಸ್ ಕಳಿಸಲಾಗಿತ್ತು. ಆದರೆ ದಾಖಲೆ ಸಲ್ಲಿಸಬೇಕೆನ್ನುವಷ್ಟರಲ್ಲಿಯೇ ಈ ಕಳ್ಳತನ ಪ್ರಕರಣ ನಡೆದಿರುವುದು ಸಾಕಷ್ಟು ಸಂಶಯಕ್ಕೆ ಕಾರಣವಾಗಿದೆ. ಅಜೀಜ್ ಅವರ ದೂರಿನ ಪ್ರಕಾರ ತಾನು ಮನೆಯಲ್ಲಿಲ್ಲದ ವೇಳೆ ತಮ್ಮ ಮನೆಯಲ್ಲಿ ಕಳ್ಳರು ನುಗ್ಗಿದ್ದು ಯಾವುದೇ ಚಿನ್ನಾಭರಣಗಳನ್ನು ಮುಟ್ಟದೆ ಬರೇ ದಾಖಲೆ ಪತ್ರಗಳನ್ನಷ್ಟೇ ಕಳವು ಮಾಡಲಾಗಿದೆ ಎಂದು ದೂರು ನೀಡಿದ್ದಾರೆ. ಅಲ್ಲದೆ ತನ್ನ ಸಮೀಪದ ಮನೆಯಿಂದಲೂ ಕಳವಿಗೆ ಯತ್ನಿಸಲಾಗಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಒಟ್ಟಿನಲ್ಲಿ ಈ ಕಳ್ಳತನ ಪ್ರಕರಣ ಸಾಕಷ್ಟು ಸಂಶಯಕ್ಕೆ ಗುರಿಯಾಗಿದ್ದು ಪೊಲೀಸರು ತನಿಖೆ ನಡೆಸಿದ ಬಳಿಕವಷ್ಟೇ ಪ್ರಕರಣದ ಸತ್ಯಾಸತ್ಯತೆ ಹೊರಬೀಳುವ ಸಾಧ್ಯತೆ ಇದೆ. ಬಜ್ಪೆ ಠಾಣೆಯ ಇನ್ಸ್‌ಪೆಕ್ಟರ್ ಟಿ.ಡಿ.ನಾಗರಾಜ್ ನೇತೃತ್ವದಲ್ಲಿ ತನಿಖೆ ನಡೆಯುತ್ತಿದೆ.

Leave a Comment