ಮಸೀದಿಯಲ್ಲಿ ನರಮೇಧ : ಕೂದಲೆಳೆ ಅಂತರದಲ್ಲಿ ಬಾಂಗ್ಲಾ ಕ್ರಿಕೆಟ್ ತಂಡ ಪಾರು

ಕ್ರೈಸ್ಟ್ ಚರ್ಚ್, ಮಾ. ೧೫- ದ್ವೀಪರಾಷ್ಟ್ರ ನ್ಯೂಜಿಲೆಂಡ್‌ನ ಕ್ರೈಸ್ಟ್ ಚರ್ಚ್‌ನ ಎರಡು ಮಸೀದಿಗಳ ಮೇಲೆ ಇಂದು ಬೆಳಿಗ್ಗೆ ಮುಸುಕುಧಾರಿ ಬಂದೂಕುಧಾರಿಗಳು, ಪ್ರಾರ್ಥನೆ ಸಲ್ಲಿಸುತ್ತಿದ್ದ ಗುಂಪಿನ ಮೇಲೆ ಮನಸೋಇಚ್ಛೆ ಗುಂಡಿನ ದಾಳಿ ನಡೆಸಿದ ಪರಿಣಾಮ 40ಕ್ಕೂ ಅಧಿಕ ಮಂದಿ ಮೃತಪಟ್ಟು, 60ಕ್ಕೂ ಹೆಚ್ಚುಮಂದಿ ಗಾಯಗೊಂಡಿರುವ ಘಟನೆ ನಡೆದಿದೆ.

  • ಕ್ರೈಸ್ಟ್ ಚರ್ಚ್‌ ಪಟ್ಟಣದ ಮಸೀದಿ ಮೇಲೆ ಗುಂಡಿನ ದಾಳಿ.
  • ಮನಸೋಇಚ್ಛೆ ದಾಳಿಯಿಂದ 40ಕ್ಕೂ ಅಧಿಕ ಮಂದಿ ಸಾವು.
  • 60ಕ್ಕೂ ಹೆಚ್ಚು ಮಂದಿಗೆ ಗಾಯ.
  • ಗಾಯಾಳುಗಳ ಆಸ್ಪತ್ರೆಗೆ ದಾಖಲು.
  • ನ್ಯೂಜಿಲೆಂಡ್‌ನ ಇತಿಹಾಸದಲ್ಲಿ ಅತಿದೊಡ್ಡ ದಾಳಿ.
  • ಬಾಂಗ್ಲಾ ದೇಶದ ಕ್ರಿಕೆಟಿಗರು ಕೂದಲೆಳೆಯ ಅಂತರದಲ್ಲಿ ಪಾರು.
  • ಘಟನೆಯನ್ನು ತೀವ್ರವಾಗಿ ಖಂಡಿಸಿದ ಪ್ರಧಾನಿ ಜೆಸ್ಸಿಂದ ಆಂಡ್ರೆನ್.
  • ನಾಲ್ವರು ಶಂಕಿತರ ಸೆರೆ.
  • ಕ್ರೈಸ್ಟ್ ಚರ್ಚ್‌ನಲ್ಲಿ ಕಟ್ಟೆಚ್ಚರ.

ಟೆಸ್ಟ್ ಪಂದ್ಯ ಆಡಲು ಕ್ರೈಸ್ಟ್ ಚರ್ಚ್‌ನಲ್ಲಿದ್ದ ಬಾಂಗ್ಲಾ ದೇಶದ ಕ್ರಿಕೆಟಿಗರನ್ನು ಗುರಿಯಾಗಿಸಿಕೊಂಡು ಈ ದಾಳಿ ನಡೆದಿದೆ. ಕ್ರಿಕೆಟಿಗರು ಕೂದಲೆಳೆಯ ಅಂತರದಿಂದ ದಾಳಿಯಿಂದ ಪಾರಾಗಿ ನೆಮ್ಮದಿಯ ನಿಟ್ಟುಸಿರುಬಿಟ್ಟಿದ್ದಾರೆ. ಆದರೆ ಘಟನೆಯಿಂದ ತೀವ್ರ ಆಘಾತಕ್ಕೆ ಒಳಗಾಗಿದ್ದಾರೆ.

ಕರಾಳ ದಿನ
ನ್ಯೂಜಿಲೆಂಡ್‌ನ ಇತಿಹಾಸದಲ್ಲಿ ಇದೊಂದು ಕರಾಳ ದಿನ. ಈ ರೀತಿಯ ಹಿಂಸಾಚಾರವನ್ನು ಊಹೆಯೂ ಮಾಡಿರಲಿಲ್ಲ. ಇದು ಅತ್ಯಂತ ಖಂಡನಾರ್ಹ. ಉಗ್ರರ ವ್ಯವಸ್ಥಿತ ಕೃತ್ಯ.

– ಜೆಸ್ಸಿಂದ ಆಂಡ್ರೆನ್, ನ್ಯೂಜಿಲೆಂಡ್‌ನ ಪ್ರಧಾನ ಮಂತ್ರಿ.

ಗುಂಡಿನ ದಾಳಿ ನಡೆಸಿ ನರಮೇಧ ನಡೆದ ಸುದ್ದಿ ತಿಳಿಯುತ್ತಿದ್ದಂತೆ, ಸ್ಥಳಕ್ಕೆ ಆಗಮಿಸಿದ ಪೊಲೀಸರು, ಪ್ರತಿಯಾಗಿ ಮುಸುಕುದಾರಿಗಳ ಮೇಲೆ ದಾಳಿ ನಡೆಸಿ, ಮಹಿಳೆ ಸೇರಿದಂತೆ, ನಾಲ್ವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬಾಂಗ್ಲಾ ಕ್ರಿಕೆಟಿಗರು ಪಾರು
ಮಸೀದಿಯಲ್ಲಿ ಪ್ರಾರ್ಥನೆ ಸಲ್ಲಿಸುತ್ತಿದ್ದ ಬಾಂಗ್ಲಾದ ಎಲ್ಲಾ ಕ್ರಿಕೆಟಿಗರಿಗೆ ಅದೃಷ್ಟವಶಾತ್ ಯಾವುದೇ ತೊಂದರೆಯಾಗಿಲ್ಲ. ಎಲ್ಲರೂ ಸುರಕ್ಷಿತರಾಗಿದ್ದಾರೆ. ಆದರೆ ಘಟನೆಯಿಂದ ಎಲ್ಲರೂ ಆಘಾತಕ್ಕೊಳಗಾಗಿದ್ದಾರೆ. ಗುಂಡಿನ ದಾಳಿ ಹಿನ್ನೆಲೆಯಲ್ಲಿ 2ನೇ ಟೆಸ್ಟ್ ಪಂದ್ಯವನ್ನು ರದ್ದುಗೊಳಿಸಲು ಬಾಂಗ್ಲಾ ಕ್ರಿಕೆಟ್ ಮಂಡಳಿ ನಿರ್ಧರಿಸಿದೆ.

– ತಮೀಮ್ ಇಕ್ಬಾಲ್, ಬಾಂಗ್ಲಾ ಕ್ರಿಕೆಟಿಗ.

ನ್ಯೂಜಿಲೆಂಡ್‌ನ ದಕ್ಷಿಣ ಐಲ್ಯಾಂಡ್‌ನ ಎರಡು ಮಸೀದಿಗಳ ಮೇಲೆ ನಡೆದ ದಾಳಿಯಲ್ಲಿ ನ್ಯೂಜಿಲೆಂಡ್‌ನ ಇತಿಹಾಸದಲ್ಲೇ ಅತಿಹೆಚ್ಚು ಮಂದಿ ಸಾವಿಗೀಡಾಗಿರುವ ಘಟನೆ ಇದಾಗಿದೆ. ಘಟನೆಯ ಬಗ್ಗೆ ನ್ಯೂಜಿಲೆಂಡ್‌ನ ಪ್ರಧಾನಿ ಜೆಸ್ಸಿಂದ ಆಂಡ್ರೆನ್ ತೀವ್ರ ಆಘಾತ ವ್ಯಕ್ತಪಡಿಸಿದ್ದು, ನ್ಯೂಜಿಲೆಂಡ್‌ನ ಇತಿಹಾಸದಲ್ಲಿ ಇದೊಂದು ಕರಾಳ ದಿನ, ಇದು ಉಗ್ರರ ವ್ಯವಸ್ಥಿತ ಸಂಚು ಎಂದು ಹೇಳಿದ್ದಾರೆ.

ಕಟ್ಟೆಚ್ಚರ
ಕ್ರೈಸ್ಟ್ ಚರ್ಚ್‌ನ ಮಸೀದಿಯ ಮೇಲೆ ಮುಸುಕುಧಾರಿ ಬಂದೂಕುಧಾರಿಗಳು ಮನಸೋಇಚ್ಛೆ ಗುಂಡಿನ ದಾಳಿ ನಡೆಸಿ ಹಲವು ಮಂದಿಯ ಸಾವು – ನೋವಿಗೆ ಕಾರಣರಾಗಿರುವ ಹಿನ್ನೆಲೆಯಲ್ಲಿ ಕ್ರೈಸ್ಟ್ ಚರ್ಚ್‌ನಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಪರಿಸ್ಥಿತಿ ಸುಧಾರಿಸುವವರೆಗೆ ನಾಗರಿಕರು ಮಸೀದಿಗೆ ಭೇಟಿನೀಡಬೇಡಿ.

– ಮೈಕ್ ಬುಷ್, ನಗರ ಪೊಲೀಸ್ ಆಯುಕ್ತ.

ಬಲಪಂಥೀಯ ಮೂಲಭೂತವಾದಿಗಳು ನಡೆಸಿರುವ ಈ ಕೃತ್ಯಕ್ಕೆ ಅಮಾಯಕರು ಬಲಿಯಾಗಿದ್ದಾರೆ. ಘಟನೆಯ ಸಂಬಂಧ ತನಿಖೆಗೆ ಆದೇಶಿಸಿರುವುದಾಗಿ ತಿಳಿಸಿದ್ದಾರೆ. ಮಸೀದಿಯಲ್ಲಿ 300ಕ್ಕೂ ಹೆಚ್ಚು ಮಂದಿ ಪ್ರಾರ್ಥನೆ ಸಲ್ಲಿಸುತ್ತಿದ್ದರು ಎನ್ನುವುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದ್ದು, ಗುಂಡಿನ ದಾಳಿಯಿಂದ 30ಕ್ಕೂ ಹೆಚ್ಚು ಮಂದಿ ಮೃತಪಟ್ಟು, 60ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.

ಉಗ್ರರ ಕೃತ್ಯ
ನ್ಯೂಜಿಲೆಂಡ್‌ನ ಮಸೀದಿ ಮೇಲೆ ನಡೆದಿರುವ ಗುಂಡಿನ ದಾಳಿಯ ಹಿಂದೆ ಉಗ್ರರ ಕೈವಾಡವಿದೆ ಎಂದು ಆಸ್ಟ್ರೇಲಿಯಾದ ಪ್ರಧಾನಿ ಸ್ಕಾಟ್ ಮಾರಿಸನ್ ಹೇಳಿದ್ದಾರೆ. ಬಲಪಂಥೀಯ ಉಗ್ರ ಸಂಘಟನೆಗಳು ಈ ದಾಳಿ ನಡೆಸಿವೆ ಎಂದು ದೂರಿದ್ದಾರೆ.

ಮಿಲಿಟರಿ ಮಾದರಿಯ ಉಡುಗೆ ತೊಟ್ಟಿದ್ದ ಬಂದೂಕುಧಾರಿಗಳು ಮಸೀದಿ ಮೇಲೆ ದಾಳಿ ನಡೆಸಿದ್ದಾರೆ, ಇದರಿಂದಾಗಿ ಸಾವು – ನೋವಿನ ಪ್ರಮಾಣ ಹೆಚ್ಚಾಗಿದೆ ಎಂದು ಕ್ರೈಸ್ಟ್ ಚರ್ಚ್‌ನ ಪೊಲೀಸ್ ಆಯುಕ್ತ ಮೈಕ್ ಬುಷ್ ತಿಳಿಸಿದ್ದಾರೆ.

ಗುಂಡಿನ ದಾಳಿ ಹಿನ್ನೆಲೆಯಲ್ಲಿ ಕ್ರೈಸ್ಟ್ ಚರ್ಚ್‌‌ನ ಶಾಲಾ – ಕಾಲೇಜುಗಳಿಗೆ ರಜೆ ಘೋಷಿಸಲಾಗಿದ್ದು, ಕೇಂದ್ರೀಯ ಕ್ರೈಸ್ಟ್ ಚರ್ಚ್‌‌ನ ಬೀದಿಗಳಲ್ಲಿ ಅನುಮಾನಾಸ್ಪದವಾಗಿ ಓಡಾಡುವವರ ಎಲ್ಲರ ಮೇಲೆ ಹದ್ದಿನ ಕಣ್ಣಿಡಲಾಗಿದೆ.

ಸೆಂಟ್ರಲ್ ಸಿಟಿ ಕಟ್ಟಡ, ಸರ್ಕಾರಿ ಕಚೇರಿ, ಕೇಂದ್ರೀಯ ಗ್ರಂಥಾಲಯವನ್ನೂ ಮುಚ್ಚಲಾಗಿದೆ ಎಂದು ತಿಳಿಸಿದ್ದಾರೆ. ಕ್ರೈಸ್ಟ್ ಚರ್ಚ್‌ನ ಮಸೀದಿಯಲ್ಲಿ ಅದೃಷ್ಟವಶಾತ್ ಪಾರಾಗಿದ್ದು, ‘ಅಲ್ಲಾ’ ನಮ್ಮನ್ನು ಪಾರು ಮಾಡಿದ್ದಾರೆ. ಇಂತಹ ಘಟನೆ ಮುಂದೆಂದೂ ಎದುರುನೋಡುವುದಿಲ್ಲ. ನಾವೆಲ್ಲಾ ಸುರಕ್ಷಿತವಾಗಿದ್ದೇವೆ, ನಮಗಾಗಿ ಪ್ರಾರ್ಥಿಸಿ ಎಂದು ಬಾಂಗ್ಲಾ ಕ್ರಿಕೆಟಿಗ ಮುಷ್ಫಿಕರ್ ರಹೀಂ ಹೇಳಿದ್ದಾರೆ.

ಬಾಂಗ್ಲಾ ದೇಶದ ಕ್ರಿಕೆಟಿಗರಿಗೆ ಯಾವುದೇ ರೀತಿ ತೊಂದರೆಯಾಗಿಲ್ಲ, ಹೀಗಾಗಿ ಒತ್ತು ನೀಡಿದ್ದೇವೆ, ನಾಳೆಯಿಂದ ಆರಂಭವಾಗಬೇಕಾಗಿದ್ದ ನ್ಯೂಜಿಲೆಂಡ್ – ಬಾಂಗ್ಲಾ ಕ್ರಿಕೆಟನ್ನು ರದ್ದುಪಡಿಸಿರುವುದಾಗಿ ಕ್ರಿಕೆಟ್ ಮಂಡಳಿ ಖಚಿತಪಡಿಸಿದೆ.

Leave a Comment