ಮಳೆ ಹಾವಳಿ, ಸಾಕ್ಷಾತ್ ಸಮೀಕ್ಷೆ ನಡೆಸಿದ ಕೇಂದ್ರ ತಂಡ

(ನಮ್ಮ ಪ್ರತಿನಿಧಿಯಿಂದ)

ಬೆಂಗಳೂರು, ಸೆ. ೧೨- ರಾಜ್ಯದ ಕೊಡಗು ಮತ್ತು ಕರಾವಳಿ ಜಿಲ್ಲೆಗಳಲ್ಲಿ ಉಂಟಾಗಿರುವ ಅತಿವೃಷ್ಠಿಯ ಹಾನಿಯನ್ನು ಖುದ್ದಾಗಿ ವೀಕ್ಷಿಸಿ ವರದಿ ನೀಡಲು ಕೇಂದ್ರ ಸರ್ಕಾರದ ಅಧಿಕಾರಿಗಳ ಎರಡು ತಂಡ ಇಂದು ರಾಜ್ಯದಲ್ಲಿ ಪ್ರವಾಸ ಕೈಗೊಂಡಿದೆ.

ಇಂದು ಬೆಳಿಗ್ಗೆ ಕೇಂದ್ರದ 2 ತಂಡಗಳು ಬೆಂಗಳೂರಿಗೆ ಆಗಮಿಸಿದ್ದು, ಒಂದು ತಂಡ ಕೊಡಗಿಗೂ, ಮತ್ತೊಂದು ತಂಡ ದಕ್ಷಿಣ ಕನ್ನಡ, ಉಡುಪಿ, ಹಾಸನ ಜಿಲ್ಲೆಗಳಿಗೆ ಮಳೆ ಹಾನಿ ವೀಕ್ಷಿಸಲು ತೆರಳಿತು.

ಕೇಂದ್ರ ಸರ್ಕಾರದ ಗೃಹ ಇಲಾಖೆಯ ಜಂಟಿ ಕಾರ್ಯದರ್ಶಿ ಅನಿಲ್ ಮಲ್ಲಿಕ್ ನೇತೃತ್ವದ ಮೂವರು ಅಧಿಕಾರಿಗಳಿರುವ ತಂಡ ಕೊಡಗಿಗೆ ಭೇಟಿ ನೀಡಿದ್ದರೆ, ಕೇಂದ್ರದ ಹಣಕಾಸು ಇಲಾಖೆಯ ಉಪಕಾರ್ಯದರ್ಶಿ ಆರ್. ಭರತೇಂದ್ರಕುಮಾರ್‌ಸಿಂಗ್ ನೇತೃತ್ವದ ಮೂವರು ಅಧಿಕಾರಿಗಳಿರುವ ಇನ್ನೊಂದು ತಂಡ ಉ‌ಡುಪಿ, ಮಂಗಳೂರು, ಹಾಸನ ಜಿಲ್ಲೆಗಳಿಗೆ ಭೇಟಿ ನೀಡಿ ಅತಿವೃಷ್ಠಿಯ ಹಾನಿಗಳನ್ನು ವೀಕ್ಷಿಸಲಿದೆ.

ದೆಹಲಿಯಿಂದ ಇಂದು ಆಗಮಿಸಿದ ಅಧಿಕಾರಿಗಳ ತಂಡವನ್ನು ವಿಮಾನ ನಿಲ್ದಾಣದಲ್ಲಿ ಬರಮಾಡಿಕೊಂಡ ನಂತರ ಅವರ ಜತೆ ರಾಜ್ಯದ ಅಧಿಕಾರಿಗಳು ಸಹ ಅತಿವೃಷ್ಠಿ ಪ್ರದೇಶಗಳಿಗೆ ತೆರಳಿದ್ದಾರೆ.

ಕೊಡಗಿಗೆ ಭೇಟಿ ನೀಡುವ ಗೃಹ ಇಲಾಖೆಯ ಜಂಟಿ ಕಾರ್ಯದರ್ಶಿ ಅನಿಲ್ ಮಲ್ಲಿಕ್ ಅವರ ನೇತೃತ್ವದ ತಂಡದಲ್ಲಿ ಕೇಂದ್ರದ ಜಲ ಆಯೋಗದ ಸೂಪರಿಟೆಂಡೆಂಟ್ ಇಂಜಿನಿಯರ್ ಜಿತೇಂದ್ರ ಪಲ್ವಾರ್ ಮತ್ತು ಕೇಂದ್ರದ ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಡಾ. ಪಲ್ಲುಸ್ವಾಮಿ ಇದ್ದಾರೆ. ಈ ತಂಡ ಇಂದು ಮತ್ತು ನಾಳೆ ಕೊಡಗಿನಲ್ಲಿ ಪ್ರವಾಸ ನಡೆಸಿ ಅತಿವೃಷ್ಠಿ ಮತ್ತು ಭೂಕುಸಿತದಿಂದ ಆಗಿರುವ ಹಾನಿಯನ್ನು ವೀಕ್ಷಿಸಲಿದೆ.

ಮಂಗಳೂರಿಗೆ ಭೇಟಿ ನೀಡಿರುವ ಕೇಂದ್ರದ ಹಣಕಾಸು ಇಲಾಖೆಯ ಉಪಕಾರ್ಯದರ್ಶಿ ಭರತೇಂದ್ರಕುಮಾರಸಿಂಗ್ ನೇತೃತ್ವದಲ್ಲಿ ಕೇಂದ್ರದ ಗ್ರಾಮೀಣಾಭಿವೃದ್ಧಿ ಇಲಾಖೆಯ ಉಪಕಾರ್ಯದರ್ಶಿ ಮಾಣಿಕ್‌ಚಂದ್ ಪಂ‌ಡಿತ್, ಭೂಸಾರಿಗೆ ಹೆದ್ದಾರಿ ಸಚಿವಾಲಯದ ಪ್ರಾದೇಶಿಕ ಅಧಿಕಾರಿ ಸದಾನಂದಬಾಬು ಇವರುಗಳಿದ್ದು, ಈ ತಂಡ ಇಂದು ಮಂಗಳೂರು ಹಾಗೂ ನಾಳೆ ಉಡುಪಿ, ಹಾಸನ ಜಿಲ್ಲೆಗಳಿಗೆ ಭೇಟಿ ನೀಡಲಿದೆ.

ಶುಕ್ರವಾರ ಸಭೆ

ಈ ಎರಡು ತಂಡಗಳು ಇದೇ ಶುಕ್ರವಾರ 14 ರಂದು ಬೆಂಗಳೂರಿಗೆ ವಾಪಸ್ಸಾಗಲಿದ್ದು, ಅಂದು ರಾಜ್ಯದ ಹಿರಿಯ ಅಧಿಕಾರಿಗಳ ಜತೆ ಸಭೆ ನಡೆಸಿ ಅತಿವೃಷ್ಠಿಯ ಹಾನಿಯ ಬಗ್ಗೆ ಮಾಹಿತಿಗಳನ್ನು ಪಡೆದುಕೊಳ್ಳುವರು. ಇದಾದ ನಂತರ ಈ ಅಧಿಕಾರಿಗಳ ತಂಡ ದೆಹಲಿಗೆ ವಾಪಸ್ಸಾಗಿ ಅತಿವೃಷ್ಠಿಯಿಂದಾಗಿರುವ ಹಾನಿಯ ಬಗ್ಗೆ ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸಲಿದೆ.

ಮಂಗಳೂರು ವರದಿ

ಅತಿವೃಷ್ಠಿಯ ಹಾನಿ ಕುರಿತು ಅಧ್ಯಯನ ನಡೆಸಿ ಕೇಂದ್ರಕ್ಕೆ ವರದಿ ಸಲ್ಲಿಸಲು ಕೇಂದ್ರದ ಅಧಿಕಾರಿಗಳ 2 ತಂಡ ಇಂದು ಬೆಂಗಳೂರಿನಿಂದ ಬೆಂಗಳೂರಿಗೆ ವಿಮಾನದಲ್ಲಿ ಬಂದಿಳಿದಿದ್ದು, ಬಚ್ಪೆ ವಿಮಾನ ನಿಲ್ದಾಣದಲ್ಲಿ ಈ ಅಧಿಕಾರಿಗಳನ್ನು ಸ್ಥಳೀಯ ಜಿಲ್ಲಾಡಳಿತ ಬರಮಾಡಿಕೊಂಡಿತು.  ಒಂದು ತಂಡ ಕೊಡಗಿಗೂ ಮತ್ತೊಂದು ತಂಡ ಮಂಗಳೂರು, ದಕ್ಷಿಣ ಕನ್ನಡ ಮತ್ತು ಹಾಸನ ಜಿಲ್ಲೆಗಳಿಗೆ ಭೇಟಿ ನೀಡಲಿದೆ.

Leave a Comment