ಮಳೆ ನೀರು ಶೇಖರಣೆ ಕ್ರಮಕೈಗೊಳ್ಳಲು ಮನವಿ

ಬಳ್ಳಾರಿ, ಮೇ 19: ಬಳ್ಳಾರಿ ಜಿಲ್ಲೆಯಲ್ಲಿ ಕೆರೆ ಹೂಳೆತ್ತುವ ಮಳೆಯ ನೀರಿನ ಶೇಖರಣೆಗೆ ಹೊಸ ಕೆರೆಗಳ ನಿರ್ಮಿಸುವ ಹಾಗೂ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ಕಾಮಗಾರಿಕೈಗೊಳ್ಳುವಂತೆ ಬಳ್ಳಾರಿ ಜಿಲ್ಲಾ ಕೆರೆ ಅಭಿವೃದ್ಧಿ ಕ್ರಿಯಾ ಸಮಿತಿ ಮನವಿ ಮಾಡಿಕೊಂಡಿದೆ. ಈ ಕುರಿತಂತೆ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದೆ.

ಬಳ್ಳಾರಿ ಜಿಲ್ಲೆಯ ಅನೇಕ ತಾಲೂಕುಗಳಲ್ಲಿ ಬಹುಸಂಖ್ಯಾತರ ರೈತರು ಒಣಬೇಸಾಯ ಮಾಡಿಕೊಂಡು ಮಳೆ ಮೇಲೆ ಅವಲಂಬಿತರಾಗಿ ಕೃಷಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಮಳೆ ಅವಲಂಬಿತ ಪ್ರದೇಶಗಳಲ್ಲಿ ಬರುವ ಅನೇಕ ತಾಲೂಕುಗಳಲ್ಲಿ ರೈತರು ಕೊಳವೆ ಬಾವಿಗಳ ಮೇಲೆ ಅವಲಂಬಿತರಾಗಿ ಅಲ್ಪಸ್ವಲ್ಪ ನೀರಾವರಿ ಸೌಲಭ್ಯ ಕಲ್ಪಿಸಿಕೊಂಡು ಕೃಷಿ ಮಾಡಿಕೊಂಡು ಬದುಕು ಸಾಗಿಸುತ್ತಿದ್ದಾರೆ. ಇವರಲ್ಲಿ ಬಹುಪಾಲು ರೈತರು ಸಣ್ಣ ಹಿಡುವಳಿದಾರರಾಗಿರುತ್ತಾರೆ. ಇಂದು ನಿರಂತರ ಮಳೆಗಾಲವಿಲ್ಲದೇ ಕೊಳವೆ ಕೂಡ ನೀರಿಲ್ಲದೆ ಒಣಗಿ ಬತ್ತಿ ಹೋಗುತ್ತಿವೆ.

ಇತ್ತೀಚೆಗೆ ಕಳೆದ 4-5 ವರ್ಷಗಳಿಂದ ಸತತವಾಗಿ ಬರಗಾಲಕ್ಕೆ ಬಲಿಯಾಗಿರುವ ಈ ರೈತರು ಹಾಗೂ ಕೃಷಿ ಕಾರ್ಮಿಕರು ಬದುಕುಳಿಯಲು, ತಮ್ಮ ಕುಟುಂಬಗಳನ್ನು ನಿರ್ವಹಿಸಲು ಹರಸಾಹಸ ಮಾಡಬೇಕಾಗಿದೆ. ಇವರ ಬದುಕು ಅತ್ಯಂತ ಅತಂತ್ರದ ಸ್ಥಿತಿಯಲ್ಲಿದೆ. ಎಲ್ಲಾ ಅಗತ್ಯ ವಸ್ತುಗಳು ದುಬಾರಿಯಾಗಿರುವ ಇಂದಿನ ದಿನಗಳಲ್ಲಿ ಹಾಗೂ ಇವರಿಗೆ ಯಾವುದೇ ಪರ್ಯಾಯ ಉದ್ಯೋಗಗಳು ಲಭ್ಯವಿಲ್ಲದೆ ಇವರ ಬದುಕು ಶೋಚನೀಯ ಸ್ಥಿತಿಯಲ್ಲಿದೆ.

ಈ ಪರಿಸ್ಥಿತಿಯಲ್ಲಿ ಈ ರೈತರ ಮತ್ತು ಇವರ ಕುಟುಂಬಗಳ ಜೀವನ ನಿರ್ವಹಣೆಗೆ, ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ಉದ್ಯೋಗ ಕಲ್ಪಿಸಿದರೆ ಇವರಿಗೆ ತಮ್ಮ ದೈನಂದಿನ ಖರ್ಚುಗಳನ್ನು ನಿರ್ವಹಿಸಲು ಅನುಕೂಲವಾಗುತ್ತದೆ ಹಾಗೂ ಈ ಒಣ ಪ್ರದೇಶಗಳಲ್ಲಿ ನೀರಿನ ಬವಣೆಯನ್ನು ನೀಗಿಸಲು, ಪ್ರಸ್ತುತದಲ್ಲಿರುವ ಕೆರೆಗಳಲ್ಲಿ ಹೂಳೆತ್ತಿ ಜೀರ್ಣೋದ್ಧಾರ ಮಾಡುವುದು ಹಾಗೂ ಹೊಸ ಕೆರೆಗಳನ್ನು ನಿರ್ಮಿಸುವ ಕಾಮಗಾರಿಗಳನ್ನು ತೆಗೆದುಕೊಂಡರೆ, ಈ ರೈತರಿಗೆ ಉದ್ಯೋಗಗಳು ಲಭ್ಯವಾಗುತ್ತವೆ ಹಾಗೂ ಮಳೆಗಾಲದಲ್ಲಿ ಈ ಕೆರೆಗಳಲ್ಲಿ ನೀರು ಶೇಖರಣೆಯಾಗಿ, ಅಂತರ್ಜಲ ಹೆಚ್ಚಿ ನೀರಿನ ಕೊರತೆ ನೀಗಿಸಿದಂತಾಗುತ್ತದೆ.

ಆದ್ದರಿಂದ ಈ ನೀರಾವರಿ ರಹಿತ ಒಣ ಬೇಸಾಯ ಮಾಡಿಕೊಂಡು ಬದುಕುತ್ತಿರುವ ಈ ಪ್ರದೇಶಗಳ ರೈತರಿಗೆ ಉದ್ಯೋಗ ಕಲ್ಪಿಸಲು ಮತ್ತು ಮಳೆಗಾಲದಲ್ಲಿ ನೀರನ್ನು ಶೇಖರಿಸಿ, ನೀರಿನ ಬವಣೆಯನ್ನು ನೀಗಿಸಲು ಕ್ರಮಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.

ಮನವಿ ಪತ್ರ ಸಲ್ಲಿಸಿದ ಸಂದರ್ಭದಲ್ಲಿ ಬಳ್ಳಾರಿ ಜಿಲ್ಲಾ ಕೆರೆ ಅಭಿವೃದ್ಧಿ ಕ್ರಿಯಾ ಸಮಿತಿ ಸಂಚಾಲಕ ಎ.ದೇವದಾಸ್, ಮುಖಂಡರಾದ ಗಡಿಗಿ ಈರಣ್ಣ, ಹನುಮಂತಪ್ಪ, ತಿಮ್ಮಾರೆಡ್ಡಿ, ಬಸಣ್ಣ, ಗಾದಿಲಿಂಗ, ಪೊಂಪಾಪತಿ, ವೀರೇಶ, ಹನುಮಂತಪ್ಪ, ದುರುಗಪ್ಪ, ಮತ್ತಿತರರು ಉಪಸ್ಥಿತರಿದ್ದರು.

Leave a Comment