ಮಳೆ ಕೊರತೆ: ಬಿತ್ತನೆ ಪ್ರಮಾಣ ಕುಸಿತ

(ನಮ್ಮ ಪ್ರತಿನಿಧಿಯಿಂದ)

ಬೆಂಗಳೂರು, ಆ. ೮- ರಾಜ್ಯದ 13 ಜಿಲ್ಲೆಗಳಲ್ಲಿ ಮಳೆ ಕೊರತೆಯಾಗಿರುವುದರಿಂದ ಈ ವರ್ಷ ಮುಂಗಾರು ಹಂಗಾಮಿನ ಬಿತ್ತನೆ ಕಡಿಮೆಯಾಗಿದೆ. ನಿಗದಿಪಡಿಸಿದ ಗುರಿಗೆ ಹೋಲಿಸಿದರೆ ಶೇ. 66 ರಷ್ಟು ಮಾತ್ರ ಬಿತ್ತನೆಯಾಗಿದೆ ಎಂದು ಕೃಷಿ ಸಚಿವ ಶಿವಶಂಕರರೆಡ್ಡಿ ಹೇಳಿದರು.

ಈ ಮುಂಗಾರು ಹಂಗಾಮಿನಲ್ಲಿ 74.69 ಲಕ್ಷ ಹೆಕ್ಟೇರ್ ಬಿತ್ತನೆ ಗುರಿ ಹೊಂದಲಾಗಿತ್ತು. ಆದರೆ ಆಗಸ್ಟ್ ಮೊದಲ ವಾರದವರೆಗೆ 49.47 ಲಕ್ಷ ಹೆಕ್ಟೇರ್ ಬಿತ್ತನೆಯಾಗಿದೆ ಎಂದರು.

ಮುಂಗಾರು ಹಂಗಾಮಿನ ನಂತರ ಸೆಪ್ಟೆಂಬರ್-ಆಗಸ್ಟ್ ತಿಂಗಳಲ್ಲಿ ಸುಮಾರು 8 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಲಿದ್ದು, ಆಹಾರ ಧಾನ್ಯಗಳ ಗುರಿಯಾದ 110 ಲಕ್ಷ ಮೆಟ್ರಿಕ್ ಟನ್ ಆಹಾರ ಉತ್ಪಾದನೆ ಗುರಿಯನ್ನು ತಲುಪುವ ವಿಶ್ವಾಸವನ್ನು ಅವರು ಸುದ್ದಿಗೋಷ್ಠಿಯಲ್ಲಿ ವ್ಯಕ್ತಪಡಿಸಿದರು.

ಮಳೆ ಕಡಿಮೆ ಇರುವ 13 ಜಿಲ್ಲೆಗಳಲ್ಲಿ ಪರ್ಯಾಯ ಬೆಳೆ ಬೆಳೆಯಲು ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಅವರು ಹೇಳಿದರು.

ರಾಜ್ಯದ ಹಲವು ಜಿಲ್ಲೆಗಳಲ್ಲಿ ಉತ್ತಮ ಮಳೆಯಾಗಿರುವುದರಿಂದ ರೈತರಿಗೆ ಬಿತ್ತನೆ ಬೀಜ ಹಾಗೂ ರಸಗೊಬ್ಬರದ ಕೊರತೆಯಾಗದಂತೆ ಎಚ್ಚರ ವಹಿಸಲಾಗಿದ್ದು, ರೈತರ ಬೇಡಿಕೆಗೆ ತಕ್ಕಂತೆ ಬಿತ್ತನೆ ಬೀಜ ಹಾಗೂ ರಸಗೊಬ್ಬರ ದಾಸ್ತಾನು ಇದೆ ಎಂದು ಅವರು ಹೇಳಿದರು.

ಸರ್ವೆ

ರಾಜ್ಯದ ವಿವಿಧ ಪ್ರದೇಶಗಳಲ್ಲಿ ರೈತರು ಬೆಳೆದಿರುವ ಬೆಳೆಗಳ ಸರ್ವೆಯನ್ನು ದ್ರೋಣ್ ತಂತ್ರಜ್ಞಾನ ಬಳಸಿ ನಡೆಸಲು ಉದ್ದೇಶಿಸಲಾಗಿದೆ. ಇದರಿಂದ ಯಾವ ಪ್ರದೇಶದಲ್ಲಿ ಯಾವ ಬೆಳೆ ಬೆಳೆದಿದ್ದಾರೆ ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿ ಸಿಗಲಿದ್ದು, ವಿಮೆಗೂ ಇದು ಅನುಕೂಲವಾಗಲಿದೆ ಎಂದರು. ಈ ಸರ್ವೆ ಕಾರ್ಯಕ್ಕೆ ಅಂದಾಜು 15 ರಿಂದ 20 ಕೋಟಿ ರೂ. ಬೇಕಾಗುತ್ತದೆ ಎಂದು ಅವರು ಹೇಳಿದರು.

ಶೂನ್ಯ ಬಂಡವಾಳ: ಉತ್ತೇಜನ

ರಾಜ್ಯದಲ್ಲಿ ಶೂನ್ಯ ಬಂಡವಾಳ ಕೃಷಿಗೆ ಉತ್ತೇಜನ ನೀಡಲಾಗುತ್ತಿದ್ದು, ಸದ್ಯದಲ್ಲೇ ತಮ್ಮ ನೇತೃತ್ವದ ಅಧಿಕಾರಿಗಳ ತಂಡ ಆಂಧ್ರದ ಅನಂತಪುರಂಗೆ ಭೇಟಿ ನೀಡಿ ಅಲ್ಲಿನ ಶೂನ್ಯ ಬಂಡವಾಳ ಕೃಷಿ ಪದ್ದತಿಯನ್ನು ಅವಲೋಕಿಸಿ, ರಾಜ್ಯದಲ್ಲೂ ಶೂನ್ಯ ಬಂಡವಾಳ ಕೃಷಿಯನ್ನು ಜಾರಿಗೊಳಿಸುವ ಬಗ್ಗೆ ಯೋಜನೆಯನ್ನು ರೂಪಿಸಲಿದೆ ಎಂದು ಅವರು ತಿಳಿಸಿದರು.

ರಾಜ್ಯದಲ್ಲಿ ಸಿರಿಧಾನ್ಯ ಬೆಳೆ ಉತ್ಪಾದನೆಗೂ ಉತ್ತೇಜನ ನೀಡಲಾಗುತ್ತಿದೆ. ಸಿರಿಧಾನ್ಯಗಳ ಬೆಲೆ ಮಾರುಕಟ್ಟೆಯಲ್ಲಿ ಹೆಚ್ಚಿದೆ. ಆದರೆ ರೈತರಿಗೆ ಸಿರಿಧಾನ್ಯಗಳಿಗೆ ಹೆಚ್ಚಿನ ಬೆಲೆ ಸಿಗುತ್ತಿಲ್ಲ. ಮಧ್ಯವರ್ತಿಗಳೇ ಹೆಚ್ಚಿನ ಬೆಲೆ ಪಡೆದುಕೊಳ್ಳುತ್ತಿದ್ದಾರೆ. ಇದನ್ನು ಗಮನದಲ್ಲಿಟ್ಟುಕೊಂಡು ರೈತರು ಹಾಗೂ ಗ್ರಾಹಕರಿಗೆ ಉತ್ತಮ ಬೆಲೆ ಸಿಗುವಂತೆ ನೋಡಿಕೊಳ್ಳಲು ಹಾಪ್‌ಕಾಮ್ಸ್ ಮತ್ತು ಕೆಎಂಎಫ್ ಮೂಲಕ ಸಿರಿಧಾನ್ಯಗಳನ್ನು ಮಾರಾಟ ಮಾಡುವ ಬಗ್ಗೆಯೂ ಚಿಂತನೆ ನಡೆದಿದೆ ಎಂದರು.

ಸರ್ವೆ ಮರ ಹಾಗೂ ನೀಲಗಿರಿಗೆ ಪರ್ಯಾಯವಾಗಿ ಎಲಿಫೆಂಟ್ ಬ್ಯಾಬೋ ಬೆಳೆಯುವ ಯೋಜನೆಯನ್ನು ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಪ್ರಾಯೋಗಿಕವಾಗಿ ಜಾರಿ ಮಾಡಲು ನಿರ್ಧರಿಸಲಾಗಿದೆ. ಈ ಬೆಳೆಯಿಂದ ಮೂರು ವರ್ಷಕ್ಕೆ ಪ್ರತಿ ಎಕರೆ ಭೂಮಿಗೆ ರೈತರು ನಾಲ್ಕೂವರೆ ಲಕ್ಷ ರೂ. ಆದಾಯ ಗಳಿಸಬಹುದಾಗಿದೆ ಎಂದು ಅವರು ಹೇಳಿದರು.

ಖಾಲಿ ಹುದ್ದೆ ಭರ್ತಿ

ಕೃಷಿ ಇಲಾಖೆಯಲ್ಲಿ ಖಾಲಿ ಇರುವ 153 ಸಹಾಯಕ ಕೃಷಿ ಅಧಿಕಾರಿಗಳ ಹುದ್ದೆಯನ್ನು ಶೀಘ್ರದಲ್ಲೇ ಭರ್ತಿ ಮಾಡಲಾಗುವುದು ಎಂದ ಅವರು, ಈಗಾಗಲೇ 588 ಅಧಿಕಾರಿಗಳು ಮತ್ತು ಸಿಬ್ಬಂದಿಗಳ ನೇಮಕಾತಿ ಪ್ರಕ್ರಿಯೆ ಮುಗಿದಿದ್ದು, ಇನ್ನು 15 ದಿನದಲ್ಲಿ ಇವರುಗಳಿಗೆ ನೇಮಕಾತಿ ಆದೇಶವನ್ನು ನೀಡಲಾಗುವುದು ಎಂದರು.

ಕೃಷಿ ಇಲಾಖೆಯಲ್ಲಿ ಹಲವು ವರ್ಷಗಳಿಂದ ಬಡ್ತಿ ಬಾಕಿ ಇದ್ದು, ಇನ್ನು 15 ದಿವಸದಲ್ಲಿ ಈ ಬಡ್ತಿ ನೀಡುವ ಪ್ರಕ್ರಿಯೆಯನ್ನು ಕಾನೂನಿನ ಅನ್ವಯವೇ ಪೂರ್ಣಗೊಳಿಸುವುದಾಗಿ ಅವರು ಹೇಳಿದರು. ನೇಮಕಾತಿಗಳಲ್ಲಿ ಏಕರೂಪತೆ ತರಲು ಹೊಸ ಕಾಯ್ದೆಯನ್ನು ಜಾರಿ ಮಾಡುವುದಾಗಿ ಅವರು ಹೇಳಿದರು.

Leave a Comment