ಮಳೆ ಅಭಾವ: ಬರ ಘೋಷಣೆಗೆ ಮುಖ್ಯಮಂತ್ರಿಗಳಿಗೆ ಮನವಿ

ರಾಯಚೂರು.ಆ.03- ತೀವ್ರ ಮಳೆ ಅಭಾವದಿಂದ ಕೃಷಿ ಚಟುವಟಿಕೆ ಸ್ಥಗಿತಗೊಂಡು ರೈತರು ಗಂಭೀರ ಸಂಕಷ್ಟಕ್ಕೆ ಗುರಿಯಾದ ಹಿನ್ನೆಲೆ ರಾಯಚೂರು ತಾಲೂಕು ಬರ ಪೀಡಿತ ಪ್ರದೇಶವೆಂದು ಘೋಷಿಸುವಂತೆ ಗ್ರಾಮಾಂತರ ಶಾಸಕ ಬಸವನಗೌಡ ದದ್ದಲ ಅವರು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರಿಗೆ ಮನವಿ ಮಾಡಿದ್ದಾರೆ.
ಇಂದು ಬೆಂಗಳೂರಿನಲ್ಲಿ ಸಿಎಂ ಕುಮಾರಸ್ವಾಮಿ ಅವರನ್ನು ಖುದ್ದು ಭೇಟಿಯಾಗಿ ಮನವಿ ಸಲ್ಲಿಸಿದರು. ತಾಲೂಕಿನಲ್ಲಿ ಮೇ ತಿಂಗಳಿಂದ ಜುಲೈ ಅಂತ್ಯದವರೆಗೆ 226 ಮಿ.ಮೀ. ಮಳೆಯಾಗಬೇಕಿತ್ತು. ಆದರೆ, 115 ಮಿ.ಮೀ. ಮಾತ್ರ ಮಳೆಯಾಗಿದೆ. ಮುಂಗಾರು ಬಿತ್ತನೆ ಕ್ಷೇತ್ರದಲ್ಲಿ ಕೇವಲ ಶೇ.63 ರಷ್ಟು ಬಿತ್ತನೆಯಾಗಿದೆ. ತಾಲೂಕಿನ ಮುಖ್ಯ ಬೆಳೆಗಳಾದ ತೊಗರಿ, ಹತ್ತಿ ಬಿತ್ತನೆ ಜುಲೈ ಅಂತ್ಯದವೇಳೆಗೆ ಪೂರ್ಣಗೊಳ್ಳಲಿದೆ.
ಶೇ.63 ರ ಬಿತ್ತನೆ ಕ್ಷೇತ್ರದಲ್ಲಿ ಅಚ್ಚುಕಟ್ಟು ಪ್ರದೇಶದ ಹೊರತುಪಡಿಸಿ ಒಣ ಬೇಸಾಯ ಪ್ರದೇಶದಲ್ಲಿ ಬೀಜ ಮೊಳಕೆ ಹೊಡೆದಿಲ್ಲ. 2017ನೇ ಸಾಲಿನಲ್ಲಿ ಇದೇ ಅವಧಿಗೆ ಶೇ.95 ರಷ್ಟು ಬಿತ್ತನೆಯಾಗಿತ್ತು. ಕಳೆದ ಸಾಲಿಗೆ ಹೊಲಿಸಿದರೆ ಪ್ರಸಕ್ತ ಮುಂಗಾರಿನಲ್ಲಿ ಕಡಿಮೆ ಪ್ರಮಾಣದ ಮಳೆಯಾಗಿದೆ. ಮಳೆಯಿಲ್ಲದಿರುವುದರಿಂದ ಪರಿಸ್ಥಿತಿ ಗಂಭೀರವಾಗಿದೆ. ಈ ಹಿನ್ನೆಲೆ ತಕ್ಷಣವೇ ರಾಯಚೂರು ತಾಲೂಕು ಬರ ಪೀಡಿತ ಪ್ರದೇಶವೆಂದು ಘೋಷಿಸುವಂತೆ ಮನವಿ ಮಾಡಿದ್ದಾರೆ.
ಸರ್ಕಾರದ ಬರ ಪರಿಹಾರ ಕಾಮಗಾರಿ ಕೈಗೊಳ್ಳದಿದ್ದರೆ, ಜನ ಗುಳೆ ಹೋಗುವ ಪರಿಸ್ಥಿತಿ ನಿರ್ಮಾಣವಾಗಲಿದೆ. ಕಾರಣ ಸರ್ಕಾರ ಈ ಬಗ್ಗೆ ಗಮನ ಹರಿಸಿ ಬರ ಪೀಡಿತ ಪ್ರದೇಶವೆಂದು ಘೋಷಿಸುವಂತೆ ಮನವಿ ಮಾಡಲಾಗಿದೆ.

Leave a Comment