ಮಳೆ ಅನಾಹುತ ಕ್ರಮಕ್ಕೆ ಮೇಯರ್ ಸೂಚನೆ

ಬೆಂಗಳೂರು, ಆ ೧೬- ರಾಜ್ಯದಲ್ಲಿ ಸಂಭವಿಸಿದ ಭಾರಿ ಮಳೆ, ಪ್ರವಾಹದಿಂದ ತೀವ್ರ ಸಂಕಷ್ಟಕ್ಕೆ ಸಿಲುಕಿರುವ ಸಂತ್ರಸ್ತರಿಗಾಗಿ ಜಯನಗರ ವಿಶ್ವೇಶ್ವರಯ್ಯ ವಾಣಿಜ್ಯ ಸಂಕೀರ್ಣ ವರ್ತಕರ ಸಂಘ, ಬಾಂಧವ ಸ್ವಯಂ ಸೇವಾ ಸಂಸ್ಥೆ ಜಂಟಿಯಾಗಿ ೧೦ ಲಕ್ಷ ರೂ ಹೆಚ್ಚು ಮೌಲ್ಯದ ದಿನ ಬಳಕೆ ವಸ್ತುಗಳನ್ನು ಸಂಗ್ರಹಿಸಿದ ಲಾರಿಗೆ ಮೇಯರ್ ಗಂಗಾಂಬಿಕೆ ಮಲ್ಲಿಕಾರ್ಜುನ್ ಹಸಿರು ನಿಶಾನೆ ತೋರಿದರು

ಈ ಸಂದರ್ಭದಲ್ಲಿ ಮಾತನಾಡಿದ ಮೇಯರ್ ಗಂಗಾಂಬಿಕೆ ಮಲ್ಲಿಕಾರ್ಜುನ್, ತೀವ್ರ ಮಳೆ ಮತ್ತು ಪ್ರವಾಹದಿಂದ ರಾಜ್ಯದಲ್ಲಿ ಭಾರೀ ಪ್ರಮಾಣದಲ್ಲಿ ಹಾನಿಯಾಗಿದ್ದು, ತೊಂದರೆಯಲ್ಲಿರುವ ಜನರಿಗೆ ಮಾನವೀಯ ಸ್ಪಂದನೆ ದೊರೆಯುತ್ತಿರುವುದು ನಿಜಕ್ಕೂ ಶ್ಲಾಘನೀಯ. ಸಮಸ್ಯೆಗೆ ಸಿಲುಕಿರುವವರಿಗೆ ಬಿಬಿಎಂಪಿ ಸೂಕ್ತ ರೀತಿಯಲ್ಲಿ ಸ್ಪಂದಿಸಲಿದೆ ಎಂದು ಅವರು ಬೆಂಗಳೂರಿನಲ್ಲಿ ಮಳೆ ಸಂಬಂಧಿತ ಅನಾಹುತ ತಪ್ಪಿಸಲು ಎಲ್ಲಾ ರೀತಿಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ. ಮಳೆ ನೀರು ಸರಾಗವಾಗಿ ಹರಿಯಲು ಸೂಕ್ತ ವ್ಯವಸ್ಥೆ ಮಾಡಲಾಗಿದೆ. ಬಿಬಿಎಂಪಿ ಸಿಬ್ಬಂದಿ ರಜೆ ಪಡೆಯದೇ ಕೆಲಸ ಮಾಡುತ್ತಿದ್ದು, ಪರಿಸ್ಥಿತಿ ಎದುರಿಸಲು ಸಿದ್ಧವಾಗಿದ್ದೇವೆ ಎಂದರು.

ಬಿಬಿಎಂಪಿ ಸದಸ್ಯ ಎನ್. ನಾಗರಾಜು ಮಾತನಾಡಿ, ಇಲ್ಲಿ ಸಂಗ್ರಹವಾಗಿರುವ ವಸ್ತುಗಳನ್ನು ಬಾಗಲಕೋಟೆಗೆ ರವಾನಿಸುತ್ತಿದ್ದು, ಅಲ್ಲಿ ತೀವ್ರ ಬಾಧಿತವಾಗಿರುವ ಗ್ರಾಮಗಳಲ್ಲಿ ನಮ್ಮ ನಾಯಕರಾದ ರಾಮಲಿಂಗಾ ರೆಡ್ಡಿ ಮತ್ತು ಸೌಮ್ಯ ರೆಡ್ಡಿ ಅವರು ಖುದ್ದಾಗಿ ವಿತರಣೆ ಮಾಡಲಿದ್ದಾರೆ ಎಂದು ಹೇಳಿದರು. ಒಂದು ಸಾವಿರ ಸೀರೆ, ಒಂದು ಸಾವಿರ ರೇಮಂಡ್ಸ್ ಪ್ಯಾಂಟ್, ಶರ್ಟ್, ೧,೫೦೦ ಕಂಬಳಿ, ಮಕ್ಕಳಿಗೆ ಸ್ವಟರ್‌ಗಳು, ಬಟ್ಟೆ, ಮಹಿಳೆಯರು ಬಳಸುವ ಉಡುಪು, ವಸ್ತುಗಳು, ಎರಡು ಸಾವಿರ ಕಿಟ್ ಬ್ಯಾಗ್‌ಗಳನ್ನು ವಿತರಿಸುತ್ತಿದ್ದು, ಈ ಬ್ಯಾಗ್ ನಲ್ಲಿ ಒಂದು ಲೀಟರ್ ರೀಫೈಂಡ್ ಆಯಿಲ್, ಐದು ಕೆ.ಜಿ. ಅಕ್ಕಿ, ೨೫೦ ಗ್ರಾಂ ಸಂಬಾರ್ ಪದಾರ್ಥ, ಹುಣಸೆ ಹಣ್ಣು ಇರಲಿದೆ. ಇದರ ಜತೆಗೆ ಬಿಸ್ಲೆರಿ ನೀರಿನ ಬಾಟೆಲ್‌ಗಳನ್ನು ತೀವ್ರ ಹಾನಿಗೀಡಾಗಿರುವ ಬಾಗಲಕೋಟೆಗೆ ರವಾನಿಸಲಾಯಿತು.

Leave a Comment