ಮಳೆಹಾನಿ ಪರಿಶೀಲಿಸಿದ ಡಿಕೆಶಿ

ಹುಬ್ಬಳ್ಳಿ, ಆ 13-  ಇತ್ತೀಚಿಗೆ ಸುರಿದ ಭಾರೀ ಮಳೆಯಿಂದ ಹಾನಿಗೊಳಗಾದ ಹಳೇ ಹುಬ್ಬಳ್ಳಿ ಭಾಗದ ಗೌಸಿಯಾ ನಗರಕ್ಕೆ ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಅವರು ಸೋಮವಾರ ಭೇಟಿ ನೀಡಿ ಮಳೆಹಾನಿ ಕುರಿತು ಪರಿಶೀಲನೆ ನಡೆಸಿ, ಸಂತ್ರಸ್ತ ಕುಟುಂಬಗಳಿಗೆ ದಿನಸಿ ಸಾಮಗ್ರಿ ವಿತರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಮಳೆಯಿಂದ ಈ ಭಾಗದಲ್ಲಿ ಸಾಕಷ್ಟು ಹಾನಿಯಾಗಿದ್ದು, ಪಕ್ಷದ ಮುಖಂಡರು, ಕಾರ್ಯಕರ್ತರು ಸಂತ್ರಸ್ತರಿಗೆ ನೆರವಾಗುವಂತೆ ಈಗಾಗಲೇ ಸೂಚಿಸಲಾಗಿದೆ. ಅದರಂತೆ ಎಲ್ಲೆಡೆ ಪರಿಹಾರ ಸಾಮಗ್ರಿ ವಿತರಣೆ ಕಾರ್ಯ ನಡೆಯುತ್ತಿದೆ. ಹಳೇ ಹುಬ್ಬಳ್ಳಿ ಭಾಗದ ಸಂತ್ರಸ್ತರಿಗೆ ಈಗಾಗಲೇ ಬ್ಲಾಂಕೆಟ್, ಔಷಧ ಕಿಟ್ ನೀಡಿದ್ದು, ಇದೀಗ ದಿನಸಿ ಸಾಮಗ್ರಿ ವಿತರಿಸುತ್ತಿರುವ ಶಾಸಕರ ಕಾರ್ಯ ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಶಾಸಕ ಪ್ರಸಾದ ಅಬ್ಬಯ್ಯ ಮಾತನಾಡಿ, ಕ್ಷೇತ್ರದಲ್ಲಿ ಸಂಭವಿಸಿದ ನೆರೆ ಹಾನಿಯಿಂದ ಜನರು ಸಾಕಷ್ಟು ಸಂಕಷ್ಟಕ್ಕೀಡಾಗಿದ್ದಾರೆ. ಹಾನಿಯಾದ ಪ್ರದೇಶಗಳಿಗೆ ಕಳೆದ ಮೂರ್ನಾಲ್ಕು ದಿನಗಳಿಂದ ಭೇಟಿ ನೀಡಿ ಸಂತ್ರಸ್ತರಿಗೆ ಆತ್ಮಸ್ಥೈರ್ಯ ತುಂಬುವ ಜೊತೆಗೆ ವೈಯಕ್ತಿಕ ಪರಿಹಾರ ಧನ ನೀಡಿದ್ದು, ಸರ್ಕಾರದಿಂದ ಹೆಚ್ಚಿನ ಪರಿಹಾರ ಧನ ಮಂಜೂರಿಗೆ ಪ್ರಯತ್ನಿಸಲಾಗುತ್ತಿದೆ. ಶೀಘ್ರದಲ್ಲೇ ಎಲ್ಲರಿಗೂ ಪರಿಹಾರ ಧನದ ಚೆಕ್ ವಿತರಿಸಲಾಗುವುದು ಎಂದರು.
ಹು-ಧಾ ಗ್ರಾಮೀಣ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅನಿಲಕುಮಾರ ಪಾಟೀಲ, ಕೆಪಿಸಿಸಿ ಸದಸ್ಯರಾದ ಸತೀಶ ಮೆಹರವಾಡೆ, ನಾಗರಾಜ ಗೌರಿ, ಪಾಲಿಕೆ ಮಾಜಿ ಸದಸ್ಯರಾದ ಅಲ್ತಾಫ್ ಕಿತ್ತೂರು, ವಿಜುನಗೌಡ ಪಾಟೀಲ, ಮುಖಂಡರಾದ ಮೆಹಮೂದ್ ಕೋಳೂರು, ಗಣೇಶ ದೊಡ್ಡಮನಿ, ಶ್ರೀನಿವಾಸ ಬೆಳದಡಿ, ಪ್ರಸನ್ನ ಮಿರಜಕರ, ಅಜೀಜುಲ್ಲಾ ಪಟ್ಟಣಕಾರಿ, ಬಾಬಾಜಾನ್ ಕಾರಡಗಿ, ಭಾಷಾ ಮಾಸನೂರು, ವಾದಿರಾಜ ಕುಲಕರ್ಣಿ, ಸೈಯದ್ ಸಲೀಂ, ವೀರಣ್ಣ ಹಿರೇಹಾಳ, ಶಿವು ಬೆಂಡಿಗೇರಿ, ಸಲೀಂ ಸುಂಡಕೆ, ಮುಸ್ತಾಖ್ ಮುದುಗಲ್, ಜಿಲಾನಿ ಬ್ಯಾಡಗಿ, ಧರ್ಮರಾಜ ಸಾತಪತಿ, ಇತರರು ಇದ್ದರು.

Leave a Comment