ಮಳೆಯಿಂದ ತತ್ತರಿಸಿದ ಕೊಡಗಿಗೆ ನೆರವಿನ ಮಹಾಪೂರ

ಬೆಂಗಳೂರು, ಆ ೧೮- ಕೊಡಗಿನಲ್ಲಿ ಧಾರಾಕಾರ ಮಳೆಯಿಂದಾಗಿ ಸಂಕಷ್ಟಕ್ಕೆ ಸಿಲುಕಿದ ಜನರ ನೆರವಿಗೆ ಧಾವಿಸುವಂತೆ ಈಗಾಗಲೇ ಗಣ್ಯರು, ಟಿವಿ, ಪತ್ರಿಕೆ, ಸಾಮಾಜಿಕ ಜಾಲತಾಣ ಸೇರಿದಂತೆ ಅನೇಕ ಕಡೆಗಳಲ್ಲಿ ಮನವಿ ಮಾಡಿದ ಬೆನ್ನಲೇ ಎಲ್ಲೆಡೆ ಅಭೂತಪೂರ್ವ ಸ್ಪಂದನೆ ವ್ಯಕ್ತವಾಗಿದೆ.

ಕೊಡಗಿನಲ್ಲಿ ವರುಣನ ಆರ್ಭಟದಿಂದ ಜನರು ಆಸ್ತಿಪಾಸ್ತಿ ನಷ್ಟ ಸಂಭವಿಸಿ ಸಂಕಷ್ಟಕ್ಕೆ ಸಿಲುಕಿದ್ದಾರೆ, ಹಾಗಾಗಿ ಅವರ ನೆರೆವಿಗೆ ನಾವು ಕೈಜೋಡಿಸುವಂತೆ ಸ್ಯಾಂಡಲ್ ವುಡ್‌ನ ನಟರಾದ ಶಿವರಾಜ್‌ಕುಮಾರ್, ಸುದೀಪ್ ಹಾಗೂ ದರ್ಶನ್ ಅವರು ಹಾಗೂ ಅನೇಕರು ಮನವಿ ಮಾಡಿದ್ದರು. ಧಾರಾಕಾರ ಮಳೆ ಹಾಗೂ ಜಲಾಶಯಗಳು ಭರ್ತಿಯಾಗಿರುವುದರ ಪರಿಣಾಮ ಕೊಡಗು ಜಿಲ್ಲೆ ಸಂಪೂರ್ಣವಾಗಿ ಜಲಾವೃತವಾಗುತ್ತಿದೆ. ಮನೆಗಳು ಕುಸಿಯುತ್ತಿದೆ. ಗುಡ್ಡಗಳು ಉರುಳುತ್ತಿದೆ. ಕೊಡಗಿನ ಜನರು ಮನೆ ಮಠ ಕಳೆದುಕೊಂಡು ಬೀದಿಯಲ್ಲಿ ನಿಂತಿರುವ ಕಷ್ಟಕರ ಪರಿಸ್ಥಿತಿ ನಿರ್ಮಾಣವಾಗಿದೆ. ಹಲವು ಜನರ ಪ್ರಾಣಹಾನಿ ಕೂಡ ಆಗಿದೆ. ನಿನ್ನೆ ಸಾಮಾಜಿಕ ಜಾಲತಾಣದಲ್ಲಿ ಶಿವಣ್ಣ ಸ್ವಂತ ಖುದ್ದು ಅಪ್ಪಾಜಿ ಕುಟುಂಬ ಸದಾ ನೆರವಿಗೆ ಮುಂದಾಗಿದ್ದು, ತಾವು ನಮ್ಮೊಂದಿಗೆ ಕೈಜೋಡಿಸಿ ಎಂದು ಕೇಳಿದ್ದರು.

ಕೊಡಗಿನ ಎಲ್ಲ ಜನರಿಗೆ ನಮ್ಮ ಸಹಾಯ ಮತ್ತು ಬೆಂಬಲ ಅಗತ್ಯವಿದೆ. ನಮ್ಮಿಂದ ಸಾಧ್ಯವಾದಷ್ಟು ಅವರಿಗೆ ನೆರವಾಗೋಣ. ನನ್ನ ಸಂಪೂರ್ಣ ಬೆಂಬಲ ಕೊಡಗಿನ ಜನರಿಗೆ ಇದೆ” ಎಂದು ಟ್ವೀಟ್ ಮಾಡಿರುವ ದರ್ಶನ್ ಬೆಂಗಳೂರು ಮತ್ತು ಗೋಣಿಕೊಪ್ಪಲ್ ಪ್ರದೇಶದಲ್ಲಿರುವ ಸಹಾಯ ಕೇಂದ್ರಗಳ ವಿಳಾಸ ಹಂಚಿಕೊಂಡಿದ್ದಾರೆ. ಸಹಾಯ ಮಾಡಲು ಬಯಸುವವರು ದಯವಿಟ್ಟು ನೆರವು ನೀಡಿ ಎಂದು ಮನವಿ ಮಾಡಿಕೊಂಡಿದ್ದಾರೆ.

ಹಾಗೇ ಕಿಚ್ಚ ಸುದೀಪ್ ಕೂಡ ಮನವಿ ಮಾಡಿಕೊಂಡಿದ್ದು, ನನ್ನ ಎಲ್ಲ ಅಭಿಮಾನಿ ಸಂಘಟನೆಗಳಿಗೂ ನನ್ನದೊಂದು ಕೋರಿಕೆ. ಮಳೆಯಲ್ಲಿ ಸಿಲುಕಿರುವ ಜನರಿಗೆ ಎಷ್ಟು ಸಾಧ್ಯವೋ ಅಷ್ಟು ಸಹಾಯ ಮಾಡಿ. ಇದು ನೀವು ನನಗೆ ನೀಡುವ ಬಹುದೊಡ್ಡ ಉಡುಗೊರೆ ಎಂದುಕೊಳ್ಳುತ್ತೇನೆ. ಅವರೆಲ್ಲರೂ ನಮ್ಮ ಜನ. ದಯವಿಟ್ಟು ನಿಮ್ಮಿಂದ ಆದಷ್ಟು ಸಹಾಯ ಮಾಡಿ. ಸರ್ಕಾರ ಕೂಡ ಈ ಬಗ್ಗೆ ಗಮನಿಸಿ ನೆರವು ನೀಡಿ ಎಂದು ಕೇಳಿಕೊಂಡಿದ್ದಾರೆ.

ಕೊಡಗಿನಲ್ಲಿ ಮಡಿಕೇರಿ, ಕುಶಾಲನಗರ, ನಾಪೋಕ್ಲು, ವಿರಾಜಪೇಟೆ, ಸೋಮವಾರಪೇಟೆ, ಶನಿವಾರ ಸಂತೆ, ಮಾಂದಲ್ ಪಟ್ಟಿ ಸೇರಿದಂತೆ ವಿವಿಧೆಡೆ ನಿರಂತರ ಮಳೆಗೆ ಜನತೆ ತತ್ತರಿಸಿದ್ದಾರೆ. ಜಲ ಪ್ರಳಯದ ಸ್ಥಿತಿಯಲ್ಲಿ ಸಿಲುಕಿ ತತ್ತರಿಸುತ್ತಿರುವ ಜನತೆಯನ್ನು ಕೈ ಎತ್ತಿ ಹಿಡಿಯಲು ನೆರವಾಗಬೇಕಿದೆ. ಪ್ರವಾಹಪೀಡಿತ ಜನರಿಗೆ ಅಕ್ಕಿ, ಗೋಧಿ, ರೆಡಿ ಟು ಈಟ್ ಫುಡ್, ಟೂತ್ ಪೇಸ್ಟ್, ಸೋಪು, ಟಾರ್ಚ್, ಮ್ಯಾಚ್ ಬಾಕ್ಸ್, ಕ್ಯಾಂಡಲ್, ಸ್ಯಾನಿಟರಿ ಪ್ಯಾಡ್, ಬ್ಲಾಂಕೇಟ್ ಹೀಗೆ ಅಗತ್ಯ ವಸ್ತುಗಳನ್ನು ನೀಡಬಹುದು. ಸಹಾಯವಾಣಿ- ಕೊಡಗು ಜಿಲ್ಲಾಧಿಕಾರಿ-೯೪೮೨೬೨೮೪೦೯, ಜಿಲ್ಲಾ ಪಂಚಾಯತ್ ಸಿಇಓ-೯೪೮೦೮೬೯೦೦೦.

ಜಲಪ್ರಳಯದಿಂದ ತತ್ತರಿಸಿರುವ ಜನರಿಗೆ ನೆರವಾಗಲು ಸಾರ್ವಜನರಿಂದಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, (ಉಪಯೋಗಿಸಿದ ವಸ್ತಗಳನ್ನು ಬಿಟ್ಟು) ಸಣ್ಣಪುಟ ವಸ್ತಗಳಾದ ಬೆಂಕಿಪಟ್ಣಣದಿಂದ ಎಲ್ಲಾ ವಸ್ತುಗಳನ್ನು ನೀಡಲು ಮುಂದಾಗಿದ್ದಾರೆ.

Leave a Comment