ಮಲೆಮಹದೇಶ್ವರ ಬೆಟ್ಟದಲ್ಲಿ ಅಮಾವಾಸೆ ವಿಶೇಷ ಪೂಜೆ

ಹನೂರು: ಫೆ.೨೩- ಮಹಾಶಿವರಾತ್ರಿ ಜಾತ್ರಾಮಹೋತ್ಸವದ ಅಂಗವಾಗಿ ಮಲೆಮಹದೇಶ್ವರ ಬೆಟ್ಟದಲ್ಲಿ ಮ.ಮ.ಬೆಟ್ಟ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಇಂದು ಅಮಾವಾಸೆ ವಿಶೇಷ ಪೂಜೆ, ಉತ್ಸವಗಳು ಧಾರ್ಮಿಕ ವಿಧಿ ವಿಧಾನಗಳ ಮೂಲಕ ಭಕ್ತಿಭಾವದೊಂದಿಗೆ ಸಂಭ್ರಮ ಸಡಗರದಿಂದ ಜರುಗಿದವು.
ಚಾಮರಾಜನಗರ ಜಿಲ್ಲೆಯ ಹನೂರು ತಾಲ್ಲೂಕಿನ ಮಲೆಮಹದೇಶ್ವರ ಬೆಟ್ಟದಲ್ಲಿ ದೇವರಿಗೆ ಇಂದು ಮುಂಜಾನೆ ೩ ಗಂಟೆಯಿಂದ ಬೆಳಿಗ್ಗೆ ೬ ಗಂಟೆಯವರೆಗೆ ಬಿಲ್ವಾರ್ಚನೆ, ಮಹಾರುದ್ರಾಭಿಷೇಕ, ಎಣ್ಣೆ ಮಜ್ಜನ, ಇನ್ನಿತರೆ ಸೇವೆ ಹಾಗೂ ಉತ್ಸವಗಳಾದ ರುದ್ರಾಕ್ಷಿ ಮಂಟಪೋತ್ಸವ, ಹುಲಿವಾಹನ, ಬಸವವಾಹನೋತ್ಸವ ಇನ್ನಿತರೆ ಉತ್ಸವಗಳು ನಡೆದವು.
ಮ.ಮ.ಬೆಟ್ಟಕ್ಕೆ ಭಕ್ತಗಣ
ಮಹಾಶಿವರಾತ್ರಿ ಜಾತ್ರಾ ಮಹೋತ್ಸವದ ಅಂಗವಾಗಿ ನಡೆಯುತ್ತಿರುವ ಜಾತ್ರೆಗೆ ರಾಜ್ಯದ ನಾನಾ ಭಾಗಗಳಿಂದ ಅಪಾರ ಸಂಖ್ಯೆಯ ಭಕ್ತಗಣ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಬಸ್‌ಗಳು ಸೇರಿದಂತೆ ಖಾಸಗಿ ಬಸ್‌ಗಳು, ಇನ್ನಿತರೆ ವಿವಿಧ ಬಗೆಯ ಖಾಸಗಿ ವಾಹನಗಳ ಮೂಲಕ ಮಾದಪ್ಪನ ಬೆಟ್ಟಕ್ಕೆ ಜನಸಾಗರವೇ ಹರಿದು ಬಂದಿದೆ. ಕಳೆದ ಎರಡು ವಾರಗಳಿಂದ ಕಾಲ್ನಡಿಗೆಯಿಂದ ಆಗಮಿಸಿದ್ದ ಮಾದಪ್ಪನ ಭಕ್ತರು ಹಾಗೂ ವಾಹನಗಳ ಮೂಲಕ ಬಂದಿದ್ದ ಭಕ್ತರು ಮಲೆಮಹದೇಶ್ವರ ಬೆಟ್ಟದಲ್ಲಿ ಜಮಾವಣೆಗೊಂಡ ಕಾರಣ ಮ.ಮ.ಬೆಟ್ಟ ಎತ್ತಾ ನೋಡೊದರು ಜನವೂ ಜನಜಂಗುಳಿ ಕಂಡು ಬಂದಿತು.
ಮಾದಪ್ಪನಿಗೆ ಉಘೆ ಎಂದ ಭಕ್ತವೃಂಧ
ಅಪಾರ ಸಂಖ್ಯೆಯಲ್ಲಿ ನೆರೆದಿದ್ದ ಹರಕೆ ಹೊತ್ತ ಮಾದಪ್ಪನ ಭಕ್ತರು ಇಷ್ಟಾರ್ಥ ದೇವರಿಗೆ ಮುಡಿ ಸೇವೆ ಸಲ್ಲಿಸಿ ಅಂತರಗಂಗೆಯಲ್ಲಿ ಮಿಂದೆದ್ದು, ದೇವಾಲಯ ಮುಂಭಾಗ ಸ್ವಾಮಿಗೆ ವಿವಿಧ ಸೇವೆಗಳನ್ನು ಸಲ್ಲಿಸುವ ಮೂಲಕ ಉಘೇ ಮಾದಪ್ಪ, ಉಘೇ ಮಾದಪ್ಪ ಎಂದ ಭಕ್ತರು.
ಸರತಿ ಸಾಲಿನಲ್ಲಿ ದೇವರ ದರ್ಶನ
ರಾಜ್ಯದ ಮೂಲೆ ಮೂಲೆಗಳಿಂದ ಮಾದಪ್ಪನ ದರ್ಶನ ಪಡೆಯಲು ಮಾದಪ್ಪನ ಭಕ್ತರು ಮ.ಮ.ಬೆಟ್ಟದಲ್ಲಿ ದರ್ಮದರ್ಶನ ಪಡೆಯಲು ಗಂಟೆಗಟ್ಟಲೇ ಸರತಿ ಸಾಲಿನಲ್ಲಿ ನಿಂತು ಮಾದಪ್ಪನಿಗೆ ಜಯಕಾರಗಳನ್ನು ಕೂಗುತ್ತಾ ಮಾದಪ್ಪನ ಸ್ಮರಣೆಯೊಂದಿಗೆ ನೆತ್ತಿ ಸುಡುವ ಉರಿ ಬಿಸಿಲನ್ನು ಲೆಕ್ಕಿಸದೇ ದರ್ಶನ ಪಡೆದರು.
ಮೂಲಭೂತ ಸೌಕರ್ಯಗಳಿಗೆ ಒತ್ತು
ಮಲೆಮಹದೇಶ್ವರ ಬೆಟ್ಟ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಲಕ್ಷಾಂತರ ಭಕ್ತರ ಅನುಕೂಲಕ್ಕೆ ಕುಡಿಯುವ ನೀರಿನ ವ್ಯವಸ್ಥೆಯನ್ನು ಸಹ ಕೈಗೊಳ್ಳಲಾಗಿತ್ತು. ಜೊತೆಗೆ ಶುಚಿತ್ವಕ್ಕೆ ಆದ್ಯತೆ ನೀಡಿದ್ದು ತಾತ್ಕಾಲಿಕಶೌಚಾಲಯಗಳನ್ನು ಹೆಚ್ಚುವರಿಯಾಗಿ ಕಲ್ಪಿಸಲಾಗಿತ್ತು. ಮತ್ತು ಮ.ಬೆಟ್ಟದ ದೇವಾಲಯ ಸೇರಿದಂತೆ ವಿವಿಧ ಜನನಿಬಿಡ ಪ್ರದೇಶಗಳಲ್ಲಿ ನಾಮ ಫಲಕ ಅಳವಡಿಸಿ ಶುಚಿತ್ವಕ್ಕೆ ಆದ್ಯತೆ ನೀಡಿ ಪ್ಲಾಸ್ಟಿಕ್ ತ್ಯಜಿಸಿ ಎಂಬ ಬರಹಗಳನ್ನು ಬರೆಯುವ ಮೂಲಕ ಭಕ್ತರಿಗೆ ಅರಿವನ್ನು ಮೂಡಿಸಲಾಯಿತು.
ಸೂಕ್ತ ಬಂದೋಬಸ್ತ್
ರಾಜ್ಯ ಸೇರಿದಂತೆ ನೆರೆಯ ತಮಿಳುನಾಡಿನಿಂದಲೂ ಮಹಾಶಿವರಾತ್ರಿ ಜಾತ್ರಾ ಮಹೋತ್ಸವಕ್ಕೆ ಲಕ್ಷಾಂತರ ಭಕ್ತರು ಆಗಮಿಸುತ್ತಿರುವ ಹಿನ್ನಲೆಯಲ್ಲಿ ಚಾಮರಾಜನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆನಂದ್‌ಕುಮಾರ್ ನೇತೃತ್ವದಲ್ಲಿ ಕಟ್ಟುನಿಟ್ಟಿನ ಸೂಕ್ತ ಬಂದೋಬಸ್ತ್ ನಡುವೆ ಮಾದಪ್ಪನ ದೇವಾಲಯ ಬಸ್ ನಿಲ್ದಾಣ, ತಾಳುಬೆಟ್ಟ, ಶಂಕಮ್ಮನ ನಿಲಯ, ಸಾಲೂರು ಮಠ, ಅಂತರಗಂಗೆ ಸೇರಿದಂತೆ ಜನನೀಬೀಡ ಪ್ರದೇಶಗಳಲ್ಲಿ ಮಫ್ತಿ ಹಾಗೂ ಪೊಲೀಸ್ ಸಮವಸ್ತ್ರದಲ್ಲಿ ಹೆಚ್ಚಿನ ಪೊಲೀಸ್ ಬಂದುಬಸ್ತ್‌ನ್ನು ಕಲ್ಪಿಸುವ ಮೂಲಕ ೫ ದಿನಗಳು ನಡೆಯುವ ಈ ಜಾತ್ರಾ ಮಹೋತ್ಸವದಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗಳು ಜರುಗದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಆಯಕಟ್ಟಿನ ಸ್ಥಳಗಳಲ್ಲಿ ಸೂಕ್ತ ಬಿಗಿ ಪಹರೆಯನ್ನು ಕೈಗೊಳ್ಳಲಾಗಿದೆ.

Leave a Comment