ಮಲಗಿದ್ದ ಬಾಲಕಿಯ ಎಳೆದೊಯ್ದು ಅತ್ಯಾಚಾರ

ಗಾಂಧಿನಗರ, ಡಿ.೨- ಪೋಷಕರೊಂದಿಗೆ ಮಲಗಿದ್ದ ಬಾಲಕಿಯನ್ನು ಸೇತುವೆ ಕೆಳಗೆ ಎಳೆದೊಯ್ದು ಅತ್ಯಾಚಾರವೆಸಗಿರುವ ಘಟನೆ ಗುಜರಾತ್ ರಾಜ್‌ಕೋಟ್ ಬಳಿ ನಡೆದಿದೆ. ಪೋಷಕರೊಂದಿಗೆ ಮಲಗಿದ್ದ ಅಪ್ರಾಪ್ತ ಬಾಲಕಿಯನ್ನು ಕಾಮಕನೊಬ್ಬ ಎಳೆದೊಯ್ದು ಅತ್ಯಾಚಾರ ಎಸಗಿದ್ದಾನೆ. ಅಮೂಲ್ ಕ್ರಾಸ್ ರಸ್ತೆಯ ರಾಜಕೋಟ್ ನಗರಸಭೆಯ ಗಾರ್ಡನ್‌ನಲ್ಲಿ ಬಾಲಕಿ ಕುಟುಂಬದವರೊಂದಿಗೆ ಮಲಗಿದ್ದಳು. ಅಲ್ಲಿಂದ ಬಾಲಕಿಯನ್ನು ಸೇತುವೆ ಕೆಳಗೆ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಆರೋಪಿ ಅತ್ಯಾಚಾರ ಎಸಗಿದ್ದಾನೆ.
ಆರೋಪಿಯನ್ನು ಹುಡುಕಿಕೊಟ್ಟವರಿಗೆ ಅಥವಾ ಸುಳಿವು ನೀಡಿದವರಿಗೆ ೫೦ ಸಾವಿರ ರೂ. ಬಹುಮಾನ ನೀಡುವುದಾಗಿ ಪೊಲೀಸರು ಘೋಷಿಸಿದ್ದಾರೆ. ೮ ವರ್ಷದ ಬಾಲಕಿಯನ್ನು ಮಧ್ಯಮ ವಯಸ್ಕನೊಬ್ಬ ಅತ್ಯಾಚಾರ ಮಾಡಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ. ಈ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು ರಾತ್ರಿ ೧೧.೩೦ಕ್ಕೆ ಬಾಲಕಿಯನ್ನು ಬ್ಲಾಂಕೆಟ್ ಸಮೇತ ಎತ್ತಿಕೊಂಡು ಹೋಗಿದ್ದಾನೆ. ಘಟನೆ ನಂತರ ಬಾಲಕಿ ತನ್ನ ಕುಟುಂಬದವರ ಬಳಿ ಓಡಿ ಬಂದಿದ್ದಾಳೆ. ಆರೋಪಿ ಕೆಲಹೊತ್ತು ಅದೇ ಸ್ಥಳದಲ್ಲಿ ಏಕಾಂಗಿಯಾಗಿ ಓಡಾಡಿದ್ದು ವಿಡಿಯೋದಲ್ಲಿ ದಾಖಲಾಗಿದೆ. ಆಕೆಯನ್ನು ಎಳೆದೊಯ್ದ ಬಳಿಕ ಎಲ್ಲರಿಗೂ ಎಚ್ಚರವಾಗಿದೆ. ಆಕೆಯನ್ನು ಹುಡುಕುತ್ತಾ ಅಲೆದಾಡಿದರೂ ಪತ್ತೆಯಾಗಿರಲಿಲ್ಲ. ಬಳಿಕ ಆಕೆ ಅಳುತ್ತಾ ಓಡಿಬರುತ್ತಿರುವುದು ಕಾಣಿಸಿತು. ಬಾಲಕಿ ಆಘಾತಕ್ಕೆ ಒಳಗಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

Leave a Comment