ಮರ್ಯಾದೆ ಕೊಡದ ಸ್ನೇಹಿತನ ಚುಚ್ಚಿ ಕೊಲೆಗೈದ ಆರೋಪಿ ಸೆರೆ

ಬೆಂಗಳೂರು, ಏ.೧೫- ಸಹೋದ್ಯೋಗಿ ಕಾರ್ಮಿಕರ ಜೊತೆ ಕೆಲಸ ಮಾಡುವಾಗ ಮರ್ಯಾದೆ ಕೊಡದ ಕಾರಣಕ್ಕೆ ಸ್ನೇಹಿತನನ್ನು ರಾಡ್‌ನಿಂದ ಹೊಡೆದು ಬಾಟಲಿನಿಂದ ಚುಚ್ಚಿ ಕೊಲೆಗೈದು ಪರಾರಿಯಾಗಿದ್ದ ಆರೋಪಿಯನ್ನು ಮಹಾಲಕ್ಷ್ಮೀಲೇಔಟ್ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಉತ್ತರ ಪ್ರದೇಶದ ಬಸ್ತಿ ಜಿಲ್ಲೆಯ ಕೋರಿಯಾದ ಮನೋಹರ್ ಪ್ರೇಮ್‌ಚಂದ್ ವರ್ಮಾ (33) ಬಂಧಿತ ಆರೋಪಿಯಾಗಿದ್ದಾನೆ. ಕಳೆದ ಜನವರಿ 15 ರಂದು ಲಗ್ಗರೆಯ ಕೆಂಪೇಗೌಡಲೇಔಟ್ ನ ಶೆಡ್‌ನಲ್ಲಿ ಸ್ನೇಹಿತ ರಮೇಶ್‌ನನ್ನು ಕುಡಿದ ಅಮಲಿನಲ್ಲಿ ರಾಡ್‌ನಿಂದ ಹೊಡೆದು ಬಾಟಲಿನಿಂದ ಚುಚ್ಚಿ ಕೊಲೆಗೈದು ಪರಾರಿಯಾಗಿದ್ದ.

ಕೊಳೆತ ಸ್ಥಿತಿಯಲ್ಲಿ ಪತ್ತೆಯಾದ ರಮೇಶ್‌ನ ಕೊಲೆ ಪ್ರಕರಣದ ತನಿಖೆ ಕೈಗೊಂಡ ಕೆಂಪೇಗೌಡ ಪೊಲೀಸರು ಆರೋಪಿಯನ್ನು ಉತ್ತರ ಪ್ರದೇಶಕ್ಕೆ ತೆರಳಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಉತ್ತರ ವಿಭಾಗದ ಡಿಸಿಪಿ ಶಶಿಕುಮಾರ್ ತಿಳಿಸಿದ್ದಾರೆ.

ಆರೋಪಿ ವಿಚಾರಣೆ ವೇಳೆ ಉತ್ತರ ಪ್ರದೇಶದ ಗೌರಕ್‌ಪುರದ ಕೊಲೆಯಾದ ರಮೇಶ್ ಮೂರು ವರ್ಷಗಳಿಂದ ಕೆಂಪೇಗೌಡಲೇಔಟ್‌ನಲ್ಲಿ ಲೋಕೇಶ್ ಎಂಬುವವರ ಶೆಡ್‌ನಲ್ಲಿ ವಾಸವಾಗಿದ್ದು ಕೆಲವು ಯುವಕರನ್ನು ಕರೆ ತಂದು ಬಣ್ಣ ಬಳಿಯುವ ಕೆಲಸ ಗುತ್ತಿಗೆ ಪಡೆದು ಮಾಡುತ್ತಿದ್ದ.

ರಮೇಶ್ ಬಳಿ ಆರೋಪಿ ಪ್ರೇಮ್ ಚಂದ್ ವರ್ಮಾ ಕೂಡ ಕೆಲಸ ಮಾಡುತ್ತಿದ್ದನು. ಇತರ ಕೆಲಸಗಾರರಾದ ಗೌತಮ್, ಕೃಷ್ಣ, ರಾಮು, ಇನ್ನಿತರರ ಜೊತೆ ಕೆಲಸ ಮಾಡುವಾಗ  ರಮೇಶ್‌ ವರ್ಮಾಗೆ ಮರ್ಯಾದೆ ಕೊಡುತ್ತಿರಲಿಲ್ಲ ಇದರಿಂದ ಆಕ್ರೋಶಗೊಂಡು ಹಲವು ಬಾರಿ ಬುದ್ದಿ ಹೇಳಿದರೂ ರಮೇಶ್ ವರ್ತನೆ ಸರಿಯಾಗಿರಲಿಲ್ಲ.

ಇದರಿಂದ ರೊಚ್ಚಿಗೆದ್ದ ವರ್ಮಾ ಸ್ನೇಹಿತರ ಜೊತೆ ಜನವರಿ 15 ರಂದು ರಮೇಶ್ ಮನೆಗೆ ಹೋಗಿ ಎಲ್ಲರೂ ಸೇರಿ ಪಾರ್ಟಿ ಮಾಡಿ ಕಂಠಪೂರ್ತಿ ಕುಡಿದ ನಂತರ ರಮೇಶ್ ನನ್ನು ಕೊಲೆ ಮಾಡಿ ಶೆಡ್ ಗೆ ಬೀಗ ಹಾಕಿಕೊಂಡು ಪರಾರಿಯಾಗಿದ್ದರು.

ಶೆಡ್ ನ ಮಾಲೀಕ ಲೋಕೇಶ್ ಅವರು 2 ದಿನಗಳ ನಂತರ ಶೆಡ್ ಬಳಿ ಹೋಗಿ ನೋಡಿದ್ದಾಗ ಕೊಳೆತ ವಾಸನೆ ಬರುತ್ತಿದ್ದು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿ ಶೆಡ್ ನ ಬೀಗ ಹೊಡೆದು ನೋಡಿದಾಗ ರಮೇಶ್ ನ ಮೃತ ದೇಹ ಪತ್ತೆಯಾಗಿತ್ತು.

ಈ ಸಂಬಂಧ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡ ಪೊಲೀಸರು ಆರೋಪಿಯನ್ನು ಬಂಧಿಸಿ ಉಳಿದವರಿಗಾಗಿ ಶೋಧ ನಡೆಸಿದ್ದಾರೆ.

Leave a Comment