ಮರ್ಜದ್ ಸಭೆ: 960 ವಿದೇಶಿಗರ ವೀಸಾ ರದ್ದು

ನವದೆಹಲಿ, ಏ. ೩- ದೆಹಲಿಯ ನಿಜಾಮುದ್ದೀನ್ ಮರ್ಜದ್ ಧಾರ್ಮಿಕ ಸಭೆಯಲ್ಲಿ ಪಾಲ್ಗೊಂಡಿದ್ದ 960 ವಿದೇಶಿಗರನ್ನು ಪತ್ತೆ ಹಚ್ಚಲಾಗಿದ್ದು, ಇವರನ್ನೆಲ್ಲಾ ಕಪ್ಪು ಪಟ್ಟಿಗೆ ಸೇರಿಸಿ ಇವರ ವೀಸಾಗಳನ್ನು ರದ್ದು ಮಾಡಲು ಕ್ರಮ ಕೈಗೊಳ್ಳಲಾಗಿದೆ ಎಂದು ಕೇಂದ್ರ ಗೃಹ ಸಚಿವಾಲಯ ಹೇಳಿದೆ.
ದೆಹಲಿಯ ನಿಜಾಮುದ್ ತಬ್ಲಿಘಿ ಜಮಾತ್‌ನ ಈ ಧಾರ್ಮಿಕ ಸಭೆಯಲ್ಲಿ ಅಮೆರಿಕಾ, ಫ್ರಾನ್ಸ್, ಇಟಲಿ ಮತ್ತಿತರ ದೇಶಗಳಿಗೆ ಸೇರಿದ 1300 ಮಂದಿ ವಿದೇಶಿಗರು ಪಾಲ್ಗೊಂಡಿದ್ದರು. ಅವರು ದೇಶದ ವಿವಿಧೆಡೆ ಪ್ರವಾಸದಲ್ಲಿದ್ದಾರೆ. ಇವರ ಪೈಕಿ 960 ಈ ವಿದೇಶಿಗರನ್ನು ಗುರುತಿಸಿ ಅವರನ್ನು ಕಪ್ಪುಪಟ್ಟಿಗೆ ಸೇರಿಸಿ ಅವರುಗಳ ವೀಸಾವನ್ನು ರದ್ದು ಮಾಡುವಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ವಿವಿಧ ರಾಜ್ಯಗಳಲ್ಲಿ ಪ್ರವಾಸದಲ್ಲಿರುವ ಈ 960 ವಿದೇಶಿಗರು ಲಾಕ್‌ಡೌನ್ ನಿಯಮ ಉಲ್ಲಂಘಿಸಿದ್ದಾರೆ. ಅವರ ವೀಸಾ ರದ್ದು ಮಾಡುವಂತೆ ಸಂಬಂಧಪಟ್ಟ ರಾಜ್ಯಗಳ ಪೊಲೀಸ್ ಮಹಾನಿರ್ದೇಶಕರುಗಳಿಗೆ ಕೇಂದ್ರ ಗೃಹ ಸಚಿವರು ಸೂಚನೆ ನೀಡಿದ್ದಾರೆ.
ನಿಜಾಮುದ್ದೀನ್ ಮಸೀದಿಯ ಧಾರ್ಮಿಕ ಸಭೆಯಲ್ಲಿ ಪಾಲ್ಗೊಂಡಿದ್ದ 950 ವಿದೇಶಿಗರ ವೀಸಾವನ್ನು ರದ್ದು ಮಾಡಿ ಅವರ ವಿರುದ್ಧ ಕಾನೂನು ಕ್ರಮ ಕೈಗೊಂಡು ಈ ಎಲ್ಲ ವಿದೇಶಿಗರನ್ನು ಅವರ ದೇಶಗಳಿಗೆ ವಾಪಸ್ ಕಳುಹಿಸಲಾಗುವುದು ಎಂದು ಗೃಹ ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ಖಾಸಗಿ ಸುದ್ದಿವಾಹಿನಿಯೊಂದಕ್ಕೆ ತಿಳಿಸಿದ್ದಾರೆ.
ಈ ಎಲ್ಲ ವಿದೇಶಿಗರ ವಿರುದ್ಧ ವಿದೇಶಿಕಾಯ್ದೆ-14 ರಂತೆ ವೀಸಾ ದುರುಪಯೋಗಪಡಿಸಿಕೊಂಡ ಆರೋಪದಡಿ ಕಾನೂನು ಕ್ರಮ ಜರುಗಿಸಲಾಗುತ್ತಿದೆ. ಈ ವಿದೇಶಿಗರು ದೇಶದ ಯಾವುದೇ ಭಾಗದಲ್ಲಿ ಧಾರ್ಮಿಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವುದನ್ನು ನಿರ್ಬಂಧಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ದೆಹಲಿಯ ನಿಜಾಮುದ್ದೀನ್ ತಬ್ಲಿಘಿ ಮಸೀದಿಯಲ್ಲಿ ನಡೆದ ಧಾರ್ಮಿಕ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಸುಮಾರು 9 ಸಾವಿರ ಜಮಾತ್ ಸದಸ್ಯರು ಹಾಗೂ ಅವರ ಸಂಪರ್ಕದಲ್ಲಿರುವವರನ್ನು ಪತ್ತೆಹಚ್ಚಿ ನಿನ್ನೆ ಒಂದೆ ದಿನ 9 ಸಾವಿರ ಮಂದಿಯನ್ನು ಕ್ವಾರಂಟೈನ್‌ನಲ್ಲಿ ಇರಿಸಲಾಗಿದೆ.
ದೆಹಲಿಯಲ್ಲಿ 2 ಸಾವಿರದಷ್ಟ ತಬ್ಲಿಘಿ ಜಮಾತ್ ಸದಸ್ಯರಿದ್ದು, ಇವರಲ್ಲಿ 1804 ಜನರನ್ನು ಕ್ವಾರಂಟೈ‌ನ್‌ನಲ್ಲಿ ಇರಿಸಲಾಗಿದೆ. ಸೋಂಕು ಲಕ್ಷಣ ಕಂಡು ಬಂದಿರುವ 334 ಜನರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದರು.
ಧಾರ್ಮಿಕ ಸಭೆಯಲ್ಲಿ ಪಾಲ್ಗೊಂಡಿದ್ದರ ಪೈಕಿ 550 ಮಂದಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ ಎಂದು ಅವರು ಹೇಳಿದ್ದಾರೆ.

Leave a Comment