ಮರೆಯಾದ ಕರುಣಾನಿಧಿ ಕಪ್ಪು ಕನ್ನಡಕ

ಚೆನ್ನೈ, ಆ.೮- ಕಪ್ಪು ಕನ್ನಡಕದೊಂದಿಗೆ ಸದಾ ಕಂಗೊಳಿಸುತ್ತಿದ್ದ ದಿವಂಗತ ಕರುಣಾನಿಧಿ ಅವರು ತಮ್ಮ ಕನ್ನಡಕದೊಂದಿಗೆ ೪೬ ವರ್ಷಗಳ ಅವಿಭಾವ ಸಂಬಂಧ ಹೊಂದಿದ್ದರು.

ದ್ರಾವಿಡ ಮೇರು ನಾಯಕ ಎಂದೇ ಗುರುತಿಸಿಕೊಂಡಿದ್ದ ಡಾ.ಎಂ.ಕೆ.ಅವರು ಸದಾ ಬಿಳಿ ಪಂಚೆ, ಬಿಳಿ ಅಂಗಿ, ಹಳದಿ ಅಂಗವಸ್ತ್ರ ಮತ್ತು ಕಪ್ಪು ಕನ್ನಡಕದೊಂದಿಗೆ ವಿಶಿಷ್ಟ ವರ್ಚಸ್ಸಿನಿಂದ ಕಂಗೊಳಿಸುತ್ತಿದ್ದರು.
ಕಪ್ಪು ಕನ್ನಡಕವಿಲ್ಲದೆ ಕರುಣಾನಿಧಿಯವರನ್ನು ಊಹಿಸಲೂ ಸಾಧ್ಯವಿಲ್ಲ. ಹೌದು ಕರುಣಾನಿಧಿ ಅವರು ೪೬ ವರ್ಷಗಳ ಕಾಲ ಒಂದೇ ಕನ್ನಡಕ ಬಳಸಿದ್ದರು. ಕಳೆದ ವರ್ಷ ನವೆಂಬರ್‌ನಲ್ಲಷ್ಟೇ ಅದನ್ನು ಬದಲಿಸಿದ್ದರು.

ಹೊಸ ಕನ್ನಡಕ ಹುಡುಕಲು ಕರುಣಾನಿಧಿಯವರ ಪುತ್ರ ತಮಿಳರಸು ಅವರು ಸುಮಾರು ೪೦ ದಿನಗಳ ಕಾಲ ಹುಡುಕಾಟ ನಡೆಸಿದ್ದರು ಎಂಬುದು ಅಚ್ಚರಿಯಾದರೂ ವಾಸ್ತವದ ಸಂಗತಿ. ಜರ್ಮನಿಯಿಂದ ಹಗುರ ಹೊಸ ಕನ್ನಡಕ ತರಿಸಿ, ತಂದೆಗೆ ನೀಡಿದ್ದರು. ಆಗ ಡಾ.ಎಂ.ಕೆ. ತುಂಬಾ ಖುಷಿಪಟ್ಟಿದ್ದರು. ಕರುಣಾನಿಧಿಯವರು ಯಾವಾಗಲು ಕಪ್ಪು ಕನ್ನಡಕ ಧರಿಸುತ್ತಿದ್ದದ್ದು ಏಕೆ ಎಂಬುದು ಬಹುತೇಕ ಮಂದಿಗೆ ಗೊತ್ತೇ ಇಲ್ಲ. ಅದಕ್ಕೆ ಕಾರಣ ಅವರಿಗಿದ್ದ ಕಣ್ಣಿನ ಸಮಸ್ಯೆ ಹಾಗೂ ಅಪಘಾತದಲ್ಲಿ ಉಲ್ಬಣಗೊಂಡಿದ್ದ ತೊಂದರೆ ಮತ್ತು ಶಸ್ತ್ರಚಿಕಿತ್ಸೆ ಪರಿಣಾಮ.

೧೯೫೪ರಿಂದ ಕರುಣಾನಿಧಿಯವರ ಕಣ್ಣಿನಲ್ಲಿ ನೀರು ಸುರಿಯುವುದು, ತುರಿಕೆ, ನೋವು ಕಾಣಿಸಿಕೊಳ್ಳುತ್ತಿತ್ತು. ೧೭ ವರ್ಷಗಳ ಕಾಲ ಅದನ್ನು ಸಹಿಸಿಕೊಂಡಿದ್ದರು. ಕೊನೆಕೊನೆಗೆ ಕಣ್ಣಿನಲ್ಲಿ ಸೂಜಿ ಚುಚ್ಚಿದ ಅನುಭವದಿಂದ ತತ್ತರಿಸಿದ್ದರು. ಯಾವ ವೈದ್ಯರ ಬಳಿ ಹೋದರೂ ಶಾಶ್ವತ ಪರಿಹಾರ ಲಭಿಸಿರಲಿಲ್ಲ. ಈ ನಡುವೆ ೧೯೬೭ರಲ್ಲಿ ಸಂಭವಿಸಿದ ಒಂದು ಅಪಘಾತದಲ್ಲಿ ಕರುಣಾನಿಧಿಯವರ ಕಣ್ಣಿಗೆ ಗಾಯವಾಗಿತ್ತು. ಕಣ್ಣಿನ ಸಮಸ್ಯೆ ಸಹಿಸಲು ಅಸಾಧ್ಯವಾದಾಗ ಅಮೆರಿಕಾದ ಆಸ್ಪತ್ರೆಯೊಂದರಲ್ಲಿ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡರು. ಅಂದಿನಿಂದಲೂ ಅವರು ಕಪ್ಪು ಕನ್ನಡಕವನ್ನು ಬಳಸುತ್ತಿದ್ದರು.

ಕರುಣಾನಿಧಿಯವರ ಒಂದು ಕಾಲದ ಮಿತ್ರ, ರಾಜಕೀಯ ಎದುರಾಳಿಯಾಗಿದ್ದ ಎಂಜಿಆರ್ ಕೂಡ ಕಪ್ಪು ಕನ್ನಡಕ ಧರಿಸುತ್ತಿದ್ದರು. ವಿಶೇಷ ಟೋಪಿಯೂ ಅವರ ಟ್ರೇಡ್ ಮಾರ್ಕ್ ಆಗಿತ್ತು. ಎಂಜಿಆರ್ ನಿಧನರಾದ ಅವರ ಕನ್ನಡಕ, ಟೋಪಿಯನ್ನು ಜೊತೆಯಲ್ಲಿಯೇ ಹೂಳಲಾಗಿದ್ದು, ಇವರಿಬ್ಬರಿಂದಾಗಿ ತಮಿಳುನಾಡಿನಲ್ಲಿ ಕಪ್ಪು ಕನ್ನಡಕ ಧರಿಸುವ ಕ್ರೇಜ್ ಕೂಡ ಸೃಷ್ಟಿಯಾಗಿತ್ತು. ೯೪ ವರ್ಷದ ಕರುಣಾನಿಧಿ ಅವರೊಂದಿಗೆ ೪೬ ವರ್ಷದ ನಂಟು ಹೊಂದಿದ್ದ ಕಪ್ಪು ಕನ್ನಡಕವೂ ಅವರೊಂದಿಗೆ ಅಂತ್ಯಗೊಳ್ಳಲಿದೆ.

Leave a Comment