ಮರೆಯಾಗುತ್ತಿರುವ ಕಾಯಕ ಸಂಸ್ಕೃತಿ; ಬಸವಪ್ರಭು ಶ್ರೀ

ದಾವಣಗೆರೆ.ಜ.12; ಗುಡಿ-ಗುಂಡಾರಗಳನ್ನು ನಿರ್ಮಿಸುದಕ್ಕಿಂತಲೂ ಶೌಚಾಲಯ ನಿರ್ಮಿಸುವುದು ಶ್ರೇಷ್ಠವಾದದು ಎಂದು ವಿರಕ್ತಮಠದ ಚರಮೂರ್ತಿ ಶ್ರೀ ಬಸವಪ್ರಭು ಸ್ವಾಮೀಜಿ ಹೇಳಿದರು.
ನಗರದ ವಿರಕ್ತಮಠದಿಂದ ಲಿಂ. ಜಗದ್ಗುರು ಶ್ರೀ ಜಯದೇವ ಮುರುಘರಾಜೇಂದ್ರ ಮಹಾಸ್ವಾಮಿಗಳವರ 62ನೇ ಸ್ಮರಣೋತ್ಸವ, ಶರಣ ಸಂಸ್ಕೃತಿ ಉತ್ಸವ ಹಾಗೂ ಸಹಜ ಶಿವಯೋಗದ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಜನಜಾಗೃತಿ ಪಾದಯಾತ್ರೆಯ ಸಾನಿಧ್ಯ ವಹಿಸಿ ಅವರು ಮಾತನಾಡಿದರು. ಹಣವಂತರು ಲಕ್ಷಾಂತರ ರೂ.ಗಳನ್ನು ಖರ್ಚು ಮಾಡಿ ಗುಡಿಗಳನ್ನು ನಿರ್ಮಿಸಿತ್ತಾರೆ. ಆದರೆ ಬಡವರ ಆರೋಗ್ಯ ಕಾಪಾಡುವ, ಸಾಮಾಜಿಕ ಸ್ವಾಸ್ಥ್ಯಕ್ಕಾಗಿ ಶೌಚಾಲಯ ನಿರ್ಮಿಸಲು ಮುಂದೆ ಬರುವುದಿಲ್ಲ. ಆದರೆ ತುಮಕೂರಿನ ಸಮಾಜ ಸೇವಕಿ ಶ್ರೀಮತಿ ಭವ್ಯರಾಣಿ ಬಡವರಿಗಾಗಿ ಶೌಚಾಲಯ ನಿರ್ಮಿಸುವ ಮೂಲಕ ಮಾದರಿ ಮಹಿಳೆಯಾಗಿದ್ದಾರೆ. ಈ ಹಿನ್ನಲೆಯಲ್ಲಿ ಈ ಸಾಲಿನ ಶೂನ್ಯಪೀಠ ಅಕ್ಕನಾಗಮ್ಮ ಪ್ರಶಸ್ತಿಯನ್ನು ಅವರಿಗೆ ನೀಡಿ ಗೌರವಿಸಲಾಗಿದೆ ಎಂದು ಹೇಳಿದರು.ದೇಶದಲ್ಲಿ ಹಲವಾರು ಸಮಸ್ಯೆಗಳು ತಾಂಡವಾಡುತ್ತಿವೆ. ಈ ಸಮಸ್ಯೆಗಳ ನಿವಾರಣೆಗೆ, ಶಾಂತಿ ಮತ್ತು ಸಹಬಾಳ್ವೆ ಜೀವನಕ್ಕಾಗಿ ಶರಣರ ವಚನಗಳ ಪಾಲನೆ ಹಾಗೂ ಅವರು ಹಾಕಿಕೊಟ್ಟ ಮಾರ್ಗದರ್ಶನದಲ್ಲಿ ನಡೆಯಬೇಕು. ಅಲ್ಲದೆ ಆರೋಗ್ಯವಂತ, ಸುಖಿ ಕುಟುಂಬಕ್ಕಾಗಿ, ಬಡತನ, ಅನಕ್ಷರತೆ, ನಿರುದ್ಯೋಗ ಸಮಸ್ಯೆ ನಿವಾರಣೆಗೆ ಸರಕಾರ ಜಾರಿಗೆ ತಂದಿರುವ ಯೋಜನೆಗಳ ಸದುಪಯೋಗವೂ ಅಗತ್ಯವಾಗಿದೆ. ಈ ಬಗ್ಗೆ ಸರ್ವರೂ ಅರಿತುಕೊಳ್ಳಬೇಕೆಂದು ಕರೆ ನೀಡಿದರು.
ಇತ್ತಿಚೆಗೆ ಕಾಯಕ ಸಂಸ್ಕೃತಿ ಮರೆಯಾಗುತ್ತಿದೆ. ರಜೆಗೆ ಎಲ್ಲರೂ ಇಷ್ಟಪಡುತ್ತಾರೆ. ಆರಾಮವಾಗಿ ಇರಬೇಕೆಂದು ಬಯಸುವವರು ಹೆಚ್ಚಾಗಿದ್ದಾರೆ. ಕಾಯಕದಿಂದಲೇ ನಮ್ಮ ಜೀವನ, ನಮ್ಮ ದೇಶ ಉದ್ದಾರವಾಗುತ್ತದೆ, ಕಾಯಕವೇ ಕೈಲಾಸ ಎಂದು ಬಸವಣ್ಣನವರ ನುಡಿಯಂತೆ ಜಯದೇವ ಜಗದ್ಗುರುಗಳ ನಡೆದರು. ಅವರ ಸಾಧನೆ ಅಪಾರವಾಗಿದೆ. ಪ್ರತಿಯೊಬ್ಬರೂ ಶಿಕ್ಷಣ ಪಡೆದುಕೊಳ್ಳಬೇಕು ಎಂದು ಬಯಸಿದ್ದರು. ಹಾಸ್ಟೆಲ್‍ಗಳ ನಿರ್ಮಾಣದೊಂದಿಗೆ ಸಮಾಜ ಮುಖಿ ಕೆಲಸ ಮಾಡಿದರು.ಜಯದೇವ ಶ್ರೀಗಳು ಎಂದರೆ, ಶಿಕ್ಷಣ, ದಾಸೋಹ, ಕಾಯಕ, ಮಾನವೀಯತೆ, ಪ್ರೀತಿ-ವಿಶ್ವಾಸದ ಗಣಿ ಇದ್ದಂತೆ. ಜಾತ್ಯಾತೀತ ವ್ಯಕ್ತಿಯಾಗಿದ್ದರು. ಎಲ್ಲರನ್ನೂ ಅಪ್ಪಿಕೊಂಡು ಹೋಗುತ್ತಿದ್ದರು. ಅವರ ಸಾಧನೆಗಳನ್ನು ಕೂಡಾ ಪಾದಯಾತ್ರೆಯ ಮೂಲಕ ಜಾಗೃತಿ ಮೂಡಿಸಲಾಗುತ್ತದೆ ಎಂದರು.
ಮೇಯರ್ ಶ್ರೀಮತಿ ಶೋಭಾ ಪಲ್ಲಾಗಟ್ಟಿ ಪಾದಯಾತ್ರೆಗೆ ಚಾಲನೆ ನೀಡಿದರು. ಎನ್.ಆರ್.ಪುರಂ ಬಸವಕೇಂದ್ರದ ಶ್ರೀ ಶಿವಯೋಗ ಪ್ರಭು ಸ್ವಾಮೀಜಿ, ಬಸವ ಕಿರಣ ಸ್ವಾಮೀಜಿ, ಸಿರಸಂಗಿ ಮಠದ ಮಹಾಂತಸ್ವಾಮಿಗಳು, ಶಿವಮುರ್ತಿ ಸ್ವಾಮಿಗಳು ಮೈಸೂರು, ನಿಜಗುಣ ಶಿವಯೋಗಿ, ಅಕ್ಕಿ ಚನ್ನಪ್ಪ, ಹಾಸಬಾವಿ ಕರಬಸಪ್ಪ, ಲಂಬಿ ಮುರುಘೇಶ, ಕಣಕುಪ್ಪಿ ಮುರುಗೇಶ, ಶಿವಕುಮಾರ್, ಮಹಾದೇವಮ್ಮ, ಶರಣಬಸವ, ಕುಮಾರಸ್ವಾಮಿ, ಶಿಕ್ಷಕರಾದ ಸೌಭಾಗ್ಯ, ವಿನುತ, ರೇಖಾ, ಉಮಾ ಸೇರಿದಂತೆ ಮೊದಲಾದವರು ಪಾಲ್ಗೊಂಡಿದ್ದರು. ಪಾದಯಾತ್ರೆಯು ವಿರಕ್ತಮಠದಿಂದ ಮದಕರಿನಾಯಕ ವೃತ್ತ, ವಕ್ಕಲಿಗರಪೇಟೆ, ಕಾಯಿಪೇಟೆ, ವಿಜಯಲಕ್ಷ್ಮೀ ರಸ್ತೆಯ ಮೂಲಕ ಪುನಃ ವಿರಕ್ತಮಠಕ್ಕೆ ಹಿಂದುರಿಗಿತು. ರಸ್ತೆಯುದ್ದಕ್ಕೂ ಬಸವಕಲಾ ಲೋಕ ಭಜನಾ ತಂಡದವರು ವಚನ ಹಾಗೂ ಜಾಗೃತಿ ಗೀತೆಗಳನ್ನು ಹಾಡಿದರು. ವಿರಕ್ತಮಠದ ನೂರಾರು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

Leave a Comment