ಮರುಪ್ರಸಾರದಲ್ಲೂ ವಿಶ್ವದಾಖಲೆ ಸೃಷ್ಟಿಸಿದ ರಾಮಾಯಣ ಧಾರಾವಾಹಿ

ನವದೆಹಲಿ, ಏ 30- ದೂರದರ್ಶನ ವಾಹಿನಿಯಲ್ಲಿ ಮರುಪ್ರಸಾರವಾಗುತ್ತಿರುವ ರಾಮಾಯಣ ಧಾರಾವಾಹಿಗೆ ಜಗತ್ತಿನಾದ್ಯಂತ ಲಕ್ಷಾಂತರ ವೀಕ್ಷಕರು ವೀಕ್ಷಿಸುವ ಮೂಲಕ ವಿಶ್ವದಾಖಲೆ ಬರೆದಿದೆ.

ಜಾಗತಿಕವಾಗಿ ಅತಿ ಹೆಚ್ಚು ಜನರು ವೀಕ್ಷಿಸುತ್ತಿರುವ ಮನರಂಜನಾ ಕಾರ್ಯಕ್ರಮ ಎಂಬ ಹೆಗ್ಗಳಿಕೆಗೆ ರಾಮಾಯಣ ಪಾತ್ರವಾಗಿದೆ. ಈ ತಿಂಗಳ 16 ರಂದು ಒಂದೇ ದಿನ 7.7 ಕೋಟಿ ಜನರು ಧಾರಾವಾಹಿ ವೀಕ್ಷಿಸಿದ್ದಾರೆ ಎಂದು ಪ್ರಸಾರ ಭಾರತಿ ಟ್ವೀಟ್ ಮಾಡಿದೆ.

ಕೊರೊನಾ ಸಾಂಕ್ರಾಮಿಕ ಹರಡುತ್ತಿರುವ ಕಾರಣ ವಿಶ್ವಾದ್ಯಂತ ಬಹುತೇಕ ಚಟುವಟಿಕೆಗಳು ಸ್ಥಗಿತಗೊಂಡಿದ್ದು ಮನೋರಂಜನಾ ವಲಯಕ್ಕೂ ಹೊಡೆತ ಬಿದ್ದಿದೆ. ಮನೆಯಲ್ಲೇ ಇರುವ ಜನರನ್ನು ರಂಜಿಸಲು ದೂರದರ್ಶನ ವಾಹಿನಿ ತನ್ನ ಹಳೆಯ ಧಾರಾವಾಹಿಗಳ ಮರುಪ್ರಸಾರ ಮಾಡಿದೆ.

ಮಹಾಭಾರತ, ರಾಮಾಯಣ, ಇತ್ತೀಚೆಗೆ ಕೆಲವು ದಿನಗಳಿಂದ ಶ್ರೀಕೃಷ್ಣ ಸೇರಿದಂತೆ ಅನೇಕ ಹಳೆಯ ಧಾರಾವಾಹಿಗಳು ಮರುಪ್ರಸಾರವಾಗುತ್ತಿದ್ದು ಜನರನ್ನು ಆಕರ್ಷಿಸಿವೆ. 1987-88ರ ಅವಧಿಯಲ್ಲಿ ‘ರಾಮಾಯಣ’ ಧಾರವಾಹಿ ದೂರದರ್ಶನದಲ್ಲಿ ಪ್ರಸಾರಗೊಂಡು ಹೊಸ ಅಲೆ ಸೃಷ್ಟಿಸಿತ್ತು. ಈ ಧಾರಾವಾಹಿ ಈಗ ಮರು ಪ್ರಸಾರಗೊಂಡಿದ್ದು ವಿಶ್ವ ದಾಖಲೆಯನ್ನೇ ಬರೆದಿದೆ.

ಲಾಕ್ಡೌನ್ ಆದೇಶ ಬಂದ ನಂತರ ‘ರಾಮಾಯಣ’ ಮರು ಪ್ರಸಾರಗೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದರು. ಅಲ್ಲದೆ, ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಕ್ಯಾಂಪೇನ್ಗಳು ಕೂಡ ನಡೆದವು. ಈ ಹಿನ್ನೆಲೆಯಲ್ಲಿ ಡಿಡಿ ಮಾರ್ಚ್ 28ರಂದು ರಾಮಾಯಣ ಮರು ಪ್ರಸಾರ ಆರಂಭಿಸಿತ್ತು. 1987, ಜನವರಿ 25ರಿಂದ 1988 ಜುಲೈ 31ರವರೆಗೆ ರಾಮಾಯಾಣ ಪ್ರಸಾರಗೊಂಡಿತ್ತು.

Leave a Comment