ಮರೀಚಿಕೆಯಾದ ಮಹಿಷಿ ವರದಿ ಜಾರಿಯಾಗದ ಅಕ್ಷರ ಜಾತ್ರೆಯ ನಿರ್ಣಯಗಳು

ವಿಶೇಷ ವರದಿ
ಪಿ.ಆರ್.ವಿಶ್ವನಾಥ್
ಕನ್ನಡ ಸಾರಸ್ವತ ಲೋಕದಲ್ಲಿ ನಾಡಿನ ಕವಿಗಳ ಕೊಡುಗೆ ಅಪಾರ. ಎಂಟು ಮಂದಿ ಸಾಹಿತಿಗಳಿಗೆ ಜ್ಞಾನಪೀಠ ಪ್ರಶಸ್ತಿಗಳು ಲಭಿಸಿರುವುದೇ ಇದಕ್ಕೆ ಸಾಕ್ಷಿಯಾಗಿದೆ. ಈ ರೀತಿಯ ಅದ್ವೀತಿಯ ಸಾಧನೆ ಮಾಡಿದ ಕವಿಗಳನ್ನು ಕನ್ನಡ ಸಾಹಿತ್ಯ ಪರಿಷತ್ತು ಗೌರವಿಸುತ್ತಾ ಬಂದಿದೆ. ಅದಕ್ಕಾಗಿಯೇ 1915 ರಿಂದಲೂ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸುತ್ತಾ ಬಂದಿದೆ. ಈಗ ಕನ್ನಡ ರಾಜ್ಯೋತ್ಸವ ಆಚರಿಸುತ್ತಿರುವ ನವೆಂಬರ್ ತಿಂಗಳಿನಲ್ಲಿ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ನುಡಿಜಾತ್ರೆ ನಡೆಯುತ್ತಿದೆ. ಆದರೆ ಈ ಸಮ್ಮೇಳನ ಸೇರಿದಂತೆ ಹಿಂದಿನ ಸಮ್ಮೇಳನಗಳಲ್ಲಿ ಕೈಗೊಂಡಿರುವ ನಿರ್ಣಯಗಳು ಇರುವರೆಗೂ ಅನುಷ್ಠಾನಕ್ಕೆ ಬಾರದಿರುವುದು ನಿಜಕ್ಕೂ ದುರಂತವೇ ಸರಿ.
ಕರ್ನಾಟಕ ಏಕೀಕರಣ ಸಾಧಿಸುವುದು ಮತ್ತು ಕನ್ನಡ ಭಾಷೆಯ ಸಾರ್ವಭೌಮ ಸ್ಥಾನ ಪಡೆದುಕೊಳ್ಳಲು ಅಗತ್ಯವಾದ ಜನಜಾಗೃತಿ ಸಂಕಲ್ಪ ಹುಟ್ಟಿಸುವುದು ಈ ಸಾಹಿತ್ಯ ಸಮ್ಮೇಳನದ ಉದ್ದೇಶವಾಗಿದೆ.
ಆದರೆ ರಾಜ್ಯದಲ್ಲಿ ಕನ್ನಡಿಗರು ತಮ್ಮ ಹಕ್ಕಿಗಾಗಿ ಹೋರಾಟ ನಡೆಸಬೇಕಾದ ಪರಿಸ್ಥಿತಿ ಬಂದಿರುವುದು ಇಂದು ನಿನ್ನೆಯದಲ್ಲ. ಉದ್ಯೋಗದಲ್ಲಿ ಮೀಸಲಾತಿ, ಐಟಿ, ಬಿಟಿಗಳಲ್ಲಿ ಕನ್ನಡಿಗರಿಗೆ ಆದ್ಯತೆ ನೀಡುವುದು ಸೇರಿದಂತೆ ಹಲವು ಹಕ್ಕಿಗಳಿಗಾಗಿ ಹೋರಾಟ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ.
ಮಾಜಿ ಮುಖ್ಯಮಂತ್ರಿ ದಿ.ರಾಮಕೃಷ್ಣ ಹೆಗಡೆ ಉದ್ಯೋಗದಲ್ಲಿ ಕನ್ನಡಿಗರಿಗೆ ಮೀಸಲಾತಿ ಕಲ್ಪಿಸಲು ಸರೋಜಿನಿ ಮಹಿಷಿ ನೇತೃತ್ವದಲ್ಲಿ ಸಮಿತಿಯನ್ನು ರಚಿಸಿ ವರದಿ ನೀಡುವಂತೆ ಸೂಚಿಸಿದ್ದರು.
ಸಾಹಿತಿ, ರಾಜಕಾರಣಿಯೂ ಆಗಿದ್ದ ಸರೋಜಿನಿ ಮಹಿಷಿಯವರು ಸ್ಥಳೀಯರಿಗೆ ಉದ್ಯೋಗ ಎಂಬ ನೀತಿಯನ್ನು ಪ್ರತಿಪಾದಿಸಿ ರಾಜ್ಯದೆಲ್ಲೆಡೆ ಸಂಚಲನ ಮೂಡಿಸಿದ್ದರು. ರೈಲ್ವೆ ಇಲಾಖೆ ಸೇರಿದಂತೆ ಸಾರ್ವಜನಿಕ ಕ್ಷೇತ್ರಗಳಲ್ಲಿ ಕನ್ನಡಿಗರಿಗೆ ಉದ್ಯೋಗದಲ್ಲಿ ಮೀಸಲಾತಿ ನೀಡುವ ಕುರಿತು 1983 ರಲ್ಲಿ ವರದಿಯನ್ನು ನೀಡಿದ್ದರು. ಆದರೆ ಈ ವರದಿ ಜಾರಿಗೆ ಬರದಿರುವುದು ನಿಜಕ್ಕೂ ವಿಪರ್ಯಾಸದ ಸಂಗತಿ. ಈ ವರದಿ ಅನುಷ್ಠಾನಕ್ಕಾಗಿ ಈಗಲೂ ಹೋರಾಟಗಳು ನಡೆಯುತ್ತಿವೆ. ಹೊರತು ಯಾವ ಸರ್ಕಾರವೂ ಈ ವರದಿಯನ್ನು ಜಾರಿಗೆ ತರುವ ಮನಸ್ಸು ಮಾಡುತ್ತಿಲ್ಲ. ಹೀಗಾಗಿ ಕನ್ನಡ ನಾಡಿನಲ್ಲಿ ಕನ್ನಡಿಗರು ಮೂಲೆ ಗುಂಪಾಗುತ್ತಿದ್ದಾರೆ.
ಐಟಿ, ಬಿಟಿ ಸೇರಿದಂತೆ ಕೈಗಾರಿಕೆಗಳ ನೇಮಕಾತಿಯಲ್ಲಿ ಕನ್ನಡಿಗರಿಗೆ ಆದ್ಯತೆ ನೀಡಬೇಕೆಂಬ ಕೂಗು ಕೇಳಿ ಬರುತ್ತಲೆ ಇದೆ. ಈ ಹುದ್ದೆಗಳು ಕಡ್ಡಾಯವಾಗಿ ಕನ್ನಡಿಗರಿಗೆ ದೊರಕಿಸಿಕೊಡಲು ಸರ್ಕಾರ ಕೂಡ ಪ್ರಯತ್ನಿಸುತ್ತಿಲ್ಲ. ಇದರಿಂದಾಗಿ ಕನ್ನಡಿಗರಿಗೆ ಅನ್ಯಾಯವಾಗುತ್ತಲೇ ಇದೆ.
ಸರೋಜಿನಿ ಮಹಿಷಿ ವರದಿ ಅನುಸಾರ ಕನ್ನಡಿಗರಿಗೆ ಎ ದರ್ಜೆ ಹುದ್ದೆಗಳಲ್ಲಿ ಶೇಕಡ 60 ರಷ್ಟು ಮೀಸಲಾತಿ ಸಿಗಬೇಕು. ಅದೇ ರೀತಿ ಶೇಕಡ 80 ರಷ್ಟು ಬಿ ದರ್ಜೆ, ಸಿ ಮತ್ತು ಡಿ ದರ್ಜೆಯ ಹುದ್ದೆಗಳಿಗೂ ಶೇಕಡ ನೂರರಷ್ಟು ಹುದ್ದೆಗಳನ್ನು ನೀಡಬೇಕೆಂದು ಅಧಿಸೂಚನೆ ಹೊರಡಿಸಿದ್ದರೂ ಅದು ಪಾಲನೆಯಾಗಿಲ್ಲ. ಕನ್ನಡಿಗರಿಗೆ ಉದ್ಯೋಗ ಭಾಗ್ಯ ಸಿಗುತ್ತಿಲ್ಲ.
ಈ ನಿಟ್ಟಿನಲ್ಲಿ ಉದ್ಯೋಗದಲ್ಲಿ ಕನ್ನಡಿಗರಿಗೆ ಮೀಸಲಾತಿ ಕಲ್ಪಿಸಲು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಸರ್ಕಾರದ ಮೇಲೆ ಒತ್ತಡ ಹೇರಬೇಕು. ಅದೇ ರೀತಿ ಕನ್ನಡ ಸಾಹಿತ್ಯ ಸಮ್ಮೇಳನಗಳು ಕೇವಲ ಮೂರು ದಿನಕ್ಕಷ್ಟೇ ಸೀಮಿತವಾಗದೆ ಕನ್ನಡಿಗರಿಗೆ ನ್ಯಾಯ ಒದಗಿಸುವ ವೇದಿಕೆಯಾಗಬೇಕು.
ಮೂರು ದಿನಗಳ ಅಕ್ಷರ ಜಾತ್ರೆಯಲ್ಲಿ ಸಾವಿರಾರು ಜನರು ಪಾಲ್ಗೊಂಡು, ಚರ್ಚಾ ಗೋಷ್ಠಿ, ಕವಿ ಗೋಷ್ಠಿ, ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಮಾಡಿ ಸಮಾರೋಪ ಸಮಾರಂಭ ದಿನದಂದು ಕೆಲವು ನಿರ್ಣಯಗಳನ್ನು ಅಂಗೀಕರಿಸಿ ಸಮ್ಮೇಳನ ಮುಕ್ತಾಯಗೊಳಿಸಲಾಗುತ್ತಿದೆ. ಇಂತಹ ಸಮ್ಮೇಳನಗಳಲ್ಲಿ ಕೈಗೊಂಡ ನಿರ್ಣಯಗಳು ಯಾವುದೂ ಜಾರಿಗೆ ಬಂದಿಲ್ಲ. ಇದು ಅನುಷ್ಠಾನಗೊಳ್ಳದಿದ್ದರೆ ಅಖಿಲ ಭಾರತ ಸಾಹಿತ್ಯ ಸಮ್ಮೇಳನ ನಡೆಸುವ ಔಚಿತ್ಯವೇನು ಎಂಬ ಪ್ರಶ್ನೆ ಕನ್ನಡಿಗರನ್ನು ಕಾಡುತ್ತಿದೆ.
ಗಡಿ, ನಾಡು, ನುಡಿ ರಕ್ಷಣೆಗಾಗಿ ಸದಾ ಬದ್ದವೆಂದು ಎಲ್ಲಾ ಸರ್ಕಾರಗಳು ಹೇಳಿಕೊಳ್ಳುತ್ತಲೇ ಬರುತ್ತಿವೆ. ಒಂದೆಡೆ ಪ್ರತ್ಯೇಕ ರಾಜ್ಯದ ಕೂಗು ಕೇಳಿ ಬರುತ್ತಿದೆ. ಇದು ನಿಜಕ್ಕೂ ಆತಂಕಕಾರಿ ಬೆಳವಣಿಗೆಯಾಗಿದೆ. ಈ ಎಲ್ಲ ಅಂಶಗಳನ್ನು ಮನಗಂಡು ಸರ್ಕಾರ ಕನ್ನಡವನ್ನು ಆಡಳಿತ ಭಾಷೆಯನ್ನಾಗಿ ಮಾಡಿ, ಉದ್ಯೋಗ ಮೀಸಲಾತಿಯಲ್ಲಿ ಕನ್ನಡಿಗರಿಗೆ ಆದ್ಯತೆ ನೀಡಿದಾಗ ಮಾತ್ರ ಇಂತಹ ಸಮ್ಮೇಳನಗಳಿಗೆ ಒಂದು ಅರ್ಥ ಬರುತ್ತದೆ. ಇಲ್ಲದಿದ್ದರೆ ಕನ್ನಡಿಗರು ಇನ್ನಷ್ಟು ತುಳಿತಕ್ಕೊಳಗಾಗುವ ಕಾಲ ದೂರವಿಲ್ಲ.

Leave a Comment