ಮರಾಠಾ ಮಾದರಿ ಮೀಸಲಾತಿಗೆ ಆಗ್ರಹ ಪ್ರತ್ಯೇಕ ಲಿಂಗಾಯತಧರ್ಮ ಶಿಫಾರಸ್ಸು ವಿರೋಧಿಸಿ ರ್ಯಾಲಿ 8 ರಂದು

ಕಲಬುರಗಿ ಡಿ6: ಪ್ರತ್ಯೇಕ ಲಿಂಗಾಯತಧರ್ಮ ಶಿಫಾರಸ್ಸು ತಿರಸ್ಕರಿಸಿ, ಆರ್ಥಿಕವಾಗಿ ಹಿಂದುಳಿದ ವೀರಶೈವ ಲಿಂಗಾಯತರಿಗೆ ಮಹಾರಾಷ್ಟ್ರದಲ್ಲಿ ಇತ್ತೀಚಿಗೆ ಮರಾಠಾ ಬಾಂಧವರಿಗೆ ನೀಡಿದ ಮರಾಠಾ ಮಾದರಿಯ ಮೀಸಲಾತಿ ಸೌಲಭ್ಯಕ್ಕೆ ಆಗ್ರಹಿಸಿ ಡಿಸೆಂಬರ್ 8 ರಂದು ಬೃಹತ್ ರ್ಯಾಲಿ ನಡೆಸಲಾಗುವದು ಎಂದು ವೀರಶೈವ ಲಿಂಗಾಯತ ಸ್ವಾಭಿಮಾನಿಗಳ ಬಳಗದ ಅಧ್ಯಕ್ಷರಾದ ಎಂ.ಎಸ್ ಪಾಟೀಲ ನರಿಬೋಳ, ಮತ್ತು ಮಹಿಳಾ ಘಟಕದ ಅಧ್ಯಕ್ಷರಾದ ದಿವ್ಯ ಆರ್ ಹಾಗರಗಿ ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
8 ರಂದು ಬೆಳಿಗ್ಗೆ 11 ಗಂಟೆಗೆ ಜಗತ್ ವೃತ್ತದಿಂದ ಸರದಾರ ವಲ್ಲಭಬಾಯಿ ಪಟೇಲ ವೃತ್ತದ ಮಾರ್ಗವಾಗಿ ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಿ ಜಿಲ್ಲಾಡಳಿತದ ಮೂಲಕ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಮನವಿ ಸಲ್ಲಿಸಲಾಗುವದು. ರ್ಯಾಲಿಯಲ್ಲಿ ಸುಮಾರು 100 ಮಠಗಳ ಮಠಾಧೀಶರು ಪಾಲ್ಗೊಳ್ಳವರು. ಕಲಬುರಗಿ ಜಿಲ್ಲೆ ಸೇರಿದಂತೆ ನೆರೆಯ ಜಿಲ್ಲೆಗಳ ಅನೇಕ ವೀರಶೈವ ಲಿಂಗಾಯತ ಧರ್ಮಾಭಿಮಾನಿಗಳು ಭಾಗವಹಿಸುವರು ಎಂದರು
ಸದಾನಂದಗೌಡರ ಸ್ಪಷ್ಟನೆಗೆ ಆಗ್ರಹ:
ದೆಹಲಿಯಲ್ಲಿ ಡಿಸೆಂಬರ್ 10 ರಂದು ಮಾತೆ ಮಾಹಾದೇವಿಯವರು ಆಯೋಜಿಸಿದ ಪ್ರತ್ಯೇಕ ಲಿಂಗಾಯತ ಧರ್ಮ ರ್ಯಾಲಿಯನ್ನು ಕೇಂದ್ರ ಸಚಿವ ಸದಾನಂದಗೌಡರು ಉದ್ಘಾಟಿಸಲು ಮುಂದಾಗಿದ್ದು ಖಂಡನೀಯ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಹಾ ಮತ್ತು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಲಿಂಗಾಯತ ವೀರಶೈವಧರ್ಮ ಬೇರೆ ಅಲ್ಲ ಅಂತ ಸ್ಪಷ್ಟ ಅಭಿಪ್ರಾಯ ಹೊಂದಿದ್ದಾರೆ, ಬಿಜೆಪಿ ರಾಜ್ಯಾಧ್ಯಕ್ಷ, ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ಅ.ಭಾ ವೀರಶೈವ ಮಹಾಸಭಾ ತೆಗೆದುಕೊಳ್ಳುವ ನಿರ್ಧಾರಕ್ಕೆ ನಾವು ಬದ್ಧ ಎಂಬ ಸ್ಪಷ್ಟ ನಿಲುವು ಹೊಂದಿದ್ದಾರೆ
ಡಿ.ಕೆ ಶಿವಕುಮಾರ ಸೇರಿದಂತೆ ಕೆಲವು ಕಾಂಗ್ರೆಸ್ ಪ್ರಮುಖರು ಪ್ರತ್ಯೇಕ ಧರ್ಮ ಹೋರಾಟಕ್ಕೆ ಪಕ್ಷ ಬೆಂಬಲಿಸಬಾರದಿತ್ತು ಎಂದು ಹೇಳಿದ್ದಾರೆ. ಆದರೆ ಕೇಂದ್ರ ಸಚಿವರಾಗಿರುವ ಸದಾನಂದಗೌಡರು ಪ್ರತ್ಯೇಕ ಲಿಂಗಾಯತ ಧರ್ಮ ರ್ಯಾಲಿ ಉದ್ಘಾಟನೆಗೆ ಹೊರಟ ಬಗ್ಗೆ ಸ್ಪಷ್ಟೀಕರಣ ನೀಡಬೇಕು. ಇಲ್ಲದಿದ್ದರೆ ಬೆಂಗಳೂರಿನ ಮಲ್ಲೇಶ್ವರಂ ರಾಜ್ಯ ಬಿಜೆಪಿ ಕಚೇರಿ ಎದುರು ಉಪವಾಸ ಸತ್ಯಾಗ್ರಹ ನಡೆಸಲಾಗುವದು ಎಂದು ಎಚ್ಚರಿಸಿದರು.
ಸುದ್ದಿಗೋಷ್ಠಿಯಲ್ಲಿ ಧರ್ಮಪ್ರಕಾಶ ಪಾಟೀಲ,ಮಚ್ಚೇಂದ್ರನಾಥ ಮುಲಗೆ,ಶಿವಶರಣಪ್ಪ ಸಾಹು ಸಿರಿ, ವೀರಣ್ಣ ಹೊನಶೆಟ್ಟಿ,ಶ್ರೀಕಾಂತ ನರೋಣಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Leave a Comment