ಮರಳು ಗಣಿಗಾರಿಕೆಗೆ ಕಡಿವಾಣಕ್ಕೆ ಆಗ್ರಹ

ಹುಳಿಯಾರು, ಸೆ. ೧೧- ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಅಂಕಸಂದ್ರದಿಂದ ಬೋರನಕಣಿವೆ ಜಲಾಶಯಕ್ಕೆ ಹೋಗುವ ಹಳ್ಳದಲ್ಲಿ ಮರಳು ಗಣಿಗಾರಿಕೆ ವಿಪರೀತ ಹೆಚ್ಚಾಗಿದ್ದು ಜನಪ್ರತಿನಿಧಿಗಳು, ಅಧಿಕಾರಿಗಳು ಇದಕ್ಕೆ ಕಡಿವಾಣ ಹಾಕುವಂತೆ ಜಯಕರ್ನಾಟಕ ಹುಳಿಯಾರು ಹೋಬಳಿ ಅಧ್ಯಕ್ಷ ಮೋಹನ್‌ಕುಮಾರ್ ರೈ ಆಗ್ರಹಿಸಿದ್ದಾರೆ.

ಕಳೆದ ಅನೇಕ ವರ್ಷಗಳಿಂದ ಅಕ್ರಮ ಮರಳು ಗಣಿಗಾರಿಕೆ ಯತೇಚ್ಛವಾಗಿ ನಡೆಯುತ್ತಿದೆ. ಕೆರೆಯಲ್ಲಿ ಎಲ್ಲೆಂದರಲ್ಲಿ ಬೇಕಾಬಿಟ್ಟಿ ಗುಂಡಿತೋಡಿ ಮರಳು ದೋಚಿದ್ದಾರೆ. ಹಗಲು ಹೊತ್ತು ಮಣ್ಣು ಸರಿಸಿ ಮರಳಿದ ಪದರ ಪತ್ತೆ ಮಾಡಿ ರಾತ್ರಿ ಹೊತ್ತು ಮರಳು ಸಾಗಣೆ ಮಾಡುತ್ತಿದ್ದಾರೆ. ಗ್ರಾಮದೊಳಗಿನ ರಸ್ತೆಯಲ್ಲಿ ನಿತ್ಯ ರಾತ್ರಿ ಮರಳು ಸಾಗಣೆ ಮಾಡುವ ಟ್ರ್ಯಾಕ್ಟರ್, ಲಾರಿಗಳ ಓಡಾಟ ಹೆಚ್ಚಾಗಿದೆ ಎಂದು ಆರೋಪಿಸುತ್ತಾರೆ.

ಕೆಲ ಅಧಿಕಾರಿಗಳು ಇದಕ್ಕೆ ಸಹಕಾರ ನೀಡುತ್ತಿರುವುದು ಸಾರ್ವಜನಿಕರ ನಡುವೆ ಗುಟ್ಟಾಗಿ ಉಳಿದಿಲ್ಲ. ಸ್ಥಳೀಯರ ಬಳಕೆಗೆ ಮರಳು ಸಿಗುತ್ತಿಲ್ಲ. ವಸತಿ ಯೋಜನೆ, ಶೌಚಾಲಯ ನಿರ್ಮಾಣ, ದನದ ಕೊಟ್ಟಿಗೆ ನಿರ್ಮಾಣ, ಸಿಸ್ಟನ್‍ಗಳ ನಿರ್ಮಾಣಕ್ಕೆ ಮರಳಿನ ಬೇಡಿಕೆ ಹೆಚ್ಚಿದೆ. ಸ್ಥಳೀಯ ಕೆರೆಯಿಂದ ಸ್ಥಳೀಯರಿಗೆ ಮರಳು ಸಿಗದಂತಾಗಿದ್ದು ಜೆಲ್ಲಿ ಪೌಡರ್ ಬಳಸಿ ಮನೆ ಕಟ್ಟಿಕೊಳ್ಳುವಂತಾಗಿದೆ.

ಸುಮಾರು ವರ್ಷಗಳಿಂದ ಸರಿಯಾಗಿ ಮಳೆಯಾಗದೆ ಹಳ್ಳ ಹಾಗೂ ಕೆರೆಗಳು ಸಂಪೂರ್ಣ ಬರಿದಾಗಿದೆ. ಹಳ್ಳ ಮತ್ತು ಕೆರೆಯಿಂದ ಸಾವಿರಾರು ಲೋಡ್ ಮರಳು ಈಗಾಗಲೇ ಸಾಗಿಸಲಾಗಿದೆ. ಈ ಕುರಿತು ತಾಲ್ಲೂಕು ಮಟ್ಟದ ಅಧಿಕಾರಿಗಳಿಗೆ ದೂರು ನೀಡಿದರೂ, ಸೋಷಿಯಲ್ ಮೀಡಿಯಾದಲ್ಲಿ ಸುದ್ದಿ ಬಂದರೂ ಕ್ರಮ ಕೈಗೊಂಡಿಲ್ಲ. ತಾಲ್ಲೂಕು ಆಡಳಿತ ಮೌನ ವಹಿಸಿರುವುದರಿಂದ ಮರಳು ದಂಧೆ ಎಗ್ಗಿಲ್ಲದೆ ನಡೆಯುತ್ತಿದೆ ಎಂದರು.

ಹಳ್ಳದ ಆಸುಪಾಸಿನ ಜಮೀನುಗಳಲ್ಲಿ ನೂರಾರು ಕೊಳವೆ ಬಾವಿಗಳಿವೆ. ಅಡಕೆ, ತೆಂಗಿನ ತೋಟಗಳಿವೆ. ಈಗ ಜಮೀನುಗಳಲ್ಲಿನ ಕೊಳವೆ ಬಾವಿಗಳ ಅಂತರ್ಜಲ ಕುಸಿಯುತ್ತಿದೆ. ಸುಮಾರು 800 ಅಡಿ ಆಳದವರೆಗೆ ಕೊರೆದರೂ ನೀರು ಸಿಗುತ್ತಿಲ್ಲ. ತೋಟಗಳು ಒಣಗಲು ಹಾಗೂ ಅಂತರ್ಜಲ ಕುಸಿಯಲು ಮರಳುದಂಧೆ ಕಾರಣವಾಗಿದೆ. ಇನ್ನಾದರೂ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

Leave a Comment